ಕಮಿಷನ್ ಇತ್ತು ಆದರೆ 40% ಅಲ್ಲ: ಉ.ಕರ್ನಾಟಕ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್
ಧಾರವಾಡ, ಜುಲೈ 11: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿದ್ದು, 40 ಪರ್ಸೆಂಟ್ ಕಮಿಷನ್ ಆರೋಪ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಪಡೆದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಅಂದು ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಮೇಲೆ 40 ಪರ್ಸೆಂಟ್ ಸರ್ಕಾರ ಎಂದು ಮುಗಿಬಿದ್ದಿತ್ತು. ಅಲ್ಲದೇ ಚುನಾವಣೆಗೆ ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿತ್ತು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಬಿಜೆಪಿ 40 ಪರ್ಸೆಂಟ್ ತೆಗೆದುಕೊಳ್ಳುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಆದರೆ, ಕೆಂಪಣ್ಣ ಮಾಡಿದ ಆರೋಪವನ್ನು ಈಗ ಉತ್ತರ ಕರ್ನಾಟಕ ಸಂಘದ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅವರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ್ ಪಾಟೀಲ್, ಬಿಜೆಪಿ ಅಧಿಕಾರದಲ್ಲಿದ್ದಾಗ 40 ಪರ್ಸೆಂಟ್ ಕಮಿಷನ್ ಪಡೆದುಕೊಂಡಿಲ್ಲ. ಭ್ರಷ್ಟಾಚಾರ ಇತ್ತು. ಇಲ್ಲ ಅಂತಲ್ಲ. ಕಮಿಷನ್ ಕೊಡಲೇಬೇಕಿತ್ತು. ಆದರೆ, 40 ಪರ್ಸೆಂಟ್ ಕಮಿಷನ್ ಇರಲಿಲ್ಲ. ಇದನ್ನು ನಮ್ಮ ಅಸೋಸಿಯೇಶನ್ ಒಪ್ಪಿಕೊಂಡಿಲ್ಲ. ಪರ್ಸೆಂಟ್ ಕೊಡಬೇಕಿದೆ. ಆದರೆ, 40 ಪರ್ಸೆಂಟ್ ಕಮಿಷನ್ ಇಲ್ಲ ಎಂದು ಕೆಂಪಣ್ಣ ಅವರಿಗೂ ನಾವು ಹೇಳಿದ್ದೇವು ಎಂದಿದ್ದಾರೆ.
ಅಂದು ಕೆಂಪಣ್ಣ ಮಾಡಿದ್ದ ಆರೋಪವನ್ನೇ ಅಸ್ತ್ರವಾಗಿಸಿಕೊಂಡಿದ್ದ ಕಾಂಗ್ರೆಸ್, ಬಿಜೆಪಿ ವಿರುದ್ಧ ದೊಡ್ಡ ಆಂದೋಲನವನ್ನೇ ಆರಂಭಿಸಿತ್ತು. ಬಿಜೆಪಿಗೆ 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡುವ ಮೂಲಕ ಗುತ್ತಿಗೆದಾರರ ಪರವಾಗಿ ನಿಂತಿತ್ತು. ಆದರೆ, ಇದೀಗ ಗುತ್ತಿಗೆದಾರರೇ 40 ಪರ್ಸೆಂಟ್ ಕಮಿಷನ್ ಬಿಜೆಪಿ ಪಡೆದುಕೊಂಡಿರಲಿಲ್ಲ ಎಂದಿದ್ದಾರೆ. ಇನ್ನು ಬಿಜೆಪಿ ಮೇಲಿನ 40 ಪರ್ಸೆಂಟ್ ಕಮಿಷನ್ ಆರೋಪ ನಿಜವೋ ಅಥವಾ ಆರೋಪ ಮಾತ್ರವೋ ತನಿಖೆಯಿಂದ ತಿಳಿದು ಬರಬೇಕಿದೆ.












Click it and Unblock the Notifications