Bajrang Dal Controversy: ಕಾಂಗ್ರೆಸ್ ಹಿಂದೂ ವಿರೋಧಿ ಮಾನಸಿಕತೆ ಹೊಂದಿದೆ: ಪ್ರಲ್ಹಾದ್ ಜೋಶಿ
ಗದಗ, ಮೇ, 03: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಇತ್ತೀಚೆಗಷ್ಟೇ ಕಾಂಗ್ರೆಸ್ ಪ್ರಣಾಳಿಯನ್ನು ಬಿಡುಗಡೆ ಮಾಡಿತ್ತು. ಪ್ರಣಾಳಿಯಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳಿದ್ದು, ಈ ವಿವಾದ ಇದೀಗ ರಾಜ್ಯದೆಲ್ಲೆಡೆ ಹಬ್ಬಿದೆ. ಅಲ್ಲದೆ ಕಾಂಗ್ರೆಸ್‌ನ ಈ ನಿರ್ಧಾರದ ವಿರುದ್ಧ ಬಿಜೆಪಿ ನಾಯಕರು ಕೆಂಡಕಾರುತ್ತಲೇ ಇದ್ದಾರೆ. ಹಾಗೆಯೆ ಗದಗದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಮಾನಸಿಕತೆ ಹೊಂದಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಹೊಂದಿದೆ. ಹಿಂದೂ ವಿರೋಧಿ ಮಾನಸಿಕತೆ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಕಲಂ 370 ತೆಗೆದಾಗ ಕಾಂಗ್ರೆಸ್, ಪಾಕಿಸ್ತಾನದ ಭಾಷೆ ಒಂದೆ ಆಗಿತ್ತು. ಸರ್ಜಿಕಲ್ ಸ್ಟ್ರೈಕ್ ಆದಾಗಲೂ ಕಾಂಗ್ರೆಸ್, ಪಾಕಿಸ್ತಾನ ಭಾಷೆ ಒಂದೆ ಆಗಿತ್ತು. ಹೀಗೆ ಕಾಂಗ್ರೆಸ್, ಪಾಕಿಸ್ತಾನದ ನಡುವೆ ಹೊಂದಾಣಿಕೆ ಇದೆ ಎಂದು ತಿಳಿಯುತ್ತಿದೆ ಎಂದರು.

ಕಾಂಗ್ರೆಸ್‌ನವರು ಬಜರಂಗದಳ, ಪಿಎಫ್ಐ ಒಂದೆ ಅಂತಾ ನೋಡುತ್ತಿದ್ದಾರೆ. ಇದು ದೇಶದ ಹಿಂದೂಗಳಿಗೆ ಮಾಡಿದ ಘನ ಘೋರ ಅಪಮಾನ ಆಗಿದೆ. ಮುಸ್ಲಿಮರಿಗೆ ಮತ್ತೆ ಮೀಸಲಾತಿ ನೀಡುತ್ತೇವೆ ಅನ್ನುವುದು ಕೂಡ ಘನಘೋರ ಅಪರಾಧ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಸುಪ್ರೀಂ ಕೋರ್ಟ್ ವಿರುದ್ಧ ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್ ಹೀಗೆ ಮಾಡುತ್ತಿದೆ. ಬಜರಂಗದಳ ಒಂದು ದೇಶ ಭಕ್ತ ಸಂಘಟನೆ ಆಗಿದೆ. ದೇಶ ಭಕ್ತಿಯ ಸ್ವಾತಂತ್ರ್ಯ ವ್ಯಕ್ತಿ ಹರಣ ಮಾಡಲು ಯತ್ನಿಸಿದರೆ ಬಿಜೆಪಿ ಅದನ್ನು ವಿರೋಧಿಸುತ್ತದೆ. ಅಕಸ್ಮಾತ್ ಈ ನಿರ್ಧಾರವನ್ನು ಹಿಂದೆ ಪಡೆಯುವುದಾದರೆ ಕ್ಷಮೆ ಕೇಳಿ ಹಿಂಪಡೆಯಲಿ ಎಂದರು.
