ಸರ್ಕಾರಿ ವೈದ್ಯರ ಮುಷ್ಕರ: ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ
ಸರ್ಕಾರಿ ನೌಕರರ ಮುಷ್ಕರದ ಬಗ್ಗೆ ತಿಳಿಯದೇ ಜಿಲ್ಲೆಯ ಹಲವು ಗ್ರಾಮಗಳಿಂದ ನೂರಾರು ರೋಗಿಗಳು ಗದಗದ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದು, ಚಿಕಿತ್ಸೆ ನೀಡದೇ ಮುಷ್ಕರ ನಡೆಸುತ್ತಿರುವ ಆಸ್ಪತ್ರೆ ಸಿಬ್ಬಂದಿ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಗದಗ, ಮಾರ್ಚ್ 1: 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರ ಅನಿರ್ಧಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡುವಂತಾಗಿದೆ. ಮುಷ್ಕರದ ಬಗ್ಗೆ ಗೊತ್ತಿರದ ನೂರಾರು ರೋಗಿಗಳು ಗದಗದ ಜಿಮ್ಸ್ ಆಸ್ಪತ್ರೆಗೆ ಬಂದಿದ್ದು, ವೈದ್ಯರ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರ ಮುಷ್ಕರದ ಬಗ್ಗೆ ತಿಳಿಯದೇ ಜಿಲ್ಲೆಯ ಹಲವು ಗ್ರಾಮಗಳಿಂದ ನೂರಾರು ರೋಗಿಗಳು ಗದಗದ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದು, ಒಪಿಡಿ ವಿಭಾಗದಲ್ಲಿ ಯಾರೂ ಚೀಟಿ ಮಾಡುತ್ತಿಲ್ಲ. ಹಿರಿಯ ವೈದ್ಯರು ಹೇಳಿದರೆ ಮಾತ್ರ ಚೀಟಿ ಮಾಡಲಾಗುತ್ತದೆ. ಇಲ್ಲದಿದ್ದರೆ ಇಲ್ಲವೆಂದು ಒಪಿಡಿ ವಿಭಾಗದಲ್ಲಿರುವ ಸಿಬ್ಬಂದಿ ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ ಎಂದು ರೋಗಿಗಳು ಅಸಮಾಧಾನಗೊಂಡಿದ್ದಾರೆ.

ಮುಷ್ಕರದ ಬಗ್ಗೆ ಗೊತ್ತಿರದ ನೂರಾರು ರೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ. ಹೀಗೆ ಇದ್ದಕ್ಕಿದ್ದಂತೆ ಚೀಟಿ ಮಾಡುವುದಿಲ್ಲವೆಂದು ಹೇಳಿದರೆ ಅವರು ಎಲ್ಲಿಗೆ ಹೋಗಬೇಕು ಎಂದು ಜಿಲ್ಲೆಯ ಬೆಳ್ಳಟ್ಟಿಯಿಂದ ಬಂದ ರೋಗಿ ಅನಿಲ್ ಕುಮಾರ್ ಎಂಬ ಯುವಕ ಹಿರಿಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾವು ಕಣ್ಣಿನ ಚಿಕಿತ್ಸೆಗೆಂದು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯಿಂದ ಈ ಆಸ್ಪತ್ರೆಗೆ ಬಂದಿದ್ದೇವೆ. ಒಪಿಡಿ ವಿಭಾಗದಲ್ಲಿ ಯಾರೂ ಚೀಟಿ ಮಾಡುತ್ತಿಲ್ಲ. ನೀವು ಹೇಳಿದರೆ ಚೀಟಿ ಮಾಡಲು ಒಪ್ಪಿದ್ದಾರೆ. ಚಿಕಿತ್ಸೆ ನೀಡುವ ಬಗ್ಗೆ ಅಥವಾ ನೀಡದ ಬಗ್ಗೆ ಜನರಿಗೆ ತಿಳಿಯುವಂತೆ ಸ್ಪಷ್ಟವಾಗಿ ಹೇಳಿ ಎಂದು ಜಿಮ್ಸ್ ಆಸ್ಪತ್ರೆಯ ಎಂಎಸ್ ಅವರನ್ನು ಯುವಕ ಅನಿಲ್ ಕುಮಾರ್ ಕೇಳಿಕೊಂಡಿದ್ದಾರೆ.
ಮುಷ್ಕರದ ಬಗ್ಗೆ ರೋಗಿಗಳಿಗೆ ಮನವರಿಕೆ ಮಾಡದ ಆಸ್ಪತ್ರೆಯ ಎಂಎಸ್ ಅವರು ಈ ಬಗ್ಗೆ ಮಾತನಾಡದೇ ಆಸ್ಪತ್ರೆಯಿಂದ ತೆರಳಿದ್ದಾರೆ. ಬೇರೆ ದಾರಿ ಕಾಣದ ಅನಿಲ್, ವೈದ್ಯರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ವೈದ್ಯರು ಹಾಜರಿದ್ದರೂ ಚೀಟಿ ಮಾಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಮುಷ್ಕರ ಇರುವ ಬಗ್ಗೆ ನಮಗೆ ಗೊತ್ತಿಲ್ಲ. ದಿಢೀರ್ ಮುಷ್ಕರದಿಂದ ದೂರದಿಂದ ಬಂದಿರುವ ನಮಗೆ ಕಷ್ಟವಾಗುತ್ತಿದೆ. ನಾವು ಕಟ್ಟುವ ತೆರಿಗೆಯಿಂದಲೇ ನಿಮಗೆ ಸಂಬಳ ಕೊಡಲಾಗುತ್ತಿದೆ. ನಮಗೆ ಉತ್ತರ ಕೊಟ್ಟು ಹೋಗಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications