ಗೋಕಳ್ಳತನದ ಆರೋಪ: ದುಬೈಯಿಂದ ಬಂದು ಹತ್ಯೆಯಾದ ನತದೃಷ್ಟ!
ಬರೇಲಿ, ಆಗಸ್ಟ್ 30: ಜಾನುವಾರು ಕಳ್ಳತನದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಜನರೇ ಹೊಡೆದು ಕೊಂದ ದಾರುಣ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಭೊಲಾಪುರ ಹದೊಲಿಯಾ ಎಂಬ ಹಳ್ಳಿಯಲ್ಲಿ ನಡೆದಿದೆ.
ದುಬೈಯಲ್ಲಿ ಟೇಲರ್ ಕೆಲಸ ಮಾಡುತ್ತಿದ್ದ ಶಾರೂಖ್ ಬರೇಲಿಯಲ್ಲಿರುವ ತನ್ನ ಮನೆಗೆ ಬಂದಿದ್ದ. ಈ ಸಮಯದಲ್ಲಿ ತನ್ನ ಮೂವರು ಗೆಳೆಯರೊಂದಿಗೆ ಅಡ್ಡಾಡಿಕೊಂಡು ಬರಲು ಹೋಗಿದ್ದ ಸಮಯದಲ್ಲಿ ಎಮ್ಮೆಯೊಂದನ್ನು ಕದ್ದಿದ್ದಾರೆಂದು ಆರೋಪಿಸಿ ಜನರ ಗುಂಪೊಂದು ಅವರ ಮೇಲೆ ದಾಳಿ ನಡೆಸಿತ್ತು.
ಈ ಸಮಯದಲ್ಲಿ ಶಾರೂಖ್ ನ ಉಳಿದ ಸ್ನೇಹಿತರು ಪರಾರಿಯಾಗಿದ್ದಾರೆ. ಆದರೆ ಶಾರೂಖ್ ನನ್ನು ಹಿಡಿದ ಜನರು ಆತನನ್ನು ಚೆನ್ನಾಗಿ ಥಳಿಸಿದ್ದು, ಅತಿಯಾದ ಗಾಯ ಮತ್ತು ರಕ್ತಸ್ರಾವದಿಂದ ಬಳಲುತ್ತಿದ್ದ ಶಾರೂಖ್ ನನ್ನು ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ, ಆತ ಅಷ್ಟರಲ್ಲೇ ಅಸುನೀಗಿದ್ದ.

ಗೋಕಳ್ಳನೆಂದು ಆರೋಪಿಸಿ ಇತ್ತೀಚೆಗಷ್ಟೆ ಹರ್ಯಾಣದಲ್ಲಿ ಓರ್ವ ವ್ಯಕ್ತಿ ಮತ್ತು ರಾಜಸ್ಥಾನದಲ್ಲಿ ಓರ್ವ ವ್ಯಕ್ತಿಯನ್ನು ಜನರೇ ಹೊಡು ಕೊಂದಿದ್ದರು.
ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದು ಸ್ವತಃ ಪ್ರಧಾನಿ ಮೋದಿ ಅವರೇ ಕರೆ ಕೊಟ್ಟಿದ್ದರೂ ಇಂಥ ಪ್ರಕರಣಗಳು ನಿಲ್ಲುತ್ತಿಲ್ಲ.
ಗೋ ರಕ್ಷಣೆಯ ಹೆಸರಿನಲ್ಲಿ ಗುಂಪುಗೂಡಿಕೊಂಡು ಹೊಡೆಯುವುದು, ಕೊಲ್ಲುವುದು ಅಪರಾಧ. ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications