ಅಪ್ಪ ಕಿರಿಕಿರಿ ಎಂದು ಕೊಲೆ ಮಾಡಿ ಅಪಘಾತದ ನಾಟಕವಾಡಿದ ಮಗ
ಧಾರವಾಡ, ನವೆಂಬರ್ 6: ಕಿರಿಕಿರಿ ಮಾಡುತ್ತಿದ್ದರು ಎಂದು ತಂದೆಯನ್ನೇ ಹತ್ಯೆ ಮಾಡಿ ಅಪಘಾತವೆಂದು ನಾಟಕವಾಡಿದ್ದ ಮಗನನ್ನು ನವಲಗುಂದ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 26ರಂದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರು ಹಾಗೂ ಹಂಚನಾಳ ಗ್ರಾಮದ ರಸ್ತೆಯಲ್ಲಿ ಶವವೊಂದು ಪತ್ತೆಯಾಗಿತ್ತು. ಅದನ್ನು ಅಪಘಾತದಲ್ಲಿ ಸಾವನ್ನಪ್ಪಿರುವ ರೀತಿ ಬಿಂಬಿಸಲಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಇದು ಕೊಲೆ ಇರಬಹುದು ಎಂದು ಅನುಮಾನಗೊಂಡಿದ್ದರು. ಮಗ ರಮೇಶ ಅಪಘಾತ ಎಂದು ಪ್ರಕರಣ ದಾಖಲಿಸುವಂತೆ ಕೇಳಿದ್ದು ಅವರ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು. ಶವ ಪರೀಕ್ಷೆ ವೇಳೆ ಸಿಕ್ಕ ಸಾಕ್ಷಿಗಳನ್ನು ಕಲೆ ಹಾಕಿದಾಗ ಇದು ಕೊಲೆ ಎಂದು ತಿಳಿದು ತನಿಖೆ ಆರಂಭಿಸಿದ್ದರು.
ಮಗನ ಕುರಿತು ಮೊದಲೇ ಅನುಮಾನವಿದ್ದುದರಿಂದ ಆತನ ಮೊಬೈಲ್ ನ ಕಾಲ್ ರೆಕಾರ್ಡ್ ಪರಿಶೀಲನೆ ನಡೆಸಿದರು. ತನಿಖೆ ಮುಂದುವರೆಸಿದಾಗ, ಮಗನೇ ತನ್ನ ತಂದೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. 65 ವರ್ಷದ ಹನುಮಂತಪ್ಪ ಕಿರೇಸೂರು ಎಂಬ ವ್ಯಕ್ತಿಯನ್ನು ಮಗ ರಮೇಶ ಸಂಬಂಧಿಗಳಾದ ವೆಂಕಪ್ಪ ಹಾಗೂ ಸತ್ಯಪ್ಪ ಎನ್ನುವವರೊಂದಿಗೆ ಸೇರಿ ಹತ್ಯೆ ಮಾಡಿ ನಂತರ ಅಪಘಾತ ಎಂದು ನಾಟಕವಾಡಿದ್ದರು.

ಮನೆಯಲ್ಲಿ ತಂದೆ ಹನುಮಂತಪ್ಪ ಕಿರಿಕಿರಿ ಮಾಡುತ್ತಿದ್ದುದರಿಂದ ಬೇಸತ್ತು ಕೊಲೆ ಮಾಡಿದೆ, ಮನೆಗೆ ಬಂದರೆ ಮನಸ್ಸಿಗೆ ಶಾಂತಿಯೇ ಇರಲಿಲ್ಲ, ಹಾಗಾಗಿ ತಂದೆಯನ್ನು ಕೊಂದೆ ಎಂದು ಹೇಳಿಕೊಂಡಿದ್ದಾನೆ.












Click it and Unblock the Notifications