ಅವಧಿಗೆ ಮುನ್ನ ಜನನ: 700 ಗ್ರಾಂ ತೂಕವಿದ್ದ ಮಗುವಿಗೆ ಮರುಜನ್ಮ ನೀಡಿದ ಜಿಮ್ಸ್ ವೈದ್ಯರು
ಗದಗ ಜಿಮ್ಸ್ ಆಸ್ಪತ್ರೆ ಅಂದರೆ ಕೇವಲ ಯಡವಟ್ಟು ನಡೆದಿರುವ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು. ಆದರೆ ವೈದ್ಯರು ಮನಸು ಮಾಡಿದರೆ ಅಸಾಧ್ಯವಾದುದನ್ನ ಸಾಧ್ಯ ಮಾಡಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಗದಗ, ಮಾರ್ಚ್ 6: ಆ ಮಗು ಜಗತ್ತು ನೋಡುವ ಮುನ್ನವೇ ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿತ್ತು, ಉಸಿರಾಡಲು ಮಗುವಿಗೆ ಶ್ವಾಸಕೋಶವೇ ಬೆಳೆದಿರಲಿಲ್ಲ, ಜಗತ್ತು ನೋಡಲು ಕಣ್ಣು ತೆರೆದಿರಲಿಲ್ಲ, ಅಮ್ಮನ ಜೋಗುಳ ಕೇಳಲು ಕಿವಿಗಳಿಗೆ ಶಕ್ತಿ ಇರಲಿಲ್ಲ, ದೇಹದ ಯಾವೊಂದು ಭಾಗಗಳೂ ಸಹ ಬೆಳವಣಿಗೆಯಾಗದೇ ಅವಧಿಗೂ ಮುನ್ನ ಹೆರಿಗೆಯಾಗಿ ಪ್ರಾಣಸಂಕಟಕ್ಕೆ ಸಿಲುಕಿತ್ತು.
ಸದ್ಯ ಈ ಮಗುವಿನ ಪಾಲಿಗೆ ಜಿಮ್ಸ್ ವೈದ್ಯರು ದೇವರಾಗಿದ್ದಾರೆ. ಸತತ ಮೂರು ತಿಂಗಳ ಕಾಲ ವೈದ್ಯರು ಶ್ರಮ ಪವಾಡದಂತೆ ಬದಲಾಗಿ ಮಗುವಿಗೊಂದು ಮರು ಜನ್ಮನೀಡಿದ್ದಾರೆ. ಅಮ್ಮನ ಒಡಲಲ್ಲಿ ಕಂದನ ಅಳು ಕೇಳುವಂತೆ ಮಾಡಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆ ಅಂದರೆ ಕೇವಲ ಯಡವಟ್ಟು ನಡೆದಿರುವ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು. ಆದರೆ ವೈದ್ಯರು ಮನಸು ಮಾಡಿದರೆ ಅಸಾಧ್ಯವಾದುದನ್ನ ಸಾಧ್ಯ ಮಾಡಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಈ ಮೂಲಕ ನಿಜಕ್ಕೂ ಪೋಷಕರ ಕಣ್ಣಲ್ಲಿ ದೇವರಂತೆ ಕಾಣಿಸಿದ್ದಾರೆ. ಗದಗ ತಾಲೂಕಿನ ದುಂದೂರು ಗ್ರಾಮದ ರಾಜೇಶ್ವರಿ ಚಿಕ್ಕನಗೌಡ ಎಂಬ ಮಹಿಳೆಗೆ ಗದಗನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವಧಿ ಪೂರ್ಣವಾಗುವ ಮೊದಲು ಹೆರಿಗೆಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಕೇವಲ 24 ವಾರಗಳು ಮಾತ್ರ ದಿನಗಳು ಕಳೆದಿದ್ದರಿಂದ ಕೂಸುಗಳು ಬೆಳವಣಿಗೆಯಾಗಿರಲಿಲ್ಲ. ಹೀಗಾಗಿ ಹುಟ್ಟಿದ ಎರಡನೇ ದಿನಕ್ಕೆ ಹೆಣ್ಣು ಮಗುವೊಂದು ಮೃತಪಟ್ಟಿತ್ತು. ಆದರೆ ಗಂಡು ಮಗು ಉಸಿರಾಡುತ್ತಿತ್ತು.
ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿನ ತೂಕ ಕೇವಲ 700 ಗ್ರಾಂ ಇತ್ತು. ಶ್ವಾಸಕೋಶ ಬೆಳವಣಿಗೆಯಾಗದೆ ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಕಣ್ಣು, ಕಿವಿ, ರಕ್ತದೊತ್ತಡ ಹೀಗೆ ನಾನಾ ಭಾಗಗಳು ಬೆಳೆಯದೆ ಇದ್ದ ಮಗುವಿನ ಮೇಲಿನ ಆಸೆಯನ್ನ ಪೋಷಕರು ಕೈ ಚೆಲ್ಲಿದ್ದರು. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ವೆಚ್ಚವೂ ಸಹ ದುಬಾರಿಯಾಗಿತ್ತು.
ಲಕ್ಷಾಂತರ ರೂಪಾಯಿ ಮೊದಲೇ ಕಳೆದುಕೊಂಡಿದ್ದ ಪೋಷಕರು ಕೊನೆಗೆ ನಿರಾಸೆ ಭಾವನೆಯಿಂದ ಗದಗ ಜಿಮ್ಸ್‌ಗೆ ತಂದು ಮಗುವಿಗೆ ಚಿಕಿತ್ಸೆಗೆ ದಾಖಲಿಸುತ್ತಾರೆ. ಆದರೆ ಗದಗ ಜಿಮ್ಸ್ ವೈದ್ಯರ ಚಮತ್ಕಾರ ಮಾತ್ರ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ಮಗುವಿನ ದೇಹ ಗುಬ್ಬಿ ಮರಿ ರೀತಿಯಲ್ಲಿ ಇದ್ದು ಮಗುವಿನ ಕೈಕಾಲುಗಳು ಬಹಳಷ್ಟು ಚಿಕ್ಕದಾಗಿದ್ದರಿಂದ ಮಗುವನ್ನ ಎತ್ತಾಡಲು ಸಹ ಹಿಂಜರಿದಿದ್ದರು. ಹೀಗಾಗಿ ಕೃತಕ ಗರ್ಭಧಾರಣೆಯ ವಾತಾವರಣ ಸೃಷ್ಟಿ ಮಾಡಿ ಗರ್ಭದಲ್ಲಿ ಯಾವ ರೀತಿ ಮಗು ಬೆಳೆಯುತ್ತೋ ಅದೇ ರೀತಿ ವಾತಾವರಣ ಸೃಷ್ಟಿ ಮಾಡಿ ಮಗುವಿಗೆ ಚಿಕಿತ್ಸೆ ನೀಡಿದ್ದಾರೆ.
ಸತತ ಮೂರು ತಿಂಗಳ ಕಾಲ ಜಿಮ್ಸ್ ಕಾಂಗರೂ ಮದರ್ ಕೇರ್ ಘಟಕದಲ್ಲಿ ಮಗುವಿಗೆ ವಿಶೇಷ ಚಿಕಿತ್ಸೆ ನೀಡಿದ್ದಾರೆ. ಆರಂಭದಲ್ಲಿ ಶ್ವಾಸಕೋಶ ಬೆಳವಣಿಗೆಯಾಗೋವರೆಗೂ ವೆಂಟಿಲೇಟರ್ ಮೇಲೆ ಶ್ವಾಸಕೋಶದ ಜಾಗದವರೆಗೆ ಪೈಪ್‌ಗಳನ್ನು ಹಾಕಿ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. 1)Ventilator 2) Cpap, 3)hfnc 4) oxygen ನಂತಹ ವಿವಿಧ ರೀತಿಯ ಆಯಾಮಗಳಲ್ಲಿ ಮಗುವಿಗೆ ಸತತವಾಗಿ ಹಗಲು ರಾತ್ರಿ ಇಡೀ ಒಂದು ದೊಡ್ಡ ತಂಡ ಚಿಕಿತ್ಸೆ ನೀಡಿ ಮಗುವಿನ ತೂಕ ಹೆಚ್ಚಿಸಿದ್ದಾರೆ.
