ದೀಪಾವಳಿಗೆ 'ಛೋಟಾ ಬಾಂಬೆ' ಹುಬ್ಬಳ್ಳಿಯಲ್ಲಿ ಹೊಸಕಳೆ!
ಹುಬ್ಬಳ್ಳಿ, ನವೆಂಬರ್ 05 : ದೀಪಾವಳಿ ಇರುವುದು ಮುಂದಿನ ವಾರ. ಆದರೆ ಕಳೆದ ಒಂದು ವಾರದಿಂದ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಎಲ್ಲಿಲ್ಲದ ಗದ್ದಲ. 'ಛೋಟಾ ಬಾಂಬೆ' ಎಂದೇ ಖ್ಯಾತಿ ಗಳಿಸಿರುವ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ದೀಪಾವಳಿಯ ಹೊಸಕಳೆ ನಳನಳಿಸುತ್ತಿದೆ.
ಹೌದು, ದೀಪಾವಳಿ ಖರೀದಿಗೆಂದು ಈಗಲೇ ಹುಬ್ಬಳ್ಳಿಯ ಜನ ಮಾರುಕಟ್ಟೆಗೆ ಎಡತಾಕಲು ಶುರು ಮಾಡಿದ್ದಾರೆ. ಅಲ್ಲದೇ ಹತ್ತಿರದ ತಾಲೂಕು ಪ್ರದೇಶಗಳಿಂದ ಜಿಲ್ಲಾ ಕೇಂದ್ರಗಳಿಂದಲೂ ಜನ ಬರುತ್ತಿದ್ದಾರೆ. ದೂರದ ವಿಜಯಪುರ, ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿ, ಹೊಸಪೇಟೆ, ನರಗುಂದ, ರೋಣ ಮತ್ತಿರರೆಡೆಯಿಂದ ಜನಸಂದಣಿ ಬರುತ್ತಿದೆ.
ಖಾಸಗಿ ವಾಹನಗಳು, ಬಸ್ ಗಳು, ರೈಲುಗಳು ತುಂಬಿ ತುಳುಕುತ್ತಿವೆ. ಸ್ವಂತ ವಾಹನಗಳಿದ್ದವರಂತೂ ವಾಹನ ಪಾರ್ಕಿಂಗ್ ಸಲುವಾಗಿ ಪರದಾಡುವಂತಾಗಿದೆ. ಏಕೆಂದರೆ, ಇಲ್ಲಿ ಸುಮಾರು 6 ದೊಡ್ಡ ಶಾಪಿಂಗ್ ಮಾಲ್ ಗಳಿವೆ. ಜೊತೆಗೆ ಎಲ್ಲ ರೀತಿಯ ವಸ್ತುಗಳು ಸಿಗುತ್ತವೆ. ಈಗ ಹಬ್ಬದ ಸಮಯವಾದ್ದರಿಂದ ಎಲ್ಲೆಡೆ ಆಫರ್ ಗಳ ಅಬ್ಬರ. ಮಾರುಕಟ್ಟೆಯಲ್ಲಂತೂ ಕಾಲಿಡುವ ಹಾಗಿಲ್ಲ. ಎಲ್ಲಿ ನೋಡಿದಲ್ಲಿ ಟ್ರಾಫಿಕ್ ಜಾಮ್. ಬೆಳಗಿನಿಂದ ರಾತ್ರಿ 11ರವರೆಗೂ ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್. ಗೋಕುಲ ರಸ್ತೆಯಲ್ಲೇ ಸುಮಾರು 3 ಮಾಲ್ ಗಳಿರುವುದರಿಂದ ಬೆಂಗಳೂರಿನ ಎಂ.ಜಿ ರಸ್ತೆಯಂತೆ ಕಂಗೊಳಿಸುತ್ತಿದೆ. [ದೀಪಾವಳಿ ಹಬ್ಬಕ್ಕೆ ಟಾಪ್ 10 ಆನ್‌ಲೈನ್ ಆಫರ್‌ಗಳು]

ಗಲ್ಲಿಗಲ್ಲಿಯಲ್ಲಿ ಜನಜಂಗುಳಿ : ಹುಬ್ಬಳ್ಳಿ ನಗರದಲ್ಲಿ ಇರುವುದು ಮುಖ್ಯವಾದ ಮೂರು ಮಾರ್ಕೆಟ್ ಪ್ರದೇಶಗಳು. ಈ ಸಮಯದಲ್ಲೇ ಜನರು ಹೊಸ ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ಕಾಯ್ದಿರುತ್ತಾರೆ. ಹೀಗಾಗಿ ನಗರದ ಕೊಪ್ಪೀಕರ್ ರಸ್ತೆ, ದಾಜೀಬಾನಪೇಟ, ದುರ್ಗದಬೈಲ್, ಮರಾಠಾ ಗಲ್ಲಿ, ಕೋಯಿನ್ ರೋಡ್, ಸ್ಟ್ರೇಷನ್ ರೋಡಗಳಲ್ಲಿ ಓಡಾಡುವುದೇ ದುಸ್ತರವಾಗಿದೆ. ಎಲ್ಲಿ ನೋಡಿದಲ್ಲಿ ವಾಹನಗಳು, ಜನಜಂಗುಳಿ. ಎಲ್ಲ ಅಂಗಡಿಗಳು ತುಂಬಿ ತುಳುಕುತ್ತಿವೆ. ಬಂಗಾರದ ಅಂಗಡಿಗಳಲ್ಲೂ ಜನರ ಬರವಿಲ್ಲ.
