ಯೋಗೀಶ್ ಗೌಡ ಕೊಲೆ ಕೇಸ್: ಇನ್ಸ್‌ಪೆಕ್ಟರ್ ಚೆನ್ನಕೇಶವ ಟಿಂಗರಿಕರ ಬಂಧನಕ್ಕೆ ವಾರೆಂಟ್ ಜಾರಿ
ಧಾರವಾಡ, ಡಿಸೆಂಬರ್ 10: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎ 19 ಆರೋಪಿ ಇನ್ಸ್‌ಪೆಕ್ಟರ್ ಚೆನ್ನಕೇಶವ ಟಿಂಗರಿಕರ ಬಂಧನಕ್ಕೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.

ಸದ್ಯ ಬೆಳಗಾವಿಯ ಪೊಲೀಸ್ ಆಯುಕ್ತರ ಕಚೇರಿಯ ಅಪರಾಧ ವಿಭಾಗದ ವಿಶೇಷ ತಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್ ಚೆನ್ನಕೇಶವ ಟಿಂಗರಿಕರ ಈ ಹಿಂದೆ ಅಂದರೆ 2016ರ ಜೂನ್ 15 ರಂದು ಧಾರವಾಡದ ಉಪನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದರು. ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಎ 19 ಆರೋಪಿಯಾಗಿರುವ ಚೆನ್ನಕೇಶವ ಟಿಂಗರಿಕರ ಈ ಹಿಂದೆ ಅಕ್ಟೋಬರ್ 31ರಿಂದ ಬಂದೋಬಸ್ತ್ ಕಾರಣ ವಿಚಾರಣೆಗೆ ಗೈರು ಹಾಜರಾಗಿದ್ದರು. ಆಗ ಕೂಡ ಚೆನ್ನಕೇಶವ ಟಿಂಗರಿಕರ ವಿರುದ್ಧ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಅಲ್ಲದೇ ಮುಂದಿನ ದಿನಾಂಕದಂದು 5-11-24 ರಂದು ಕಡ್ಡಾಯವಾಗಿ ಹಾಜರಾಗಲು ಸೂಚನೆ ನೀಡಿತ್ತು. ಇದೀಗ ಮತ್ತೆ ಬೆಳಗಾವಿಯ ಅಧಿವೇಶನ ಬಂದೋಬಸ್ತ್ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಸತತ ಗೈರು ಹಾಜರಾದ ಹಿನ್ನೆಲೆಯಲ್ಲಿ ಬಂಧಿಸಿ, ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಬಿಐ ಅಧಿಕಾರಿಗಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.
ಸಿಬಿಐ ಅಧಿಕಾರಿಗಳಿಂದ ಎಸ್ಕೇಪ್ ಆಗಿದ್ದ ಇನ್ಸ್‌ಪೆಕ್ಟರ್ ಚೆನ್ನಕೇಶವ ಟಿಂಗರಿಕರ
2016ರ ಜೂನ್ 15ರಂದು ಯೋಗೀಶ್ ಗೌಡ ಕೊಲೆ ನಡೆದಾಗ ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಟಿಂಗರಿಕರ್, ವಿರುದ್ಧ ಸಾಕ್ಷಿ ನಾಶ ಹಾಗೂ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಬಳಿಕ ಧಾರವಾಡ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಟಿಂಗರಿಕರ್, ಎಫ್‌ಐಆರ್‌ಗೆ ತಡೆ ತರಲು ಯತ್ನಿಸಿದ್ದರು.
ತನ್ನ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ತಡೆ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಅರ್ಜಿ ವಜಾಗೊಳಿಸಿತ್ತು. ಅಲ್ಲದೇ, ಆ ಸಮಯದಲ್ಲಿ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಟಿಂಗರಿಕರ್ ಗೈರಾಗಿದ್ದರು. ಹೀಗಾಗಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಅನ್ನು ಈ ಹಿಂದೆ ಕೂಡ ಜಾರಿ ಮಾಡಿತ್ತು. ಕೋರ್ಟ್ ವಾರೆಂಟ್ ಜಾರಿ ಮಾಡಿದ ಬೆನ್ನಲ್ಲೇ ಚೆನ್ನಕೇಶವ ಟಿಂಗರಿಕರ್ ಅವರನ್ನು ಬಂಧಿಸಲು ಸಿಬಿಐ ಅಧಿಕಾರಿಗಳ ಟಿಂಗರಿಕರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಟಿಂಕರಿಗರ್ ಮನೆಯಿಂದ ಪರಾರಿಯಾಗಿದ್ದರು.












Click it and Unblock the Notifications