Dharwad-Belagavi Railway: ಧಾರವಾಡ-ಬೆಳಗಾವಿ ರೈಲು ಮಾರ್ಗ ಅನುಷ್ಠಾನಕ್ಕೆ ವಿಳಂಬ, ಕಾರಣ ಏನು?, ಇಲ್ಲಿದೆ ವಿವರ
Dharwad-Belagavi Railway: ಧಾರವಾಡ- ಬೆಳಗಾವಿ ನೇರ ರೈಲು ಮಾರ್ಗದ ಅನುಷ್ಠಾನ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕಿತ್ತೂರು ಮಾರ್ಗವಾಗಿ ತೆರಳುವ ಈ ರೈಲು ಮಾರ್ಗದ ಜಾರಿಗಾಗಿ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಇದುವರೆಗೂ ಆರಂಭ ಆಗಿಲ್ಲ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ರೈಲು ಮಾರ್ಗ ಅಳವಡಿಕೆಗೆ ಬೇಕಾದ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಭೂಮಿಯನ್ನು ಕಳೆದ ಮಾರ್ಚ್‌ನಲ್ಲಿಯೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕಿತ್ತು. ಭೂಮಿ ಹಸ್ತಾಂತರಗೊಂಡ ನಂತರ ರೈಲ್ವೆ ಇಲಾಖೆ ಟೆಂಡರ್ ಕರೆಯುವ ಕಾರ್ಯ ಮಾಡಬೇಕಿತ್ತು. ಆದರೆ, ಕೆಐಎಡಿಬಿ ಮಾತ್ರ ಇನ್ನೂ ರೈತರಿಂದ ಭೂಮಿ ವಶಪಡಿಸಿಕೊಳ್ಳುವ ಕಾರ್ಯವನ್ನೇ ಆರಂಭ ಮಾಡಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.

ಇನ್ನು ಧಾರವಾಡ- ಬೆಳಗಾವಿ ನೇರ ರೈಲು ಮಾರ್ಗ ಧಾರವಾಡದ ಬೇಲೂರು ಕೈಗಾರಿಕೆ ಪ್ರದೇಶದಿಂದ ಹಾಯ್ದು ಹೋಗುತ್ತದೆ. ನೀಲಿನಕ್ಷೆ ಪ್ರಕಾರ ಈ ರೈಲು ಮಾರ್ಗ ಅನುಷ್ಠಾನಗೊಳಿಸಿದ್ದರೆ ಮಾರ್ಗದ ಮಧ್ಯೆ ಯುಪ್ಲೆಕ್ಸ್ ಕಂಪನಿಯ ಬಹುತೇಕ ಜಾಗ ರೈಲ್ವೆ ಇಲಾಖೆಗೆ ಹಸ್ತಾಂತರಗೊಳ್ಳುತ್ತಿತ್ತು. ಕಂಪನಿಯ ಅಧಿಕಾರಿಗಳ ಕೋರಿಕೆ ಮೇರೆಗೆ ಮಾರ್ಗವನ್ನು ಬದಲಾಯಿಸಲಾಯಿತು. ಮಾರ್ಗ ಬದಲಾವಣೆಯಿಂದಾಗಿ ಪಕ್ಕದ ಅಂದಾಜು 2.5 ಕಿ.ಮೀ. ಹೆಚ್ಚುವರಿ ಭೂಮಿ ವಶಪಡಿಸಿಕೊಳ್ಳುವುದು ರೈಲ್ವೆ ಇಲಾಖೆಗೆ ಅನಿವಾರ್ಯವಾಯಿತು.
ಒಟ್ಟಿನಲ್ಲಿ ಈ ಎಲ್ಲ ಪ್ರಕ್ರಿಯೆಗೆ ಅಂದಾಜು ಎರಡು ತಿಂಗಳು ಬೇಕಾಯಿತು. ಈ ಮಧ್ಯೆ ಬೆಳಗಾವಿ ಜಿಲ್ಲೆಯ ಕೆಲವು ರೈತರು ಭೂಮಿ ವಶಪಡಿಸಿಕೊಳ್ಳದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲದೆ ಯೋಜನೆ ಜಾರಿಗೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ತೆರವು ನಂತರ ಮತ್ತೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಗೊಂಡಿತು. ಇದರಿಂದಾಗಿ ಯೋಜನೆ ಅನುಷ್ಠಾನ ವಿಳಂಬಗೊಂಡಿತು. 4
ಮಾಹಿತಿಯ ಪ್ರಕಾರ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರಾಥಮಿಕ ಹಂತದ ನೋಟಿಫಿಕೇಶನ್ ಕಾರ್ಯ ಪೂರ್ಣಗೊಂಡಿದೆ. ಇದೀಗ ಎರಡೂ ಜಿಲ್ಲೆಗಳಲ್ಲಿ ರೈಲ್ವೆ ಇಲಾಖೆ ಮತ್ತು ಕೆಐಎಡಿಬಿ ಜಂಟಿಯಾಗಿ ಸರ್ವೇ ಕಾರ್ಯ ನಡೆಸಬೇಕಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು, ಭೂಮಿ ವಶಪಡಿಸಿಕೊಳ್ಳುವ ಕಾರ್ಯ ನಡೆಯಬೇಕಾದರೆ ಕನಿಷ್ಠ ಮೂರು ತಿಂಗಳಾದರೂ ಬೇಕಾಗಬಹುದು. ವಶಪಡಿಸಿಕೊಂಡ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದ ನಂತರವಷ್ಟೇ ರೈಲ್ವೆ ಇಲಾಖೆ ಟೆಂಡರ್ ಬಿಡ್ ಓಪನ್ ಮಾಡಲಿದೆ.
