SSLC Good News: ಮಿಷನ್ ವಿದ್ಯಾಕಾಶಿಗೆ ಮೊದಲ ಹಂತದ ಯಶಸ್ಸು !
ವಿದ್ಯಾಕಾಶಿ ಎಂದೆ ಉತ್ತರ ಕರ್ನಾಟಕ ಭಾಗದಲ್ಲಿ ಚಿರಪರಿಚಿತವಾಗಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ಸಂಗೀತ, ಸಾಹಿತ್ಯ, ಕಲೆ, ಚಿತ್ರಕಲೆ, ರಂಗಭೂಮಿ ಕ್ಷೇತ್ರದಿಂದ ನೂರಾರು ಸಾಧಕರನ್ನು ಕಳುಹಿಸಿದ ಕೀರ್ತಿ ಗಳಿಸಿದ್ದ ಧಾರವಾಡ ಜಿಲ್ಲೆಗೆ ಇತ್ತೀಚಿನ ಕೆಲವು ವರ್ಷಗಳಿಂದ ಶೈಕ್ಷಣಿಕ ಹಿನ್ನೆಡೆ ಆಗಿತ್ತು. ರ‍್ಯಾಂಕ್‌ಗಳ ಬ್ಯಾಂಕ್ ಆಗಿದ್ದ ಧಾರವಾಡ ಜಿಲ್ಲೆ, ರಾಜ್ಯಮಟ್ಟದ ಶೈಕ್ಷಣಿಕ ಸಾಧನೆಯಲ್ಲಿ 23, 22ನೇ ಸ್ಥಾನಕ್ಕೆ ಬಂದು ನಿಂತ್ತಿತ್ತು.
ಧಾರವಾಡ ಜಿಲ್ಲೆಗೆ ಶೈಕ್ಷಣಿಕವಾಗಿ ಐತಿಹಾಸಿಕ ವೈಭವವನ್ನು ಮರು ಸೃಷ್ಟಿಸಲು ಮತ್ತು ವಿದ್ಯಾಕಾಶಿ ಜೊತೆಗೆ ದಿವ್ಯಕಾಶಿ ಆಗಿಸಲು ಪಣತೊಟ್ಟ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಪ್ರಸಕ್ತ ವರ್ಷದ ಶೈಕ್ಷಣಿಕ ಆರಂಭದ ದಿನಗಳಲ್ಲಿಯೇ ಶೈಕ್ಷಣಿಕ ತಜ್ಞರೊಂದಿಗೆ, ಸಂವಹನ ತಜ್ಞರೊಂದಿಗೆ ಚರ್ಚಿಸಿ, ಮಿಷನ್ ವಿದ್ಯಾಕಾಶಿ ಯೋಜನೆಯನ್ನು ಹುಟ್ಟು ಹಾಕಿದರು.

ಶಿಕ್ಷಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ, ಎಸ್.ಡಿ.ಎಂ.ಸಿ. ಸದಸ್ಯರೊಂದಿಗೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ಜರುಗಿಸಿ, ಶೈಕ್ಷಣಿಕ ಸಾಧನೆಗೆ ಪ್ರೇರೆಪಿಸಿದರು. ಪ್ರತಿ ಹಂತದಲ್ಲೂ ಸ್ವತಃ ತಾವೇ ಭಾಗವಹಿಸಿ, ಎಲ್ಲರಲ್ಲೂ ಗುರಿ ಸಾಧನೆಯ ಭರವಸೆ ಮೂಡಿಸಿದರು.
ಅದರಂತೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-1 ರ ಎಲ್ಲ ಆರು ವಿಷಯಗಳ ಪರೀಕ್ಷೆಗಳು ಜಿಲ್ಲೆಯಾದ್ಯಂತ ಶಾಂತವಾಗಿ, ಸುಸೂತ್ರವಾಗಿ, ಪಾರದರ್ಶಕವಾಗಿ ಜರುಗಿದವು. ನಕಲು, ಡಿಬಾರದಂತ ಯಾವ ಕಪ್ಪು ಚುಕ್ಕೆಗಳಿಲ್ಲದೇ ಪರೀಕ್ಷೆಗಳು ಜರುಗಿದವು. ಪ್ರತಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಬರೆದರು. ಯಾವ ಗೊಂದಲಗಳಿಗೂ ಅವಕಾಶವಿಲ್ಲದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಿದರು.