ಪುಣ್ಯಕ್ಕೆ ಈಗ ಮದುವೆ, ಗೃಹಪ್ರವೇಶಗಳು ಯಾವುದೂ ಇಲ್ಲ. ಅಕಸ್ಮಾತ್ ಅಂಥ ಕೌಟುಂಬಿಕ ಕಾರ್ಯಕ್ರಮಗಳಿದ್ದರಂತೂ ಮುಗಿದೇಹೋಯಿತು. ಮಾರುಕಟ್ಟೆಯಿಂದ ಯಾವಾಗ ಮನೆಗೆ ಹೋದೇವೋ ಎಂಬಂತಾಗುತ್ತದೆ ದೂರದೂರಿನಿಂದ ಬಂದ ಜನರ ಗತಿ. ಇದನ್ನೆಲ್ಲಾ ನೋಡಿಕೊಂಡು ಸಾಕಷ್ಟು ಜನರ ಆನ್ ಲೈನ್ ಶಾಪಿಂಗ್ ಗೆ ಮೊರೆ ಹೋಗುತ್ತಿದ್ದಾರೆ. ಆದರೆ, ತಾಲೂಕು ಪ್ರದೇಶಗಳ ಮತ್ತು ಹಳ್ಳಿಗರಿಗೆ ಆನ್ ಲೈನ್ ನಲ್ಲಿ ಖರೀದಿಸುವುದು ಅಷ್ಟೇನೂ ಗೊತ್ತಾಗದಿರುವುದರಿಂದ ಅವರಂತೂ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬರಲಿಕ್ಕೇಬೇಕು.
ಧೂಳಿನ ಜಳಕ : ಇಷ್ಟೆಲ್ಲಾ ಇದ್ದರೂ, ಮಹಾನಗರದ ರಸ್ತೆಗಳಲ್ಲೆಲ್ಲಾ ತಗ್ಗುಗಳ ಬರವಿಲ್ಲ. ಅಬ್ಬಬ್ಬಬ್ಬಾ... ಎಲ್ಲಿ ನೋಡಿದ್ರೂ ಧೂಳು. ಬಂದವರಿಗೆ ಧೂಳಿನ ಜಳಕ ಗ್ಯಾರಂಟಿ! ಬೆರಳೆಣಿಕೆಯ ಪೊಲೀಸ್ ಸಿಬ್ಬಂದಿಗಳಿಂದ ಟ್ರಾಫಿಕ್ ನಿಯಂತ್ರಣವೂ ಕೂಡ ಆಗುತ್ತಿಲ್ಲ. ಇಷ್ಟು ದಿನ ಕಳಸಾ-ಬಂಡೂರಿ ಹೋರಾಟದಿಂದ ತತ್ತರಿಸಿದ, ಏಷ್ಯಾದಲ್ಲೇ ಎರಡನೇ ದೊಡ್ಡ ವೃತ್ತವಾಗಿರುವ ಚೆನ್ನಮ್ಮ ಸರ್ಕಲ್ ನ ಅಂಗಡಿಗಳವರು ದೀಪಾವಳಿಯ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಒಂಬತ್ತು ರೋಡ್ ಗಳು ಕೂಡುತ್ತವೆ. ಇಲ್ಲಂತೂ ವಾಹನಗಳ ಸಾಲುಸಾಲೇ ಕಂಡುಬರುತ್ತಿದೆ. ಇಲ್ಲೇ ಹಳೇಬಸ್ ಸ್ಟ್ಯಾಂಡ್ ಇರುವುದರಿಂದ ಜನಸಂದಣಿ ಹಗಲುರಾತ್ರಿ ಇದ್ದದ್ದೆ. ಹತ್ತಿರದಲ್ಲೇ ಇರುವ ರೈಲ್ವೆ ನಿಲ್ದಾಣವೂ ಗದ್ದಲದಿಂದ ಮುಕ್ತವಾಗಿಲ್ಲ.