ಬಜರಂಗದಳ ಹನುಮಾನ್ ಹೆಸರಿನಲ್ಲಿ ನಡೆಯುವ ಒಂದು ಸಂಘಟನೆ ಆಗಿದೆ. ಅಧಿಕಾರದ ಲಾಲಿಸೆಗಾಗಿ, ತುಷ್ಟಿಕರಣದ ರಾಜನೀತಿಗಾಗಿ ಕಾಂಗ್ರೆಸ್ ಈ ನೀಚ ಕೆಲಸಕ್ಕೆ ಇಳಿದಿದೆ. ಈ ಮೂಲಕ ಅವರು ದೇಶದಲ್ಲಿರುವ ಹಿಂದೂಗಳಿಗೆ, ಹಿಂದೂ ನಂಬಿಕೆಗಳಿಗೆ ಅಪಮಾನ ಮಾಡಿದ್ದಾರೆ. ಇದನ್ನು ಬಿಜೆಪಿ ಸಹಿಸುವುದಿಲ್ಲ ಎಂದರು.
ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಆಕ್ರೋಶ
ಇತ್ತೀಚೆಗಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನರೇಂದ್ರ ಮೋದಿಯವರ ವಿರುದ್ಧ ವಿಷ ಸರ್ಪದ ಹೇಳಿಕೆಯ ಅಸ್ತ್ರವನ್ನು ಬಳಿಸಿದ್ದರು. ಇದೀಗ ಇದಕ್ಕೆ ಸಚಿವ ಶ್ರೀರಾಮುಲು ಗದಗದಲ್ಲಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ನವರಿಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.
ಗದಗದ ತಮ್ಮ ನಿವಾಸದಲ್ಲಿ ಮಾತನಾಡಿದ ಸಚಿವ ಬಿ. ಶ್ರೀರಾಮುಲು, ಕಾಂಗ್ರೆಸ್‌ನವರು ಲಿಂಗಾಯತ ಸಮುದಾಯದವರು ಯಾರು ಮುಖ್ಯಮಂತ್ರಿ ಆಗುತ್ತಾರೆಯೋ ಅವರೆಲ್ಲಾ ಭ್ರಷ್ಟರು ಅಂತಾ ಉಲ್ಲೇಖ ಮಾಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷಸರ್ಪಕ್ಕೆ ಹೋಲಿಸಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಅವರು ಬೌಧ್ಧಿಕವಾಗಿ, ನೈತಿಕವಾಗಿ ದಿವಾಳಿ ಎದ್ದು ಹೋಗಿದ್ದಾರೆ ಅಂತಾ ನಾನು ತಿಳಿದಿದ್ದೇನೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನವರ ತಲೆಯಲ್ಲಿ ಹುಳ ಹೋಗಿದೆ. ಅವರು ಮದದಿಂದ, ದುರಹಂಕಾರದಿಂದ, ಎಲ್ಲೋ ಒಂದು ಕಡೆ ಅಧಿಕಾರಕ್ಕೆ ಬರುತ್ತೇವೆ ಅನ್ನುವ ಭ್ರಮೆಯಲ್ಲಿದ್ದಾರೆ. ಆದರೆ ಅವರು ಯಾವಾಗಲೂ ಕೂಡ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಅವತ್ತಿನ ಸಂದರ್ಭದಲ್ಲಿ ಲಾಟರಿ ಮೂಲಕ ಸರ್ಕಾರ ರಚನೆ ಆಗುತ್ತಿತ್ತು. ಈ ಬಾರಿ ಲಾಟರಿ ಸಕ್ಸಸ್ ಅಗುವುದಿಲ್ಲ. ಖಂಡಿತವಾಗಿ ಈ ಚುನಾವಣೆಯಲ್ಲಿ ಸೋಲುನುಭವಿಸುತ್ತಾರೆ ಎಂದರು.












Click it and Unblock the Notifications