ಪರೀಕ್ಷಾ ದಿನಗಳಂದು ಎಲ್ಲ ತಾಲೂಕುಗಳಿಗೂ ಸ್ವತಃ ಜಿಲ್ಲಾಧಿಕಾರಿಗಳೆ ಸಂಚರಿಸಿ, ಭೇಟಿ ನೀಡಿದರು. ಪರೀಕ್ಷೆ, ಪ್ರಶ್ನೆ ಪತ್ರಿಕೆಯ ಕಠಿಣತೆ ಕುರಿತು ಶಿಕ್ಷಕಿಯಂತೆ ವಿದ್ಯಾರ್ಥಿಗಳೊಂದಿಗೆ ಸ್ವತಃ ಜಿಲ್ಲಾಧಿಕಾರಿಗಳು ಸಂವಾದ ಮಾಡಿದರು. ಇದರಿಂದ ಪರೀಕ್ಷೆಯಿಂದ ಪರೀಕ್ಷೆಗೆ ವಿದ್ಯಾರ್ಥಿಗಳ ಮನೋಬಲ, ಆತ್ಮಸ್ಥೈರ್ಯ ಹೆಚ್ಚಿತ್ತು. ಸರ್ವ ಸಾಮಾಜಿಕ ಸಮಸ್ಯೆಗಳಿಗೂ ಉತ್ತಮ ಶಿಕ್ಷಣವೇ ಮದ್ದು ಎಂದು ನಂಬಿರುವ ಜಿಲ್ಲಾಧಿಕಾರಿಗಳು ಎಡೆಬಿಡದೆ, ನಿರಂತರ ಶಾಲಾ ಭೇಟಿ, ರೂಢಿ ಪರೀಕ್ಷೆ, ಪಾಸಿಂಗ್ ಪ್ಯಾಕೇಜ್ ಮತ್ತು ಸಾಧನಾ ಮೆಟ್ಟಿಲು ಎಂಬ ವಿಶೇಷ ಪುಸ್ತಕ ವಿತರಣೆ, ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಮಾಡುವ ಮೂಲಕ ಶಿಕ್ಷಣ ಇಲಾಖೆಗೆ ಹೊಸ ಭರವಸೆ, ಚೈತನ್ಯ ಮೂಡಿಸಿದರು.

ಪ್ರಸಕ್ತ ಸಾಲಿನ ಕೊನೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಾದ ಇಂದು (ಏ.04) ಧಾರವಾಡ ತಾಲೂಕಿನ ಮುಗದ, ಅಳ್ನಾವರ ಪಟ್ಟಣದ ಮಿಲ್ಲತ್ ಉರ್ದು ಪ್ರೌಢಶಾಲೆ ಹಾಗೂ ಎನ್.ಇ.ಎಸ್ ಪ್ರೌಢಶಾಲೆಗಳ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ನಂತರ ಅವರು ಅಳ್ನಾವರ ಪಟ್ಟಣದ ಎನ್.ಇ.ಎಸ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಂತರ ವಿದ್ಯಾರ್ಥಿಗಳು ಆಚರಿಸಿದ ಸಂಭ್ರಮದಲ್ಲಿ ಪಾಲ್ಗೊಂಡು ಸಂತಸ ಪಟ್ಟರು. ಖುಷಿಯಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಅಭಿನಂದಿಸಿ, ನಿಮ್ಮ ಭವಿಷ್ಯದ ಜೀವನ ಉತ್ತಮವಾಗಲಿ ಎಂದು ಶುಭ ಹಾರೈಸಿದರು.
ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಎಸ್.ಎಸ್.ಎಲ್.ಸಿ ಬೋರ್ಡ್ ಮಾರ್ಗಸೂಚಿ ಪ್ರಕಾರ ಎಲ್ಲ ಕಡೆಯೂ ಸಿಸಿಟಿವಿ ಕಣ್ಗಾವಲುಗಳಿಂದ ಪರೀಕ್ಷೆಯನ್ನು ನಡೆಸಲಾಗಿದೆ. ಜಿಲ್ಲಾ ಪಂಚಾಯತ ಸಿಇಓ ಕಚೇರಿಯಲ್ಲಿ ತಂಡಗಳನ್ನು ಮಾಡಿ, ಲೈವ ವೆಬ್‍ಕಾಸ್ಟಿಂಗ್ ಕೇಂದ್ರದಿಂದ ಪರೀಕ್ಷೆ ಸಮಯದಲ್ಲಿ ವೀಕ್ಷಣೆಯನ್ನು ಮಾಡಲಾಗಿದೆ. ಪಾರದರ್ಶಕವಾಗಿ ಪರೀಕ್ಷೆ ನಡೆಯುವಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.
ಈ ವರ್ಷ 28,666 ಜನ ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ. ಒಟ್ಟಾರೆಯಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗೈರು ಆದವರು ಸಂಖ್ಯೆ ತುಂಬಾ ಕಡಿಮೆ ಇದೆ. ನೊಂದಾಯಿತ ವಿದ್ಯಾರ್ಥಿಗಳ ಪೈಕಿ ಅಂದಾಜು ಶೇ 1.5 ರಷ್ಟು ವಿದ್ಯಾರ್ಥಿಗಳು ನಾನಾ ಕಾರಣಗಳಿಂದ ಗೈರುರಾಗಿದ್ದಾರೆ. ಆದರೆ ಸರಿಸುಮಾರು ಶೇ. 98.27 ರಷ್ಟು ವಿದ್ಯಾರ್ಥಿಗಳು ಹಾಜರಾಗಿ ಉತ್ತಮವಾಗಿ ಎಲ್ಲ ಪರೀಕ್ಷೆಗಳನ್ನು ಬರೆದಿದ್ದಾರೆ ಎಂದು ಹೇಳಿದರು.
ಎಲ್ಲ ಪರೀಕ್ಷೆ ದಿನವೂ ಮಕ್ಕಳು ಅತ್ಯಂತ ಖುಷಿಯಿಂದ ಅತ್ಯಂತ ಸುಂದರವಾಗಿ ಬರೆದಿದ್ದೇವೆ ಎಂದು ಹೇಳಿದ್ದಾರೆ. ರೂಢಿ ಪರೀಕ್ಷೆಯಲ್ಲಿ ಕೊಟ್ಟಿದ್ದ ಸುಮಾರು ಪ್ರಶ್ನೆಗಳು ವಾರ್ಷಿಕ ಪರೀಕ್ಷೆಯಲ್ಲಿ ಬಂದಿದ್ದವು. ಚೆನ್ನಾಗಿ ಬರೆದಿದ್ದೇವೆ. ಪರೀಕ್ಷೆಯಲ್ಲಿ ಪಾಸು ಆಗುತ್ತೇವೆ. ಮಿಷನ್ ವಿದ್ಯಾ ಕಾಶಿಯಿಂದ ರೂಢಿ ಪರೀಕ್ಷೆಗಳು ಅವರಿಗೆ ತುಂಬಾ ಉಪಯೋಗವಾಗಿದೆ ಎಂದು ಮಕ್ಕಳು ಹೇಳಿದಾಗ ನಮಗೆ ತುಂಬಾ ಖುಷಿಯಾಯಿತು. ಈ ಬಾರಿಯ ಪ್ರಯತ್ನದಿಂದ ಎಸ್.ಎಸ್.ಎಲ್.ಸಿ ಯಲ್ಲಿ ಒಳ್ಳೆಯ ಫಲಿತಾಂಶ ಸಿಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಹತ್ತು ವರ್ಷಗಳಿಂದ ನಮ್ಮ ಜಿಲ್ಲೆ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕೆಳ ಸ್ಥಾನದಲ್ಲಿ ಇದೆ. ಅದಕ್ಕಾಗಿ ಟಾಪ್ 10 ಜಿಲ್ಲೆಗಳಲ್ಲಿ ಧಾರವಾಡ ಜಿಲ್ಲೆಯನ್ನು ತೆಗೆದುಕೊಂಡು ಬರಬೇಕು ಎಂದು, ಎಲ್ಲ ಶಿಕ್ಷಕರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು ಎಲ್ಲರೂ ಈ ಸಂದರ್ಭದಲ್ಲಿ ಸಹಕಾರ ನೀಡಿದ್ದಾರೆ. ಅವರಿಗೆ ಅಭಿನಂದನೆಯನ್ನು ಸಲ್ಲಿಸಬೇಕು. ಏಕೆಂದರೆ ನಾವು ಮಾಡಿದ ಪರೀಕ್ಷೆಯಲ್ಲಿ ಟೆಸ್ಟ್ ಪರೀಕ್ಷೆಯಿಂದ ಹಿಡಿದು ಸುಮಾರು ವಿನೂತನ ವಿಷಯಗಳನ್ನು ಮಿಷನ್ ವಿದ್ಯಾಕಾಶಿಯಲ್ಲಿ ಮಾಡಲಾಗಿದೆ.
