ವೃದ್ಧಾಪ್ಯ ವೇತನಕ್ಕಾಗಿ 2 ಕಿ. ಮೀ. ನಡೆದುಕೊಂಡು ಬಂದ ಅಜ್ಜಿ
ಗದಗ, ಮೇ 31; ಕೋವಿಡ್ ಹರಡುವಿಕೆ ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಹಲವು ಜನರಿಗೆ ಹಣಕಾಸಿನ ಸಂಕಷ್ಟ ಎದುರಾಗಿದೆ. ಇದರ ಮಧ್ಯೆಯೇ ಜನರು ಬದುಕು ನಡೆಸುತ್ತಿದ್ದಾರೆ. ಅಜ್ಜಿಯೊಬ್ಬರು ವೃದ್ಧಾಪ್ಯ ವೇತನಕ್ಕಾಗಿ 2 ಕಿ. ಮೀ. ನಡೆದುಕೊಂಡು ಬಂದ ಘಟನೆ ನಡೆದಿದೆ.
Recommended Video
ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಯಲ್ಲವ್ವ ಭಜಂತ್ರಿ ಎಂಬ ಅಜ್ಜಿ ವೃದ್ಧಾಪ್ಯ ವೇತನ ಪಡೆಯಲು ಅಂಚೆ ಕಚೇರಿಗೆ ಆಗಮಿಸಿದ್ದರು. ಲಾಕ್‌ಡೌನ್ ಪರಿಣಾಮ ಯಾವುದೇ ವಾಹನಗಳ ವ್ಯವಸ್ಥೆ ಇಲ್ಲದ ಕಾರಣ ನಡೆದುಕೊಂಡೇ ಬಂದಿದ್ದಾರೆ. ಆದರೆ ಹಣ ಸಿಗದೆ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.
ಗದಗ ನಗರದ ಹಳೇ ಡಿಸಿ ಆಫೀಸ್ ಸರ್ಕಲ್ ಬಳಿ ನಡೆದುಕೊಂಡು ಬಂದ ಯಲ್ಲವ್ವ ಭಜಂತ್ರಿಯನ್ನು ಪೊಲೀಸರು ವಿಚಾರಿಸಿದ್ದಾರೆ. ಆಗ ಅಜ್ಜಿ ವೃದ್ಧಾಪ್ಯ ವೇತನ ಪಡೆಯಲು ಬಂದಿದ್ದು ತಿಳಿದುಬಂದಿದೆ.

ಅಜ್ಜಿಯ ಜೊತೆ ಮಾತುಕತೆ ನಡೆಸಿದ ಪೊಲೀಸರು ಅಂಚೆ ಕಚೇರಿ ಬಂದ್ ಆಗಿದೆ. ಈಗ ಅವು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಾಪಸ್ ಕಳಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಸದ್ಯ 5 ದಿನಗಳ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.
ಕೈಯಲ್ಲಿ ಹಣ ಇಲ್ಲದ ಕಾರಣ ಭಜಂತ್ರಿ ನಗರದಿಂದ ಅಜ್ಜಿ ಯಲ್ಲವ್ವ ಭಜಂತ್ರಿ ನಡೆದುಕೊಂಡು ಅಂಚೆ ಕಚೇರಿಗೆ ಬಂದಿದ್ದರು. ಕಿವಿಯೂ ಸರಿಯಾಗಿ ಕೇಳದ ಅಜ್ಜಿ ಅಂಚೆ ಕಚೇರಿ ಮುಚ್ಚಿದೆ ಎಂದು ತಿಳಿದು ಕಣ್ಣೀರಿಟ್ಟರು, ಪೊಲೀಸರು ಆಕೆಯನ್ನು ವಾಪಸ್ ಕಳಿಸಿದರು.












Click it and Unblock the Notifications