Vande Bharat Train: ಮೇ ಮುಗಿದರೂ ಆರಂಭಗೊಳ್ಳದ ವಂದೇ ಭಾರತ್ ರೈಲು ಸಂಚಾರ: ಯಾಕಿಷ್ಟು ವಿಳಂಬ?
ಧಾರವಾಡ, ಮೇ 31: ಅವಳಿ ನಗರದ ಬಹು ನೀರಿಕ್ಷಿತ ವಂದೇ ಭಾರತ್ ರೈಲು ಸಂಚಾರ ಆರಂಭಕ್ಕೆ ವಿಳಂಬವಾಗಿದೆ. ಏಪ್ರಿಲ್‌ನಿಂದ ಆರಂಭವಾಗಬೇಕಿದ್ದ ರೈಲು ಮೇ ಅವಧಿ ಮುಗಿದರೂ ಆರಂಭಗೊಂಡಿಲ್ಲ. ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗುವುದು ಯಾವಾಗ ಎಂಬುವಂತ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.
ಏಪ್ರಿಲ್‌ನಿಂದ ಪ್ರಾರಂಭವಾಗಬೇಕಿದ್ದ ರೈಲು ಈವರೆಗೂ ಪ್ರಾರಂಭವಾಗದಿರುವುದಕ್ಕೆ ಕಾರಣವೇನು ಎಂಬ ಚರ್ಚೆ ಎಲ್ಲೆಡೆ ಆರಂಭವಾಗಿದೆ. ದೇಶದ ವಿವಿಧೆಡೆ ಈವರೆಗೆ ಬರೋಬ್ಬರಿ 18 ವಂದೇ ಭಾರತ್ ರೈಲು ಸಂಚರಿಸುತ್ತಿವೆ. ಕೇಂದ್ರದ ಮಹತ್ವಾಕಾಂಕ್ಷಿ ರೈಲು ಇದು.

ಉತ್ತರ ಕರ್ನಾಟಕ ಭಾಗದ ಧಾರವಾಡ-ಬೆಂಗಳೂರು ಮಧ್ಯೆಯೂ ವಂದೇ ಭಾರತ್ ರೈಲು ಸಂಚರಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ರೈಲ್ವೆ ಸಚಿವ ವೈಷ್ಣವ ಅಶ್ವಿನ್ ಹುಬ್ಬಳ್ಳಿಗೆ ಬಂದಿದ್ದ ವೇಳೆ ಏಪ್ರಿಲ್‌ನಲ್ಲಿ ಧಾರವಾಡದಿಂದ ಬೆಂಗಳೂರು ವಂದೇ ಭಾರತ್ ರೈಲು ಓಡಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಏಪ್ರಿಲ್‌ನಿಂದಲೇ ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.
ಹಾಗೆ ನೋಡಿದರೆ ಈಗಾಗಲೇ ವಂದೇ ಭಾರತ್ ರೈಲು ಸಂಚರಿಸಲು ಬೇಕಾದ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಕಲ್ಲು ಕ್ವಾರಿಗಳ ಮಾಲೀಕರ ಪ್ರತಿಭಟನೆಯಿಂದಾಗಿ ಕೊಂಚ ವಿಳಂಬವಾಯಿತು. ಮಾ.31ಕ್ಕೆ ಹುಬ್ಬಳ್ಳಿ-ಬೆಂಗಳೂರು ಮಧ್ಯದಲ್ಲಿ ವಿದ್ಯುದ್ದೀಕರಣ ಮುಗಿಯಲಿಲ್ಲ. ಅಂದುಕೊಂಡಂತೆ ಸಕಾಲದಲ್ಲಿ ಕಾಮಗಾರಿ ಮುಗಿಯಲಿಲ್ಲ. ಬಳಿಕ ವಿಧಾನಸಭೆ ಚುನಾವಣೆ ಕೂಡ ಘೋಷಣೆಯಾಯಿತು. ಹೀಗಾಗಿ ವಂದೇ ಭಾರತ್ ರೈಲು ಸಂಚಾರದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಇದೀಗ ಕಾಮಗಾರಿ ಶೇ.90ಕ್ಕೂ ಹೆಚ್ಚು ಭಾಗ ಮುಗಿದಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿಯೆಲ್ಲ ಪೂರ್ಣಗೊಳ್ಳಲಿದೆ. ಪ್ರಾಯೋಗಿಕ ಸಂಚಾರ ನಡೆಸಿದ ಬಳಿಕ ವಂದೇ ಭಾರತ್ ರೈಲು ಸಂಚಾರದ ಬಗ್ಗೆ ನಿರ್ಧಾರವನ್ನು ರೈಲ್ವೆ ಮಂಡಳಿ ತೆಗೆದುಕೊಳ್ಳಲಿದೆ. ಆ ಬಳಿಕವೇ ಸಂಚಾರ ಆರಂಭವಾಗಲಿದೆ. ಇದೆಲ್ಲ ಆಗಿ ರೈಲು ಸಂಚಾರ ಆಗಬೇಕೆಂದರೆ ಕನಿಷ್ಠವೆಂದರೂ ಇನ್ನೂ 2 ತಿಂಗಳಾದರೂ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.
ಇನ್ನೂ ವಂದೇ ಭಾರತ್ ರೈಲು ಪ್ರತಿಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸುವ ರೈಲಾಗಿದೆ. ಆದರೆ ಹಳಿಯ ಸಾಮರ್ಥ್ಯ, ಸಮತಟ್ಟು ಪ್ರದೇಶ, ತಿರುವುಗಳೆಲ್ಲವನ್ನು ಲೆಕ್ಕ ಹಾಕಬೇಕಾಗುತ್ತದೆ. ಹೀಗಾಗಿ ಅಲ್ಪ ಸ್ವಲ್ಪ ಸ್ಪೀಡ್‌ನಲ್ಲಿ ವ್ಯತ್ಯಾಸವಾಗಬಹುದು ಎಂದು ಇಲಾಖೆಯ ಅಂದಾಜು ಎನ್ನಲಾಗಿದೆ. ಆದರೂ ಈಗ ಸಂಚರಿಸುವ ಎಲ್ಲ ರೈಲುಗಳಿಗಿಂತ ಈ ವಂದೇ ಭಾರತ್ ರೈಲಿನ ವೇಗ ಮಾತ್ರ ಜಾಸ್ತಿ ಇರುತ್ತದೆ.
ಸದ್ಯ ರಾಣಿ ಚೆನ್ನಮ್ಮ ರೈಲು ಹುಬ್ಬಳ್ಳಿಯಿಂದ ಬೆಂಗಳೂರು ತಲುಪಲು 6 ರಿಂದ 6.30 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ 5 ಗಂಟೆ ಅವಧಿಯಲ್ಲಿ ಧಾರವಾಡದಿಂದ ಬೆಂಗಳೂರಿಗೆ ತಲುಪಬಹುದಾಗಿದೆ. ಆದರೂ ಪ್ರಾಯೋಗಿಕ ಸಂಚಾರದ ಬಳಿಕವೇ ನಿಖರ ಸಮಯ ಗೊತ್ತಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.












Click it and Unblock the Notifications