ಕಳ್ಳತನಕ್ಕೆ ಕಡಿವಾಣ ಹಾಕಲು ಹೊಸ ತಂತ್ರಜ್ಞಾನ: ಗದಗ ಜಿಲ್ಲೆಯ ನೂತನ ಎಸ್‌ಪಿಗೆ ಭಾರಿ ಮೆಚ್ಚುಗೆ
ಗದಗ, ಮಾರ್ಚ್, 31: ಗದಗ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿ.ಎಸ್. ನೇಮಗೌಡ ಅಧಿಕಾರ ಸ್ವೀಕರಿಸಿದ ನಂತರ ಒಂದಲ್ಲಾ ಒಂದು ವಿನೂತನ ಕೆಲಸ ಮಾಡುವ ಮೂಲಕ ಇಲ್ಲಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಹೊಸ ಸೇವೆಯೊಂದನ್ನು ಗದಗ ಜನರಿಗೆ ಜಾರಿಗೆ ತರುವುದರೊಂದಿಗೆ, ಅವರು ಮತ್ತಷ್ಟು ಜನಸಂಪರ್ಕಕ್ಕೆ ಹತ್ತಿರ ಆಗಿದ್ದಾರೆ.
ಇತ್ತೀಚಿಗೆ ನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವುದು ಹೆಚ್ಚಾಗಿದೆ. ಅಂತಹ ಮನೆಗಳ ಮೇಲೆ ಪೊಲೀಸರು ನಿಗಾ ವಹಿಸಲು ಅನುಕೂಲ ಆಗಲೆಂದು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದಾರೆ. ಇದು ಪೊಲೀಸರ ಹಾಗೂ ಸಾರ್ವಜನಿಕ ಸಂಪರ್ಕ ಕೊಂಡಿಯಾಗಿ ಅತ್ಯಂತ ತ್ವರಿತಗತಿಯಲ್ಲಿ ಕೆಲಸ ಮಾಡಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಅವರ ಜನರಿಗೆ ಮನವಿ ಮಾಡಿದ್ದಾರೆ.

ಕಳ್ಳತನಕ್ಕೆ ಕಡಿವಾಣ ಹಾಕಲು ಹೊಸ ತಂತ್ರಜ್ಞಾನ
ಪೊಲೀಸರಿಗೆ ಕೀಲಿ ಹಾಕಿದ ಮನೆಗಳ ವಿವರ ದೊರಕುವಂತೆ ಮಾಡಲು ಗದಗ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕರು ಮನೆಯಲ್ಲಿದ್ದು ತಮ್ಮ ಮಾಹಿತಿಯನ್ನು ನೀಡಲು 'ಲಾಕ್ಡ್ ಹೌಸ್ ಮಾನೆಟರಿಂಗ್'ಎಂಬ ತಂತ್ರಾಂಶದಲ್ಲಿ ಬೀಗ ಹಾಕಿದ ಮನೆಗಳ ವಿವರವನ್ನು ಕಲೆ ಹಾಕಬಹುದಾಗಿದೆ.
ಇದರಿಂದ ಪೊಲೀಸರಿಗೆ ಬೀಗ ಹಾಕಿದ ಮನೆಗಳ ವಿವರ ಸುಲಭವಾಗಿ ಸಿಗುತ್ತದೆ. ಹಾಗೂ ಬೀಗ ಹಾಕಿದ ಮನೆಗಳ ಮೇಲೆ ಸಿಬ್ಬಂದಿಗಳು ಹಗಲು ರಾತ್ರಿ ನಿಗಾ ವಹಿಸಲು ಸಹ ತುಂಬಾ ಅನುಕೂಲ ಆಗಲಿದೆ. ಜನರು ವಾಟ್ಸಾಪ್ ಸಂಖ್ಯೆ 9480021100 ಇದಕ್ಕೆ ಹೆಲ್ಪ್ (Help) ಎಂಬ ಸಂದೇಶವನ್ನು ಕಳುಹಿಸಬೇಕು. ಅಲ್ಲಿ ಲಾಕ್ಡ್ ಹೌಸ್ ಲಿಂಕ್ ಬರುತ್ತದೆ. ಅದರಲ್ಲಿ ಉಪಯೋಗದಾರರು ಕೀಲಿ ಹಾಕಿದ ಮನೆಗಳ ವಿವರಗಳನ್ನು ಹಾಕಬಹುದು ಎಂದು ಈ ನೂತನ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ಇಲಾಖೆಯ ಈ ವಿನೂತನ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವಾರು ಜನರು ಇಲಾಖೆಯ ಈ ಹೊಸ ಪ್ರಯತ್ನವನ್ನು ಕೊಂಡಾಡಿದ್ದಾರೆ. ಈ ಮೊದಲು ಕಳೆದುಹೋದ ಮೊಬೈಲ್‌ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದನ್ನು ಇತ್ತೀಚಿಗೆ ಜಿಲ್ಲಾ ಪೊಲೀಸರು ಪರಿಚಯ ಮಾಡಿದ್ದರು. ಇದು ಸಾರ್ವಜನಿಕರಿಗೂ ಕೂಡ ತುಂಬಾ ಅನುಕೂಲ ಆಗಿತ್ತು.

