ಕಳಸಾ-ಬಂಡೂರಿಗಾಗಿ ಭಾನುವಾರ ತಾರೆಯರ ಹೋರಾಟ
ಹುಬ್ಬಳ್ಳಿ, ಸೆಪ್ಟೆಂಬರ್, 12 : ಕಳಸಾ-ಬಂಡೂರಿ ನಾಲಾ ಯೋಜನೆಗೆ ಒತ್ತಾಯಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟ 59ನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಕನ್ನಡ ಚಿತ್ರರಂಗ ಹೋರಾಟದಲ್ಲಿ ಪಾಲ್ಗೊಳ್ಳಲಿದೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸುವ ಮೂಲಕ ರೈತರು ಹೋರಾಟ ನಡೆಸಿದ್ದಾರೆ. ಧಾರವಾಡ, ನರಗುಂದದಲ್ಲಿ ಹೋರಾಟ ತೀವ್ರಗೊಂಡಿದೆ. ಭಾನುವಾರದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಚಿತ್ರರಂಗದ ಅನೇಕರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. [ಕಳಸಾ ಬಂಡೂರಿಗಾಗಿ ಸೆ.26ರಂದು ಕರ್ನಾಟಕ ಬಂದ್]

ಬಸ್ಸು, ವಿಮಾನ, ರೈಲಿನ ಮೂಲಕ ಚಿತ್ರರಂಗದ ಗಣ್ಯರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. 'ನೆಲ, ಜಲ, ಭಾಷೆಯ ಹೋರಾಟಕ್ಕೆ ಸದಾ ಸಿದ್ಧವಾಗಿದ್ದೇನೆ. ಯಾವಾಗ ಬೇಕಾದರೂ ಹೋರಾಟಕ್ಕೆ ಕರೆದರೂ ಹೋಗಲು ಸಿದ್ಧನಿದ್ದೇನೆ' ಎಂದು ಬೆಂಗಳೂರಿನಲ್ಲಿ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. [ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]
ಯಾರು ಹೇಗೆ ಪ್ರಯಾಣ? : ಶಿವರಾಜ್ ಕುಮಾರ್ ಮತ್ತು ಯಶ್ ಇಂದು ರಾತ್ರಿ ಬೆಂಗಳೂರಿನಿಂದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿನ ಮೂಲಕ ಹುಬ್ಬಳ್ಳಿಗೆ ತೆರಳದ್ದಾರೆ. ನಿರ್ಮಾಪಕ ಭಾ.ಮಾ.ಹರೀಶ್ ನೇತೃತ್ವದಲ್ಲಿ ಹಲವು ನಟರು, ನಿರ್ಮಾಪಕರು ಎರಡು ಬಸ್ಸುಗಳ ಮೂಲಕ ಹುಬ್ಬಳ್ಳಿಗೆ ಹೊರಟಿದ್ದಾರೆ. ಕಾರವಾರದಲ್ಲಿರುವ ನಟ ದರ್ಶನ್ ಅಲ್ಲಿಂದ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ರಾಕ್‌ಲೈನ್ ವೆಂಕಟೇಶ್, ವಿಜಯಲಕ್ಷ್ಮೀ ಸಿಂಗ್, ದೊಡ್ಡಣ್ಣ, ಸುಂದರ್ ರಾಜ್, ಬಿ.ಸರೋಜಾ ದೇವಿ, ಭಾರತಿ ವಿಷ್ಣುವರ್ಧನ್, ಪೂಜಾಗಾಂಧಿ, ಅನುಪ್ರಭಾಕರ್, ವಿಜಯ್ ರಾಘವೇಂದ್ರ, ಸಾ.ರಾ.ಗೋವಿಂದು, ನೀನಾಸಂ ಸತೀಶ್ ಮುಂತಾದವರು ಹುಬ್ಬಳ್ಳಿಗೆ ಹೊರಟಿದ್ದಾರೆ.

ಕಳೆದ ವಾರ ಸುದೀಪ್ ನರಗುಂದಕ್ಕೆ ತೆರಳಿ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದರು. ಹಿರಿಯ ನಟಿ ಲೀಲಾವತಿ, ವಿನೋದ್ ರಾಜ್, ನೆನಪಿರಲಿ ಪ್ರೇಮ್, ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಮುಂತಾದವರು ಈ ವಾರ ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಏನಿದು ಯೋಜನೆ : ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಕುಡಿಯುವ ನೀರಿನ ಅಭಾವ ನೀಗಿಸಲು ಕಳಸಾ-ಬಂಡೂರಿ ನಾಲೆಗಳನ್ನು ಮಲಪ್ರಭೆಗೆ ಜೋಡಿಸುವ ಯೋಜನೆ ಇದಾಗಿದೆ. ಗೋವಾ ಸರ್ಕಾರ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ವಿವಾದ ನ್ಯಾಯಾಧೀಕರಣದ ಮುಂದಿದೆ. ಯೋಜನೆ ಜಾರಿಯಾಗಲೇಬೇಕು ಎಂದು ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ.












Click it and Unblock the Notifications