ಶಿಕ್ಷಕರಿಗೆ ವರ್ಕಶಾಪ್ ಮಾಡುವುದು, ಚೆನ್ನಾಗಿ ಓದುವ ಮಕ್ಕಳಿಗೆ ಟಾಪರ್ಸ್ ಮಾಡುವ ನಿಟ್ಟಿನಲ್ಲಿ ತಾಲೂಕ ಮಟ್ಟದಲ್ಲಿ ಮತ್ತು ಜಿಲ್ಲಾಮಟ್ಟದಲ್ಲಿ ಹಲವಾರು ತರಬೇತಿ ಕೊಡುವುದು. ಅದಕ್ಕೆ ಎಲ್ಲದಕ್ಕೂ ಎಚ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಪ್ರೋತ್ಸಾಹ ನೀಡಿದ್ದಾರೆ. ಇದಕ್ಕೆ ಶಿಕ್ಷಕರು ಹೆಚ್ಚುವರಿ ತರಗತಿಯನ್ನು ತೆಗೆದುಕೊಳ್ಳುವ ಮೂಲಕ ಜುಲೈ ತಿಂಗಳಲ್ಲಿ ಪರೀಕ್ಷೆಯನ್ನು ಮಾಡಿ, ಕಲಿಕೆಯಲ್ಲಿ ಮುಂದಿರುವ ಮತ್ತು ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ವಿಶೇಷವಾಗಿ ತರಗತಿಯನ್ನು ತೆಗೆದುಕೊಳ್ಳುವ ಮೂಲಕ ಅವರನ್ನು ಪರೀಕ್ಷೆಗೆ ಸುಧಾರಣೆ ಮಾಡಿದ್ದಾರೆ. ಎಸ್.ಡಿ.ಎಂ.ಸಿ ಮತ್ತು ಬೋಧಕ, ಬೋಧಕೇತರರು, ಜನಪ್ರತಿನಿಧಿಗಳು ಸಹಕರಿಸಿದ್ದಕ್ಕೆ ಧನ್ಯವಾದಗಳು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಇಂದಿನ ತೃತಿಯ ಭಾಷಾ ವಿಷಯ ಪರೀಕ್ಷೆ ಹಾಜರಾತಿ: ಇಂದು ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-1 ರ ತೃತಿಯ ಭಾಷಾ ವಿಷಯದಲ್ಲಿ ಹುಬ್ಬಳ್ಳಿ ಶಹರದ 8,655 ವಿದ್ಯಾರ್ಥಿಗಳು ನೊಂದಣಿ ಮಾಡಿದ್ದು, 8,455 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 200 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಧಾರವಾಡ ಶಹರದಲ್ಲಿ 5,289 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದು, 5,188 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 101 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಧಾರವಾಡ ಗ್ರಾಮೀಣದಲ್ಲಿ 3,841 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದು, 3,805 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 36 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹುಬ್ಬಳ್ಳಿ ಗ್ರಾಮೀಣದಲ್ಲಿ 3,716 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದು, 3,674 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 42 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಲಘಟಗಿ ತಾಲೂಕಿನಲ್ಲಿ 2,540 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದು, 2,496 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 44 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕುಂದಗೋಳ ತಾಲೂಕಿನಲ್ಲಿ 1,950 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದು, 1,916 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 34 ವಿದ್ಯಾರ್ಥಿಗಳು ಗೈರಾಗಿದ್ದಾರೆ. ನವಲಗುಂದ ತಾಲೂಕಿನಲ್ಲಿ 2,513 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದು, 2,476 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 37 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಒಟ್ಟು 28,504 ವಿದ್ಯಾರ್ಥಿಗಳು ತೃತಿಯ ಭಾಷಾ ವಿಷಯ ಪರೀಕ್ಷೆಗೆ ನೋಂದಣಿ ಮಾಡಿದ್ದು, ಈ ಪೈಕಿ 28,010 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 494 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications