ಚುನಾವಣೆಗೂ ಮುನ್ನ ಪಂಚಮಸಾಲಿ ಮೀಸಲಾತಿ ಘೋಷಿಸಬೇಕು: ವಚನಾನಂದ ಸ್ವಾಮಿಜಿ ಆಗ್ರಹ
ಗದಗ, ಅಕ್ಟೋಬರ್ 20: ''ರಾಜ್ಯ ಸರಕಾರದ ಒಳಗಿರುವ 17 ಜನ ಶಾಸಕರು ಪಂಚಮಸಾಲಿ ಮೀಸಲಾತಿಗೆ ಪ್ರಯತ್ನ ನಡೆಸುತ್ತಿದ್ದಾರೆ, ನಾವು ಹೊರಗಡೆ ಇದ್ದು, ಮೀಸಲಾತಿಗೆ ಪ್ರಯತ್ನಿಸುತ್ತಿದ್ದೇವೆ'' ಎಂದು ಗದಗದಲ್ಲಿ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ಗದಗದಲ್ಲಿ ಗುರುವಾರ ಮಾತನಾಡಿದ ವಚನಾನಂದ ಸ್ವಾಮೀಜಿ, ಪೀಠಕ್ಕೆ ಬಂದು ನಾಲ್ಕು ವರ್ಷ ಆಗಿದೆ, ಎರಡು ವರ್ಷ ಕೋವಿಡ್‌ನಲ್ಲಿ ಹೋಗಿದೆ. ಹತ್ತಿರದಲ್ಲಿರುವ ಗದಗ ಜಿಲ್ಲೆಯಾದ್ಯಂತ ಸಂಚಾರ ಮಾಡಿ ಜನಜಾಗೃತಿ ಮಾಡುತ್ತಿದ್ದೇನೆ. ಚುನಾವಣೆಗೂ ಮುನ್ನ ಮೀಸಲಾತಿ ಪ್ರಕಟಿಸದಿದ್ದರೆ ಆ ಸಮಯದಲ್ಲಿ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಮತ್ತೊಂದು ಕಡೆ ಮೀಸಲಾತಿಗಾಗಿ ಜಯಮೃತ್ಯುಂಜಯ ಸ್ವಾಮಿಗಳು ಕೂಡ ಹೋರಾಟ ಮಾಡುತ್ತಿರುವ ಬಗ್ಗೆ ಮಾತನಾಡಿ, ನಮ್ಮಿಬ್ಬರ ದಾರಿ ಬೇರೆ ಇರಬಹುದು. ಉದ್ದೇಶ ಒಂದೆ ಆಗಿದೆ. ಗಂಗಾನದಿ ಗಂಗೋತ್ರಿಯಲ್ಲಿ ಉದ್ಭವಿಸುತ್ತದೆ. ಯಮುನಾ ನದಿ ಯಮನೋತ್ರಿಯಲ್ಲಿ ಉದ್ಭವಿಸುತ್ತವೆ, ಆದರೆ ಪ್ರಯಾಗರಾಜದಲ್ಲಿ ಎರಡು ನದಿಗಳು ಸೇರೇ ಸೇರುತ್ತವೆ. ಹಾಗಾಗಿ ನಮ್ಮ ಉದ್ದೇಶ ಒಂದೇ ಇದೆ, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದರು.

ನಮ್ಮ ಹೋರಾಟ ಕಾನೂನಾತ್ಮಕವಾಗಿ ನಡೆಯುತ್ತಿದೆ. ಒಂದೂವರೆ ವರ್ಷ ಪಾದಯಾತ್ರೆ ಮುಗಿದ ನಂತರ ಕುಲಶಾಸ್ತ್ರ ಅಧ್ಯಯನಕ್ಕೆ ಆಗ್ರಹಿಸಿದ್ದೆವು. ಮಹಾರಾಷ್ಟ್ರದಲ್ಲಿ ಮರಾಠರಿಗೆ ಕುಲಶಾಸ್ತ್ರ ಅಧ್ಯಯನ ಮಾಡದೇ ಮೀಸಲಾತಿ ಘೋಷಣೆ ಮಾಡಿದರು. ಹೀಗಾಗಿ ಸುಪ್ರೀಂಕೋರ್ಟ್‌ನಲ್ಲಿ ಮೀಸಲಾತಿ ತಿರಸ್ಕಾರಕ್ಕೆ ಒಳಗಾಯಿತು. ಅದಕ್ಕಾಗಿ ನಾವು ಸರಕಾರ ಕುಲಶಾಸ್ತ್ರ ಅಧ್ಯಯನ ಮಾಡಿ ಮೀಸಲಾತಿಗೆ ಹೋರಾಟ ಮಾಡಬೇಕು ಎಂದರು.
ಈಗಾಗಲೇ 18 ಜಿಲ್ಲೆಯಲ್ಲಿ ಅಧ್ಯಯನ ಮುಗಿದಿದೆ. ಮಲೆಗೌಡರು, ದೀಕ್ಷಾ ಲಿಂಗಾಯತರಿಗಾಗೆ ಕಲ್ಯಾಣ ಕರ್ನಾಟಕ, ಮೈಸೂರು ಭಾಗಕ್ಕೆ ಹೋಗಬೇಕು ಎಂದು ಸರಕಾರದವರು ತಿಳಿಸುತ್ತಿದ್ದಾರೆ. ಈ ಬಗ್ಗೆ ಜಯಪ್ರಕಾಶ ಹೆಗಡೆ, ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ್ದೇವೆ. ಸರಕಾರವನ್ನ ಬೈಕೊಂಡು, ಗಡವು ನೀಡಿಕೊಂಡು ಇರುವುದಿಲ್ಲ. ಗಡುವು ಕೊಟ್ಟರೇ ಗಟ್ಟಿತಾಗಿ ನಿಲ್ಲಬೇಕು, ಗಡುವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. 15 ದಿನಕ್ಕೆ ಒಮ್ಮೆ ಗಡುವು ಕೊಡುವುದು ಆಗಬಾರದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಂಚಮಶಾಲಿ ಮೀಸಲಾತಿಗಾಗಿ ಹೋರಾಠ ಮಾಡುತ್ತಿರುವ ಜಯಮೃತ್ಯುಂಜಯ ಸ್ವಾಮೀಜಿಯ ಖಾಸಗಿ ವೀಡಿಯೋ ಇದೆ ಎಂಬ ವದಂತಿ ವಿಚಾರವಾಗಿ ಪ್ರಶ್ನೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ನೀವೇನಿದ್ರು ನಮ್ಮ ಬಗ್ಗೆ ಪ್ರಶ್ನೆಗಳನ್ನು ಕೇಳಿ ಊಹಾಪೋಹಗಳಿಗೆ ಉತ್ತರಿಸಲಾಗುವುದಿಲ್ಲ. ಜಯಮೃತ್ಯುಂಜಯ ಸ್ವಾಮಿಗಳು ಮೀಸಲಾತಿ ಹೋರಾಟಕ್ಕೆ ಕರೆದರೆ ಮಾಧ್ಯಮದವರನ್ನ ಕರೆದು ಹೇಳುತ್ತೇನೆ ಎಂದರು ತಿಳಿಸಿದರು.

ರಾಮ ಮಂದಿರ ಧ್ವಸಗೊಳಿಸಲು ಸಂಚು ರೂಪಿಸಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ "ರಾಷ್ಟ್ರದ ವಿಷಯ ಬಂದಾಗ ರಾಷ್ಟ್ರದ ಜೊತೆಗೆ ಇರುತ್ತೇನೆ. ರಾಷ್ಟ್ರಕ್ಕೆ ಧಕ್ಕೆ ತರುವ ಯಾವುದೇ ಮನಸ್ಸುಗಳನ್ನು ಸಹಿಸಬಾರದು. ಬಲಿಷ್ಠ ಪ್ರಧಾನಿ ಕೈಯಲ್ಲಿ ಭಾರತ ಇದೆ. ಕಳೆದ ಎಂಟು ವರ್ಷದಲ್ಲಿ ಭಾರತ ಬಹಳಷ್ಟು ಬಲಿಷ್ಠವಾಗಿದೆ. ಮೋದಿ ಪ್ರಧಾನಿಯಾದ ನಂತರ ವಿದೇಶಕ್ಕೆ ಹೋದಾಗ ಅಲ್ಲಿ ಸಿಗುವ ಗೌರವ ಬೇರೆ ಇದೆ. ಯಾವುದೇ ಸಂಚಿಗೆ ಭಾರತ ಸರ್ಕಾರ ಸುಮ್ಮನೆ ಕೂರುವುದಿಲ್ಲ, ನಮ್ಮ ದೇಶದ ಎನ್‌ಐಎ ತುಂಬ ಬಲಿಷ್ಠವಾಗಿದೆ ಎಂದು ತಿಳಿಸಿದರು.
ಕಾಂತಾರ ಸಿನಿಮಾ ವಿಷಯದಲ್ಲಿ ನಟ ಚೇತನ್ ವಿವಾದ ಎಬ್ಬಿಸುತ್ತಿರುವ ವಿಚಾರವಾಗಿ ಮಾತನಾಡಿ, ಆ ಚಿತ್ರವನ್ನು ನಾನು ನೋಡಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಹೊಗಳಿಕೆ ಕೇಳಿ ಬರುತ್ತಿರುವುದನ್ನು ನೋಡಿದ್ದೇನೆ. ಹಿಂದೂ ಸಂಸ್ಕೃತಿಯನ್ನ ಎತ್ತಿ ಹಿಡಿದಿದ್ದರಿಂದ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಜನರ ಭಾವನೆಗೆ ಗೌರವ ಕೊಡಬೇಕು. ನಮ್ಮ ಸಂಸ್ಕೃತಿಯನ್ನು ಟೀಕೆ ಮಾಡಬಾರದು. ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳೇ. ಹಿಂದೂ ಎನ್ನುವುದು ದೊಡ್ಡ ಸನಾತನ ಪರಂಪರೆ. ವಿಶಾಲ ಆಲದ ಮರ. ಇಲ್ಲಿಯ ಮತ ಪಂಥಗಳು ಆಲದ ಮರದ ರೆಂಬೆ, ಟೊಂಗೆ ಇದ್ದಹಾಗೆ. ನಾವು ಹಾಕುವ ರುದ್ರಾಕ್ಷಿ, ವಿಭೂತಿ ಎಲ್ಲವೂ ಸನಾತನ ಸಂಸ್ಕೃತಿಯ ಭಾಗ. ನಮ್ಮ ಸಂಸ್ಕೃತಿ ಪರಂಪರೆ ಬೆಳಸಬೇಕು. ಟೀಕೆ ಟಿಪ್ಪಣಿ ಮಾಡುವವರನ್ನು ಉದಾಸೀನ ಮಾಡಬೇಕು. ಟೀಕೆ ಮಾಡುವವರು ಆಕಾಶಕ್ಕೆ ಉಗುಳಿದಂತೆ ಅದು ವಾಪಸ್ ಅವರ ಮೇಲೆ ಬೀಳುತ್ತದೆ ಎಂದರು.












Click it and Unblock the Notifications