ಸಿದ್ದರಾವಣ, ನೀಚಣ್ಣ; ನವಲಗುಂದದಲ್ಲಿ ಸಿದ್ದರಾಮಯ್ಯ ವಿರುದ್ಧ ಕಟೀಲ್ ಕುಹಕ
ಧಾರವಾಡ, ಅಕ್ಟೋಬರ್, 12: ಸಿದ್ದರಾಮಯ್ಯಗೆ ಸಿದ್ದರಾವಣ, ನೀಚಣ್ಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನವಲಗುಂದ ಪಟ್ಟಣದಲ್ಲಿ ಲೇವಡಿ ಮಾಡಿದರು.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, "ಹಿಂದಿನಿಂದ ಕಾಂಗ್ರೆಸ್ ಭಯೋತ್ಪಾದಕರ ಪರ ನಿಂತಿದೆ. ಇಂದಿರಾ, ಸೋನಿಯಾ, ರಾಹುಲ್ ಗಾಂಧಿ ಎಲ್ಲರೂ ಭಯೋತ್ಪಾದನೆ ಪರ ಇದ್ದವರು. ಈ ರಾಜ್ಯದ ಏಕೈಕ ರಾವಣ ಸಿದ್ದರಾವಣ ಸಹ ಅದನ್ನೇ ಮಾಡಿದ್ದು." ಅವರೂ ಸಹ ಭಯೋತ್ಪಾದಕರ ಪರ ಇದ್ದರು. ಸಿಎಂ ಆದಾಗ ಸಿದ್ದರಾಮಯ್ಯ ಅವರು ಗೋ ಹಂತಕರ ಪರ ನಿಂತಿದ್ದರು. 24 ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಕಣ್ಣೀರು ಹಾಕಲಿಲ್ಲ. ಶೃಂಗೇರಿಯಲ್ಲಿ ಗೋ ಹಂತಕನನ್ನು ಪೊಲೀಸರು ಗುಂಡಿಟ್ಟಿದ್ದರು. ಆಗ ಆತನ ಮನೆಗೆ ಹೋಗಿ ಕಣ್ಣೀರು ಹಾಕಿದ್ದರು. ಹಿಂದೂ ಕಾರ್ಯಕರ್ತರ ಹಂತಕರ ಕೇಸ್ ವಾಪಸ್ ತೆಗೆದುಕೊಂಡಿದ್ದರು. ಅದರಿಂದ ಪಿಎಫ್‌ಐ ವ್ಯಾಪಕವಾಗಿ ಬೆಳೆಯಿತು," ಎಂದು ಕಟೀಲ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
"ಆದರೆ ಪಿಎಫ್‌ಐ ಬ್ಯಾನ್ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು. ಕಾಂಗ್ರೆಸ್ ವಿಭಜನೆ ಮಾಡುತ್ತ ಬಂದಿದೆ. ನಮ್ಮ ರಾಜ್ಯದಲ್ಲಿ ಧರ್ಮ ವಿಭಜನೆಯನ್ನು ನೀಚಣ್ಣ ಸಿದ್ದರಾಮಯ್ಯ ಮಾಡಿದ್ದರು. ಕಾಂಗ್ರೆಸ್ ಗಾಂಧಿ ಟೋಪಿ ಇಟ್ಟುಕೊಂಡು ಜನರಿಗೆ ಟೋಪಿ ಹಾಕಿದೆ. ಆದರೆ ರಾಮರಾಜ್ಯ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು. ಕಾಂಗ್ರೆಸ್ ಸಭೆಗಳಲ್ಲಿ ಭಾರತ ಮಾತಾ ಕೀ ಜೈ ಇರಲಿಲ್ಲ. ಈಗ ಎಲ್ಲರನ್ನೂ ಗಾಂಧಿ ಮಾಡಿದ್ದಾರೆ. ಈಗ ವಾದ್ರಾನನ್ನು ಗಾಂಧಿ ಮಾಡುವುದೊಂದು ಬಾಕಿ ಇದೆ." ಎಂದು ವ್ಯಂಗ್ಯವಾಡಿದರು.

ನವಲಗುಂದದಿಂದ ವಿಜಯ ಯಾತ್ರೆ ಪ್ರಾರಂಭ
ವಿಜಯಪುರ, ಬಾಗಲಕೋಟೆ ಮುಗಿಸಿ ನವಲಗುಂದಕ್ಕೆ ಬಂದಿದ್ದೇವೆ. ಇಡೀ ನಾಡು ಕೇಸರಿ ಅಲೆಯಾಗಿ ಪರಿವರ್ತನೆ ಆಗುತ್ತಿದೆ. ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ಬಿಜೆಪಿ ಧ್ವಜ ಹಾರುತ್ತಿದೆ. ಬಿಜೆಪಿಯ ಶಕ್ತಿಯಾಗಿ ಬೆಳೆಯುತ್ತಿದೆ. ನಮ್ಮ ಯಾತ್ರೆ 150ರ ಸಂಕಲ್ಪ ಇಟ್ಟುಕೊಂಡು ಹೊರಟಿದೆ. ಮೊಟ್ಟ ಮೊದಲ ವಿಜಯದ ಯಾತ್ರೆ ನವಲಗುಂದದಿಂದಲೇ ಪ್ರಾರಂಭ ಆಗಲಿದೆ. ಇನ್ನು ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರವೂ ಹೆಚ್ಚಾಗಿದೆ. ನಮಗೆ ಮಳೆರಾಯನ ಆಶೀರ್ವಾದವೂ ಇದೆ. ನಾವು ಹೋದ ಕಡೆಯಲೆಲ್ಲ ವರುಣ ತಂಪು ಎರೆಯುತ್ತಿದ್ದಾನೆ. ನವಲಗುಂದ ಈಗ ಕಾಂಗ್ರೆಸ್ ಮುಕ್ತ ಆಗಿದ್ದು, ಅದು ಬಿಜೆಪಿಯ ಶಕ್ತಿ ಕೇಂದ್ರ ಆಗಿ ಪರಿವರ್ತನೆಯಾಗಿದೆ. ಜಗನ್ನಾಥರಾವ್ ಜೋಶಿಯವರ ನಾಡು ನರಗುಂದ. ಆಗಿನಿಂದ ನರಗುಂದ ಬಿಜೆಪಿ ಶಕ್ತಿ ಕೇಂದ್ರ ಆಗಿದೆ. ನರಗುಂದದ ದೃಷ್ಟಿ ಈಗ ನವಲಗುಂದದ ಮೇಲೆ ಬಿದ್ದಿದೆ ಎಂದು ಹೇಳಿದರು.