ಕಳತನವಾಗಿದ್ದ 295 ಮೊಬೈಲ್‌ಗಳ ಪತ್ತೆ
ಬಳಿಕ ವಿವಿಧಡೆ ಕಳ್ಳತನವಾಗಿದ್ದ ಸುಮಾರು 295 ಮೊಬೈಲ್‌ಗಳನ್ನು ಹೊಸ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವಲ್ಲಿಯೂ ಸಹ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದರು. ಅಲ್ಲದೇ ಅವುಗಳನ್ನು ಪುನಃ ಆಯಾ ಮೊಬೈಲ್ ಮಾಲೀಕರಿಗೆ ಒಪ್ಪಿಸಿದ್ದರು. ಕಳೆದುಕೊಂಡಿದ್ದ ಮೊಬೈಲ್‌ಗಳು ಮತ್ತೆ ತಮ್ಮ ಕೈಸೇರುತ್ತಿದ್ದಂತೆ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ಧನ್ಯವಾದವನ್ನು ಕೂಡ ತಿಳಿಸಿದ್ದಾರೆ.
ಗದಗ ಜಿಲ್ಲೆಯ ಎಸ್‌ಪಿಗೆ ಭಾರಿ ಮೆಚ್ಚುಗೆ
ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನರಿತ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್ ನೇಮಗೌಡ, ವಾಹನ ಸವಾರರಿಗೆ ಅನುಕೂಲ ಆಗುವಂತಹ ಉತ್ತಮ ಕೆಲಸವೊಂದನ್ನು ಮಾಡಿದ್ದಾರೆ. ಅವರ ಈ ಒಂದು ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಸಾಮಾಜಿಕ ಕಳಾಕಳಿ ಕಾರ್ಯ ಯಾವುದು ಅಂತೀರಾ ಇಲ್ಲಿದೆ ನೋಡಿ ವಿವರ.
ನೆರಳು ಕಲ್ಪಿಸಿದ ಪೊಲೀಸರು ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಿಸಿಲಿನ ಬೇಗೆಯಲ್ಲಿ ಒದ್ದಾಡುವ ವಾಹನ ಸವಾರರಿಗೆ ಹಸಿರು ನರ್ಸರಿ ತಾರ್ಪಾಲಿನ್ ಹಾಕಿ ನೆರಳು ಕಲ್ಪಿಸಿಕೊಡುವ ನೂತನ ವ್ಯವಸ್ಥೆ ಮಾಡಿದ್ದು, ಇದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಟ್ರಾಫಿಕ್ ಕಿರಿಕಿರಿ ಮತ್ತು ಬಿಸಿಲಿನಿಂದ ಬೇಸತ್ತ ಜನರಿಗೆ ಇದು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳಲು ಉತ್ತಮ ವ್ಯವಸ್ಥೆಯಾಗಿದೆ. ಎಷ್ಟೇ ಟ್ರಾಫಿಕ್ ಆದರೂ ಈ ಹಸಿರು ನರ್ಸರಿ ತಾರ್ಪಾಲಿನ್ ನೆರಳಿನಲ್ಲಿ ನಿಂತು ಸುಧಾರಿಸಿಕೊಂಡ ಬಳಿಕ ವಾಹನ ಸವಾರರು ಪ್ರಯಾಣವನ್ನು ಮುಂದುವರೆಸುತ್ತಾರೆ.












Click it and Unblock the Notifications