ಈಗ ಅಮ್ಮನ ಮಡಿಲಲ್ಲಿ ಮಗು ಜೋಗುಳದ ಹಾಡು ಕೇಳುವಂತೆ ಮಾಡಿದ ವೈದ್ಯರು ದೇವರ ಸ್ವರೂಪಿ ಸ್ಥಾನದಲ್ಲಿ ಕೂತಿದ್ದಾರೆ. ಯಾಕೆಂದರೆ ಈ ರಾಜೇಶ್ವರಿಗೆ ನಾಲ್ಕು ವರ್ಷಗಳ ಕಾಲ ಮಕ್ಕಳು ಆಗಿರಲಿಲ್ಲ. ನಾಲ್ಕು ವರ್ಷಗಳ ಬಳಿಕ ಗರ್ಭ ಧರಿಸಿದ್ದ ಈ ತಾಯಿಗೆ ಚೊಚ್ಚಲ ಬಸಿರಿನಲ್ಲಿಯೇ ಅವಳಿ ಮಕ್ಕಳು ಆಗಿದ್ದವು. ಆದರೆ ಇನ್ನೂ ಮೂರು ತಿಂಗಳು ಬಾಕಿ ಇರಿವಾಗಲೇ ಅಕಾಲಿಕ ಹೆರಿಗೆಯಾಗಿ ಇಷ್ಟೆಲ್ಲ ತೊಂದರೆ ಅನುಭವಿಸಬೇಕಾಯಿತು ಎಂದು ಆಕೆಯ ತಾಯಿ ಹೇಳಿಕೊಂಡಿದ್ದಾರೆ.
ಇನ್ನು ಈ ರೀತಿಯ ಮಗುವಿನ ಚಿಕಿತ್ಸೆ ಜಿಮ್ಸ್‌ನಲ್ಲಿ ಇದೇ ಮೊದಲಬಾರಿಯೇನಲ್ಲ ನಾಲ್ಕು ವರ್ಷಗಳ ಹಿಂದೆಯೂ ಸಹ 560 ಗ್ರಾಂ ತೂಕದ ಮಗುವಿಗೆ ಸಹ ಚಿಕಿತ್ಸೆ ನೀಡಿ ಆರೋಗ್ಯವಾಗಿರುವಂತೆ ಮಾಡಿದ್ದರು. ಆ ಮಗು ಸದ್ಯ ಎಲ್.ಕೆ.ಜಿ ತರಗತಿಗೆ ಹೋಗುತ್ತಿದೆ. ವೈದ್ಯರು ಇದೇ ನೂರಾರು ರೀತಿ ಕಡಿಮೆ ತೂಕದ ಮಕ್ಕಳಿಗೂ ಸಹ ಚಿಕಿತ್ಸೆ ನೀಡಿ ಮರುಜನ್ಮ ನೀಡಿದ್ದಾರೆ. ಹೀಗಾಗಿ ಹಲವಾರು ಪೋಷಕರು ಜಿಮ್ಸ್ ವೈದ್ಯರ ಈ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ವೈದ್ಯರ ಈ ಕಾರ್ಯ ಎಲ್ಲರೂ ಪ್ರಶಂಸೆಗೆ ಪಾತ್ರವಾಗಿದೆ.












Click it and Unblock the Notifications