ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ: ವ್ಯಾಪ್ತಿ, ವಿವರಗಳು
ಧಾರವಾಡ, ಜನವರಿ 22: ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ ಬಳಿಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ಮತ್ತು ಹುಬ್ಬಳ್ಳಿ ಪ್ರತ್ಯೇಕ ಪಾಲಿಕೆ ರಚನೆ ಮಾಡಿ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ನೂತನ ಧಾರವಾಡ ಮಹಾನಗರ ಪಾಲಿಕೆಗೆ 120.94 ಮತ್ತು ಹುಬ್ಬಳ್ಳಿ ಮಹಾನಗರ ಪಾಲಿಕೆಗೆ 127.05 ಚದರ ಕಿಲೋ ಮೀಟರ್ ವ್ಯಾಪ್ತಿಯನ್ನು ನಿಗದಿ ಮಾಡಲಾಗಿದೆ.
ಜನವರಿ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಮಾಡಲು ಒಪ್ಪಿಗೆ ನೀಡಲಾಗಿತ್ತು. ಈಗ ರಾಜ್ಯಪತ್ರದಲ್ಲಿ ಈ ಕುರಿತು ಆದೇಶವನ್ನು ಹೊರಡಿಸಿದ್ದು, 30 ದಿನಗಳ ಕಾಲ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ.

ಹೊಸ ಪಾಲಿಕೆಯ ವಿವರ: ನೂತನವಾಗಿ ರಚನೆಯಾಗುವ ಧಾರವಾಡ ಮಹಾನಗರ ಪಾಲಿಕೆ ಕುರಿತು ಆದೇಶವನ್ನು ಹೊರಡಿಸಲಾಗಿದ್ದು, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಸೆಕ್ಷನ್-3 ಮತ್ತು 4 ರನ್ವಯ, ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಘನತೆವೆತ್ತ ಕರ್ನಾಟಕ ರಾಜ್ಯಪಾಲರು
* ಅಂಥ ಪ್ರದೇಶದ ಜನಸಂಖ್ಯೆ ಮೂರು ಲಕ್ಷಕ್ಕಿಂತ ಕಡಿಮೆಯಿಲ್ಲದ ಹೊರತು
* ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಮೂರು ಸಾವಿರ ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು
* ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಆರು ಕೋಟಿ ರೂಪಾಯಿಗಳು ಅಥವಾ ವಾರ್ಷಿಕ ತಲಾ ಒಬ್ಬನಿಗೆ ಎರಡು ನೂರು ರೂಪಾಯಿಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚು ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು
* ಅಂಥ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು
ಧಾರವಾಡ ಜಿಲ್ಲೆಯ ಹಾಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರದೇಶವನ್ನು ವಿಭಜಿಸಿ ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಹಾಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಶೆಡ್ಯೂಲ್-ಬಿ(1) ರಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಶೆಡ್ಯೂಲ್-ಎ(1) ರಲ್ಲಿನ ಪ್ರದೇಶವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರತ್ಯೇಕಿಸಿ ದೊಡ್ಡ ನಗರ ಪ್ರದೇಶ ಎಂದು ಉಷ್ಘೋಷಿಸಿ ಸದರಿ ದೊಡ್ಡ ನಗರ ಪ್ರದೇಶವನ್ನು 'ಧಾರವಾಡ ಮಹಾನಗರ ಪಾಲಿಕೆ' ಎಂದು ಪದನಾಮೀಕರಿಸಲು ಹಾಗೂ ಸದರಿ ದೊಡ್ಡ ನಗರ ಪ್ರದೇಶಕ್ಕೆ ಮಹಾನಗರ ಪಾಲಿಕೆಯನ್ನು ಸ್ಥಾಪಿಸಲು ಜೊತೆಗೆ ಹಾಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೂ ನಿರ್ದಿಷ್ಟಪಡಿಸಲಾದ ಪರಿಮಿತಿ ನಿಗದಿಗೊಳಿಸಿದ್ದಾರೆ.
ಆಕ್ಷೇಪಣೆಗಳನ್ನು ಸ್ವೀಕಾರ ಮಾಡಿ, ಅವುಗಳನ್ನು ಇತ್ಯರ್ಥಗೊಳಿಸಿದ ಬಳಿಕ ಈ ಕುರಿತು ಅಧಿಕೃತ ಆದೇಶ ಪ್ರಕಟವಾಗಲಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಚನೆಗೊಂಡು 62 ವರ್ಷಗಳು ಕಳೆದಿತ್ತು. ಪಾಲಿಕೆ ಅನುದಾನದಲ್ಲಿ ಹೆಚ್ಚಿನ ಪಾಲು ಹುಬ್ಬಳ್ಳಿಗೆ ಹೋಗುತ್ತಿತ್ತು ಎಂಬುದು ಧಾರವಾಡ ಭಾಗದ ಜನರ ಆರೋಪವಾಗಿತ್ತು.
ಈಗ ಪ್ರತ್ಯೇಕ ಪಾಲಿಕೆ ರಚನೆಯಾಗುವ ಕಾರಣ ಧಾರವಾಡ ಮಹಾನಗರ ಪಾಲಿಕೆಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಲಾಗುತ್ತದೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ಜನರು ನಿರೀಕ್ಷೆ ಮಾಡುತ್ತಿದ್ದಾರೆ.
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಕುರಿತು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, 'ಸ್ಥಳೀಯ ಶಾಸಕರ ಸತತ ಪ್ರಯತ್ನ ಅದರಲ್ಲೂ ವಿಶೇಷವಾಗಿ ಅರವಿಂದ ಬೆಲ್ಲದ್ ಅವರ ಪ್ರಯತ್ನ ಹಾಗೂ ನಮ್ಮೆಲ್ಲರ ಹೋರಾಟದ ಫಲವಾಗಿ ಮತ್ತು ಪಾಲಿಕೆಯ ಸದಸ್ಯರ ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆಯ ಕನಸು ಈಗ ಸಾಕಾರಗೊಂಡಿದ್ದು ಸಂತೋಷದ ವಿಷಯ. ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ನೆರವೇರಲಿ, ಅದಕ್ಕಾಗಿ ಹೆಚ್ಚಿನ ಅನುದಾನ ರಾಜ್ಯ ಸರ್ಕಾರ ನೀಡಲಿದೆ ಎಂದು ಆಶಿಸುತ್ತೇನೆ' ಎಂದು ಹೇಳಿದ್ದಾರೆ.












Click it and Unblock the Notifications