ಗೋಕುಲ್ ರಸ್ತೆಯಲ್ಲಿನ ಮಾಲ್ ಗಳಿಗೆ ಮಿತಿ ಮೀರಿದ ಜನ ಬರುತ್ತಿದ್ದಾರೆ. ಅವರು ವಾಹನಗಳನ್ನು ಪಾರ್ಕಿಂಗ್ ಶುಲ್ಕ ಉಳಿಸಲು ರಸ್ತೆಯ ಪಕ್ಕವೇ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಡಬಲ್ ಟ್ರಾಫಿಕ್ ಜಾಮ್ ಆಗುತ್ತಿದೆ. ಆದರೆ ಟ್ರಾಫಿಕ್ ಪೊಲೀಸರು ಮಾತ್ರ ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ಪಾರ್ಕ್ ಮಾಡಿದ ವಾಹನಗಳ ನಂಬರ್ ಪ್ಲೇಟ್ ನ ಫೋಟೋ ತೆಗೆದು ವಾಹನ ಮಾಲೀಕರಿಗೆ 'ದಂಡ ತುಂಬಿ' ಎಂದು ನೋಟಿಸ್ ಕಳಿಸುತ್ತಿದ್ದಾರೆ. ಟ್ರಾಫಿಕ್ ಕಂಟ್ರೋಲ್ ಮಾಡುವ ಬದಲು ಒಂದಿಬ್ಬರು ಸಿಬ್ಬಂದಿ ಇದೇ ಕೆಲಸ ಮಾಡುತ್ತಿರುವುದು ಸಾರ್ವಜನಿಕರನ್ನು ಆಕ್ರೋಶಕ್ಕೀಡು ಮಾಡಿದೆ.
ಹುಬ್ಬಳಿಯು ಭಯೋತ್ಪಾದಕರ ನೆಲೆಯೂ ಆಗಿದೆ ಎಂಬ ಕುಖ್ಯಾತಿಗೆ ಒಳಗೊಂಡಿದೆ. ಹೀಗಾಗಿ ಟ್ರಾಫಿಕ್ ಪೊಲೀಸರು ಮತ್ತು ಮಹಾನಗರ ಪಾಲಿಕೆ ದೀಪಾವಳಿಯ ಮೊದಲೇ ಆಗುತ್ತಿರುವ ಗದ್ದಲಗಳನ್ನು ನಿಯಂತ್ರಣ ಮಾಡುತ್ತಿಲ್ಲ. ಇನ್ನು ಹಬ್ಬದ ಸಮಯದಲ್ಲಿ ಏನು ಮಾಡುತ್ತಾರೆ? ಎಂದು ಅಂಗಡಿಕಾರರು ದೂರುತ್ತಿದ್ದಾರೆ. ಒಟ್ಟಿನಲ್ಲಿ ಬರ, ತುಟ್ಟಿಯ ದಿನಗಳು ಎಂದು ಗೊಣಗುತ್ತಿರುವ ಜನತೆ ಮಾತ್ರ ತಮ್ಮ ಖರೀದಿಯ ಭರಾಟೆಯನ್ನು ನಿಲ್ಲಿಸುತ್ತಿಲ್ಲ! ಹಿಂಗೈತಿ ನೋಡ್ರಿ ಹುಬ್ಬಳ್ಳಿ. ನಿಮ್ಮೂರಾಗೂ ಹಿಂಗ ಏನ್ರಿ? [ಫೋಟೋ : ಕಿರಣ್ ಸ್ಟುಡಿಯೋ, ಹುಬ್ಬಳ್ಳಿ.]












Click it and Unblock the Notifications