ನೇಪಾಳದ ತಾಯಿ ಬಗ್ಗೆ ಕಟೀಲ್ ಹೇಳಿದ್ದೇನು?
ನೇಪಾಳದಲ್ಲಿ 2 ವರ್ಷದ ಹಿಂದೆ ಮಗುವಿನ ನಾಮಕರಣ ನಡೆದಿತ್ತು. ಆ ನೇಪಾಳದ ತಾಯಿ ತನ್ನ ಮಗುವಿಗೆ ಭಾರತ ಅಂತಾ ಹೆಸರಿಟ್ಟಿದ್ದರು. ಆಗ ಪತ್ರಕರ್ತರು ಆ ತಾಯಿ ಬಳಿಗೆ ಹೋಗಿದ್ದರು. ಯಾಕೆ ಪಕ್ಕದ ಭಾರತದ ಹೆಸರಿಟ್ಟಿದ್ದು ಎಂದು ಕೇಳಿದ್ದರು. ಆಗ ಉತ್ತರಿಸಿದ ತಾಯಿ ಭೂಕುಸಿತ ಆದಾಗ ಭಾರತೀಯ ಸೈನಿಕರು ನನ್ನನ್ನು ರಕ್ಷಣೆ ಮಾಡಿದ್ದರು. ನರೇಂದ್ರ ಮೋದಿ ತನ್ನ ಸೈನಿಕರನ್ನು ಕಳುಹಿಸಿದ್ದರು. ಅದರಿಂದ ನಾನು ಬದುಕಿದೆ. ಹೀಗಾಗಿ ನಾನು ಭಾರತದ ಹೆಸರಿಟ್ಟಿದ್ದೇನೆ ಎಂದಿದ್ದಳು ಎಂದು ಹೇಳಿದರು.

ರಷ್ಯಾ-ಉಕ್ರೇನ್ ಯುದ್ದದಲ್ಲಿ ನಮ್ಮ ಧ್ವಜ ಹಾರಾಟ
ಕಾಶ್ಮೀರ ಲಾಲ್ ಚೌಕ್ ಮತ್ತು ಹುಬ್ಬಳ್ಳಿ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಹೋರಾಟ ಮಾಡಬೇಕಿತ್ತು. ಆದರೆ ಇಂದು ಹುಬ್ಬಳ್ಳಿ, ಕಾಶ್ಮೀರದಲ್ಲಿಯೂ ಭಾರತ ಮಾತಾ ಕೀ ಜೈ ಇದೆ. ರಷ್ಯಾ-ಉಕ್ರೇನ್ ಮಧ್ಯೆಯೂ ಘೋಷಣೆ ಮೊಳಗುತ್ತಿದೆ. ರಷ್ಯಾ-ಉಕ್ರೇನ್ ಯುದ್ದದಲ್ಲಿ ತ್ರಿವರ್ಣ ಧ್ವಜ ಕಂಡಾಗ ಯುದ್ಧ ನಿಂತಿತ್ತು. ಪಾಕಿಸ್ತಾನದ ಲೋಕಸಭೆಯಲ್ಲಿ ಭಾರತದ ವಿದೇಶಾಂಗ ನೀತಿಯವರು ಹೊಗಳಿದ್ದಾರೆ ಎಂದು ನಳಿನಕುಮಾರ್ ಕಟೀಲ್ ಹೇಳಿದರು.

ಸೌಂಡ್ ಸೆಟ್ ಹುಡುಗನಿಗೆ ಕಟೀಲ್ ಪ್ರಶ್ನೆ
ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆದಿದ್ದ ಸಂಕಲ್ಪ ಸಭೆಯಲ್ಲಿ ಮಾತನಾಡುವ ವೇಳೆ ಮೈಕ್ ಬಂದ್ ಆಗಿತ್ತು. ಆಗ ಧ್ವನಿವರ್ಧಕ ವ್ಯವಸ್ಥೆಯ ಹುಡುಗನಿಗೆ ಕಟೀಲ್ ಪ್ರಶ್ನೆ ಮಾಡಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ನಿಮ್ಮದು ಯಾವುರಣ್ಣಾ? ಹುಬ್ಬಳ್ಳಿನಾ? ಕನಕಪುರದಿಂದ ಬಂದಿಲ್ಲ ಅಲ್ವಾ? ಸಿದ್ದರಾಮಯ್ಯ ಕಳುಹಿಸಿದ್ದಾ? ಅಥವಾ ಡಿ.ಕೆ.ಶಿವಕುಮಾರ್ ಕಳುಹಿಸಿದ್ದಾ? ಎಂದು ಧ್ವನಿವರ್ಧಕ ಹುಡುಗನನ್ನು ಕಟೀಲ್ ಪ್ರಶ್ನೆ ಮಾಡಿ ನಗೆಪಾಟಲಿಗೆ ಕಾರಣರಾದರು.












Click it and Unblock the Notifications