ಕುಷ್ಟಗಿ - ನರಗುಂದ - ಘಟಪ್ರಭಾ ಹೊಸ ರೈಲ್ವೆ ಮಾರ್ಗ: ಕೇಂದ್ರಕ್ಕೆ ಪತ್ರ
ಉತ್ತರ ಕರ್ನಾಟಕದಲ್ಲಿ ರೈಲು ಮಾರ್ಗಗಳ ಕೊರತೆ ಸಾಕಷ್ಟಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ದೇಶಿತ ಅನೇಕ ರೈಲು ಮಾರ್ಗಗಳು ಇನ್ನೂ ಜಾರಿಯಾಗಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ರೈಲ್ವೆ ಸಂಪರ್ಕ ಜಾಲ ಕಡಿಮೆ ಇದೆ. ಈ ಅಂತರವನ್ನು ಕಡಿಮೆ ಮಾಡಲು ರಾಜ್ಯದ ರೈಲು ಯೋಜನೆಗಳ ಅನುಷ್ಠಾನಕ್ಕೆ ಹಿಂದುಳಿದ ಈ ಭಾಗದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನೆರವು ಅಗತ್ಯವಾಗಿದೆ. ಕೂಡಲೇ ಯೋಜನೆ ಆರಂಭಕ್ಕೆ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನಲ್ಲಿ ಬ್ರಿಟಿಷರ ಕಾಲದಲ್ಲಿ ಸಮೀಕ್ಷೆ ಆಗಿದ್ದ ಗದಗ-ವಾಡಿ ರೈಲ್ವೆ ಮಾರ್ಗ ಇತ್ತೀಚಿನ ವರ್ಷಗಳಲ್ಲಿ ಪರಿಷ್ಕೃತಗೊಂಡು ತಳಕಲ್ ನಿಂದ 58 ಕಿ.ಮೀ. ಕುಷ್ಟಗಿವರೆಗೆ ಹೊಸ ರೈಲು ಮಾರ್ಗ ರಚನೆಯಾಗಿದೆ. ಈಗಾಗಲೇ ಕುಷ್ಟಗಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿದ್ದು. ಇದೇ ಮಾರ್ಚ್ ಇಲ್ಲವೇ ಏಪ್ರಿಲ್ ತಿಂಗಳಿನಲ್ಲಿ ಕುಷ್ಟಗಿಯಿಂದ ಹುಬ್ಬಳ್ಳಿವರೆಗೂ ರೈಲ್ವೆ ಸೇವೆ ಆರಂಭಿಸಲು ನೈಋತ್ಯ ರೈಲ್ವೆ ವಲಯ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

ಗದಗ-ವಾಡಿ ರೈಲ್ವೆ ಯೋಜನೆಯ ಪೂರಕವಾಗಿ ಕುಷ್ಟಗಿ ಮೂಲಕ ದರೋಜಿ - ಬಾಗಲಕೋಟೆ
ಆಲಮಟ್ಟಿ-ಚಿತ್ರದುರ್ಗ ನಿಯೋಜಿತ ರೈಲು ಮಾರ್ಗಗಳ ಸಮೀಕ್ಷೆ ಕಾರ್ಯ ಮುಗಿದಿದ್ದು ಡಿಪಿಆರ್ ಹಂತದಲ್ಲಿದೆ. ಕುಷ್ಟಗಿ ತಾಲೂಕಿನ ಹನುಮಸಾಗರ ಮೂಲಕ ಗದಗ-ಕೃಷ್ಣಾವರಂ ಹೊಸ ರೈಲು ಮಾರ್ಗ ಸಮೀಕ್ಷೆ ಆಗಿದ್ದು, ಅನುದಾನ ಬಿಡುಗಡೆ ಬಾಕಿ ಇದೆ. ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಕುಷ್ಟಗಿ-ನರಗುಂದ- ಘಟಪ್ರಭಾ ಹೊಸ ರೈಲು ಮಾರ್ಗ ರಚನೆಗಾಗಿ ಹೋರಾಟ ಆರಂಭಗೊಂಡಿದೆ. ನರಗುಂದ ಭಾಗದಲ್ಲಿ ಮುತ್ಸದ್ದಿರಾಗಿದ್ದ ಎಫ್.ಎಂ. ಹಸಬಿ ಮತ್ತು ಜಗನ್ನಾಥರಾವ್ ಜೋಶಿ ಹೆಸರಿನಲ್ಲಿ ರೈಲ್ವೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಹೋರಾಟ ನಡೆಸಲು ಮುಂದಾಗಿದೆ.
ನರಗುಂದ ಜನತೆ ಕುಷ್ಟಗಿಯಿಂದಲೇ ಹೊಸ ರೈಲು ಮಾರ್ಗದ ಬೇಡಿಕೆ ಸಲುವಾಗಿ ಹೋರಾಟ ಆರಂಭಿಸಿರುವುದು ಕುಷ್ಟಗಿ ತಾಲೂಕಿನ ಜನತೆಯನ್ನು ಪ್ರೇರೇಪಿಸಿದೆ. ನರಗುಂದ ರೈಲ್ವೇ ಹೋರಾಟ ಸಮಿತಿ ಬೆಂಬಲಿಸಿ ಕುಷ್ಟಗಿಯಲ್ಲೂ ರೈಲ್ವೆ ಹೋರಾಟ ಸಮಿತಿ ಅಸ್ತಿತ್ವದಲ್ಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೊಪ್ಪಳದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಹಾಗೂ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.
ಉದ್ದೇಶಿತ ಈ ಹೊಸ ರೈಲ್ವೆ ಮಾರ್ಗ ಕುಷ್ಟಗಿ-ಗಜೇಂದ್ರಗಡ-ರೋಣ-ನರಗುಂದ-ಸವದತ್ತಿ ಶ್ರೀ ಯಲ್ಲಮ್ಮ ಗುಡ್ಡ-ಗೋಕಾಕ್-ಘಟಪ್ರಭಾ ಈ ಪ್ರಮುಖ ನಗರಗಳನ್ನು ಸಂಪರ್ಕಿಸಲಿದೆ. ಈ ಹೊಸ ಮಾರ್ಗದಿಂದ ಕೃಷಿ ತೋಟಗಾರಿಕೆಗೆ ಉತ್ತೇಜನ, ವ್ಯಾಪಾರ ವಹಿವಾಟು, ಪ್ರವಾಸೋದ್ಯಮಕ್ಕೆ ವರದಾನವಾಗಲಿದೆ ಎಂದು ಹೇಳಲಾಗಿದೆ.
ಉದ್ದೇಶಿತ ರೈಲು ಮಾರ್ಗ ಕುಷ್ಟಗಿಯಿಂದ ಘಟಪ್ರಭಾವರೆಗೂ 220 ಕಿ.ಮೀ. ಅಂತರದಲ್ಲಿ ಧಾರ್ಮಿಕ ಕ್ಷೇತ್ರಗಳಾದ ಕುಷ್ಟಗಿ ತಾಲೂಕಿನ ಐತಿಹಾಸಿಕ ಕೋಟಿ ಲಿಂಗಗಳ ಸಮೂಹದ ಶೈವ ಕ್ಷೇತ್ರ ಪುರ, ಚಂದಾಲಿಂಗ, ನೈಸರ್ಗಿಕ ಕಪಿಲತೀರ್ಥ ಜಲಪಾತ, ಗಜೇಂದ್ರಗಡ ತಾಲೂಕಿನ ಶ್ರೀ ಕಾಲಕಾಲೇಶ್ವರ, ರೋಣ ತಾಲೂಕಿನ ಇಟಗಿ ಶ್ರೀ ಭೀಮಾಂಬಿಕ ದೇವಿ, ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ದೇವಿ, ನವಿಲು ತೀರ್ಥ, ಗೊಡಚಿ ಶ್ರೀ ವೀರಭದ್ರೇಶ್ವರ, ಸೊಗಲದ ಶ್ರೀ ಸೋಮೇಶ್ವರ ದೇವಸ್ಥಾನ, ಗೋಕಾಕ್ ಜಲಪಾತ ಹಾಗೂ ಗೊಡಚಿ ಮಲಕ್ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಜೀವಕಳೆ ಸೃಷ್ಟಿಸಲಿದೆ ಎಂದು ಹೇಳಲಾಗಿದೆ.
ಆರ್ಥಿಕ ಶೈಕ್ಷಣಿಕ, ವಾಣಿಜ್ಯ ಹಾಗೂ ಈ ಮಾರ್ಗವಾಗಿ ಸಂಪರ್ಕಿಸುವ ಪ್ರವಾಸಿಗರಿಗೆ ದೂರದ ಪ್ರಯಾಣ ಸುಗಮವಾಗಲಿದೆ. ಈ ಭಾಗದಲ್ಲಿ ಸಿರಿಧಾನ್ಯ ಸೇರಿದಂತೆ ತೊಗರಿ, ಮೆಕ್ಕೆಜೋಳ, ಕಬ್ಬು, ಸೂರ್ಯಕಾಂತಿ, ಹುಣಸೆಹಣ್ಣು, ಬೇವಿನ ಬೀಜ ಸೇರಿದಂತೆ ದಾಳಿಂಬೆ, ಪಪ್ಪಾಯ, ಮಾವು ತೋಟಗಾರಿಕಾ ಉತ್ಪನ್ನಗಳ ಸಾಗಾಟಕ್ಕೆ ಈ ನೂತನ ರೈಲು ಮಾರ್ಗ ಅನಕೂಲ ಕಲ್ಪಿಸಲಿದೆ.
ಕುಷ್ಟಗಿ ತಾಲೂಕಿನ ಜನತೆಯ ಈ ಬೇಡಿಕೆಯನ್ನು ತಕ್ಷಣ ಈಡೇರಿಸುವುದರ ಜೊತೆಗೆ 2025-2026 ರೈಲ್ವೆ ಬಜೆಟ್‌ನಲ್ಲಿ ಈ ರೈಲು ಮಾರ್ಗ ಪರಿಗಣಿಸಿ ಸಮೀಕ್ಷೆ, ಅನುದಾನ ಬಿಡುಗಡೆಗೆ ಸ್ಪಂದಿಸಬೇಕು. ಪ್ರಸ್ತಾವಿತ ಆಲಮಟ್ಟಿ-ಚಿತ್ರದುರ್ಗ, ದರೋಜಿ - ಬಾಗಲಕೋಟೆ ಹಾಗೂ ಕುಷ್ಟಗಿ-ನರಗುಂದ- ಘಟಪ್ರಭಾ ಈ ರೈಲ್ವೆ ಯೋಜನೆಗಳ ಪಿಂಕ್ ಬುಕ್‌ನಲ್ಲಿ ಪ್ರಕಟಿಸಿ ಜಾರಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.












Click it and Unblock the Notifications