ನನ್ನ ಮಾತು ಆಡಲು ಅಲ್ಲ, ನಿಮ್ಮ ಮಾತು ಕೇಳಲು ಬಂದಿದ್ದೇನೆ: ರಾಹುಲ್
ದುಬೈ, ಜನವರಿ 11: ದುಬೈ ರಾಜಕೀಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿಯೂ ಪರೋಕ್ಷವಾಗಿ ನರೇಂದ್ರ ಮೋದಿಯ ಕಾಲೆಳೆದಿದ್ದಾರೆ.
ನಾನು ನನ್ನ ಮನ್ ಕೀ ಬಾತ್ ಆಡಲು ಇಲ್ಲಿಗೆ ಬಂದಿಲ್ಲ, ನಿಮ್ಮ ಸಮಸ್ಯೆಗಳನ್ನು ಕೇಳಲು ಬಂದಿದ್ದೇನೆ ಎಂದು ರಾಹುಲ್ ಗಾಂಧಿ ಅವರು ಪರೋಕ್ಷವಾಗಿ ಮೋದಿಗೆ ಟಾಂಗ್ ನೀಡಿದ್ದಾರೆ. ಅವರು ದುಬೈನ ಭಾರತೀಯ ನೌಕರರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ದುಬೈನ ಭಾರತೀಯ ನೌಕರರನ್ನು ಹಾಡಿ ಹೊಗಳಿದ ರಾಹುಲ್ ಗಾಂಧಿ, 'ನೀವು ಭಾರತ ಪ್ರತಿ ರಾಜ್ಯದ, ಪ್ರತಿ ಧರ್ಮದ, ಪ್ರತಿ ಜಾತಿಯನ್ನು ದುಬೈನಲ್ಲಿ ಪ್ರಕಾಶಿಸುವಂತೆ ಮಾಡಿದ್ದೀರಿ ಎಂದು ಹೇಳಿದ್ದಾರೆ.

ನಮ್ಮ ಪಕ್ಷಕ್ಕೆ ನಿಮ್ಮ ಸಮಸ್ಯೆಗಳ ಬಗ್ಗೆ ಅರಿವಿದೆ, ಹಾಗಾಗಿ ನಾವು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಜೊತೆ ಮಾತನಾಡುತ್ತೇವೆ, ನಿಮ್ಮ ಕಷ್ಟಗಳಿಗೆ ನಾವು ದನಿಯಾಗುತ್ತೇವೆ ಎಂದು ರಾಹುಲ್ ಭರವಸೆ ನೀಡಿದರು.
ರಾಹುಲ್ ಗಾಂಧಿ ಅವರು ದುಬೈನ ಬ್ಯುಸಿನೆಸ್‌ಮೆನ್‌ಗಳನ್ನೂ ಇಂದು ಭೇಟಿಯಾಗಿ ಸಂವಾದ ನಡೆಸಿದರು. ಎರಡು ದಿನ ಅವರ ಈ ಪ್ರವಾಸದಲ್ಲಿ ಅವರು ದುಬೈನ ಸಚಿವರನ್ನು ಸಹ ಭೇಟಿ ಆಗಲಿದ್ದಾರೆ.

ಇಂದು ರಾತ್ರಿ 7:45 ಕ್ಕೆ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ರಾಹುಲ್ ಗಾಂಧಿ ಅವರ ಬೃಹತ್ ಸಮಾವೇಶ ಆಯೋಜಿಸಲಾಗಿದೆ.












Click it and Unblock the Notifications