ಗೃಹ ಸಚಿವರು ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಗುತ್ತಿಗೆ ಪಡೆದಿದ್ದೀರಾ?-ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಅಕ್ಟೋಬರ್ 03: ಶಿವಮೊಗ್ಗದಲ್ಲಿ ನಡೆದ ಗಲಭೆಯಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ಹಾಗೂ ಹಿಂದೂ ಯುವಕರ ಮೇಲೆ ಹಲ್ಲೆ ನಡೆದಿದ್ದರೂ ಸಹ,'ಕರ್ನಾಟಕದಲ್ಲಿ ಇಂತಹ ಘಟನೆಗಳು ಹೊಸತೇನಲ್ಲ' ಎಂದಿರುವ ಗೃಹ ಸಚಿವ ಪರಮೇಶ್ವರ ಅವರು ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಗುತ್ತಿಗೆ ಪಡೆದಿದ್ದೀರಾ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿರುವ ಅವರು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು, ಶಿವಮೊಗ್ಗದಲ್ಲಿ ಗಲಭೆ ನಡೆಯಲು ನೇರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವೇ ಬೆಂಬಲವಾಗಿ ನಿಂತಿದೆ. ಇದರೊಂದಿಗೆ ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಈ ಸರ್ಕಾರ ಪಣತೊಟ್ಟಂತಿದೆ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸರ್ಕಾರ ಬಂದಾಗಿನಿಂದ ಒಂದೆಡೆ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ಮತ್ತೊಂದೆಡೆ ಮತಾಂಧ ಶಕ್ತಿಗಳ ಅಟ್ಟಹಾಸಕ್ಕೆ ಬೆಂಬಲ ನೀಡುತ್ತಿದೆ. ಮತಾಂಧ ಶಕ್ತಿಗಳನ್ನು ಪೋಷಿಸಿ ಬೆಳೆಸಲೆಂದೇ ಈ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಕೇಂದ್ರ ಸಚಿವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಈ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಪ್ರತಿಕ್ರಿಯೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು, ಮಾತೆತ್ತಿದರೆ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ, ಅವರು ನುಡಿದಂತೆ ನಡೆದದ್ದು ಇದೇನಾ ಎಂದು ಪ್ರಶ್ನಿಸಿದ್ದಾರೆ.
ಅಂದು ನಾಡ ವಿರೋಧಿ ಟಿಪ್ಪುವಿನ ವಿಜೃಂಭಣೆ ಮಾಡಿದಿರಿ, ಇಂದು ರಾಷ್ಟ್ರ ವಿರೋಧಿ ಔರಂಗಜೇಬನ ವಿಜೃಂಭಣೆಯಾಗುತ್ತಿದೆ. ನಮ್ಮ ಕರ್ನಾಟಕ ಎತ್ತ ಸಾಗುತ್ತಿದೆ ಎಂದು ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಘಟನೆಯ ಹಿನ್ನೆಲೆ ಏನು..?
ಈದ್ ಮಿಲಾದ್ ಅಂಗವಾಗಿ ಶಿವಮೊಗ್ಗದಲ್ಲಿ ಬೃಹತ್ ಮಟ್ಟದಲ್ಲಿ ಮೆರವಣಿಗೆಯನ್ನು ಆಯೋಜನೆ ಮಾಡಲಾಗಿತ್ತು. ಮೆರವಣಿಗೆ ರಾಗಿಗುಡ್ಡ ತಲುಪಿದ ವೇಳೆ ಕಟೌಟ್ ವಿಚಾರವಾಗಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆಯಾಗಿದೆ ಎಂದು ವರದಿಯಾಗಿದೆ.
ಈ ವೇಳೆ ಕೆಲ ಕಿಡಿಗೇಡಿಗಗಳು ಕಲ್ಲು ತೂರಾಟ ನಡೆಸಿದ್ದಾರೆ. ಎರಡು ಕೋಮಿನ ಯುವಕರ ಗುಂಪಿನಿಂದ ಕಲ್ಲು ತೂರಾಟ ನಡೆದ ಪರಿಣಾಮ 7ಕ್ಕೂ ಹೆಚ್ಚು ಕಾರುಗಳು ಹಾಗೂ ಮನೆಯ ಕಿಟಕಿ ಗಾಜುಗಳು ಜಖಂಗೊಂಡಿವೆ. ಕಲ್ಲು ತೂರಾಟದಿಂದ ಕೆಲವರಿಗೆ ಗಂಭೀರ ಗಾಯಗಳು ಸಹ ಆಗಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು.












Click it and Unblock the Notifications