ವಂದೇ ಭಾರತ್ ರೈಲು ಸಂಚಾರ ಯಾವಾಗ?
ಮತ್ತೊಂದೆಡೆ ಅವಳಿ ನಗರದ ಬಹು ನೀರಿಕ್ಷಿತ ವಂದೇ ಭಾರತ್ ರೈಲು ಸಂಚಾರ ಆರಂಭಕ್ಕೆ ವಿಳಂಬವಾಗಿದೆ. ಏಪ್ರಿಲ್‌ನಿಂದ ಆರಂಭವಾಗಬೇಕಿದ್ದ ರೈಲು ಮೇ ಅವಧಿ ಮುಗಿದರೂ ಆರಂಭಗೊಂಡಿಲ್ಲ. ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗುವುದು ಯಾವಾಗ ಎಂಬುವಂತ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.
ಏಪ್ರಿಲ್‌ನಿಂದ ಪ್ರಾರಂಭವಾಗಬೇಕಿದ್ದ ರೈಲು ಈವರೆಗೂ ಪ್ರಾರಂಭವಾಗದಿರುವುದಕ್ಕೆ ಕಾರಣವೇನು ಎಂಬ ಚರ್ಚೆ ಎಲ್ಲೆಡೆ ಆರಂಭವಾಗಿದೆ. ದೇಶದ ವಿವಿಧೆಡೆ ಈವರೆಗೆ ಬರೋಬ್ಬರಿ 18 ವಂದೇ ಭಾರತ್ ರೈಲು ಸಂಚರಿಸುತ್ತಿವೆ. ಕೇಂದ್ರದ ಮಹತ್ವಾಕಾಂಕ್ಷಿ ರೈಲು ಇದು.
ಉತ್ತರ ಕರ್ನಾಟಕ ಭಾಗದ ಧಾರವಾಡ-ಬೆಂಗಳೂರು ಮಧ್ಯೆಯೂ ವಂದೇ ಭಾರತ್ ರೈಲು ಸಂಚರಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ರೈಲ್ವೆ ಸಚಿವ ವೈಷ್ಣವ ಅಶ್ವಿನ್ ಹುಬ್ಬಳ್ಳಿಗೆ ಬಂದಿದ್ದ ವೇಳೆ ಏಪ್ರಿಲ್‌ನಲ್ಲಿ ಧಾರವಾಡದಿಂದ ಬೆಂಗಳೂರು ವಂದೇ ಭಾರತ್ ರೈಲು ಓಡಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಏಪ್ರಿಲ್‌ನಿಂದಲೇ ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.
ಹಾಗೆ ನೋಡಿದರೆ ಈಗಾಗಲೇ ವಂದೇ ಭಾರತ್ ರೈಲು ಸಂಚರಿಸಲು ಬೇಕಾದ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಕಲ್ಲು ಕ್ವಾರಿಗಳ ಮಾಲೀಕರ ಪ್ರತಿಭಟನೆಯಿಂದಾಗಿ ಕೊಂಚ ವಿಳಂಬವಾಯಿತು. ಮಾ.31ಕ್ಕೆ ಹುಬ್ಬಳ್ಳಿ-ಬೆಂಗಳೂರು ಮಧ್ಯದಲ್ಲಿ ವಿದ್ಯುದ್ದೀಕರಣ ಮುಗಿಯಲಿಲ್ಲ. ಅಂದುಕೊಂಡಂತೆ ಸಕಾಲದಲ್ಲಿ ಕಾಮಗಾರಿ ಮುಗಿಯಲಿಲ್ಲ. ಬಳಿಕ ವಿಧಾನಸಭೆ ಚುನಾವಣೆ ಕೂಡ ಘೋಷಣೆಯಾಯಿತು. ಹೀಗಾಗಿ ವಂದೇ ಭಾರತ್ ರೈಲು ಸಂಚಾರದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ.











Click it and Unblock the Notifications