Jagadish Shettar: ಅಣ್ಣನ ಪರ 'ಧಾರವಾಡ' ಟಿಕೆಟ್‌ಗೆ ಸಹೋದರ ಬೇಡಿಕೆ
ಧಾರವಾಡ, ಮಾರ್ಚ್ 13: ಕರ್ನಾಟಕ ಲೋಕಸಭಾ ಚುನಾವಣೆಯ ಬಿಜೆಪಿ ಒಬ್ಬ ಅಭ್ಯರ್ಥಿ ಹೆಸರು ಇನ್ನೂ ಪ್ರಕಟಗೊಂಡಿಲ್ಲ. ಉತ್ತರ ಕರ್ನಾಟಕದ ಧಾರವಾಡ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಇದೀಗ ಜಗದೀಶ್ ಶೆಟ್ಟರ್ ಪರ ಸಹೋದರ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಎರಡು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದಾರೆ. ಪಕ್ಷದಲ್ಲಿ ಶೆಟ್ಟರ್ ಅವರನ್ನು ಸರಿಯಾಗಿ ನಡೆಸಿಕೊಳ್ಳದಿರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಬುಧವಾರ ಮಾತನಾಡಿದ ಪ್ರದೀಪ್ ಶೆಟ್ಟರ್ ಅವರು, ಸದರಿ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಧಾರವಾಡದಿಂದ ಸ್ಪರ್ಧಿಸುವಂತೆ ಬಹಳಷ್ಟು ಅಭಿಮಾನಿಗಳು, ಎಲ್ಲ ಸಮಾಜದಿಂದ ಒತ್ತಡವಿದೆ ಎಂದರು.

ಧಾರವಾಡ ಕ್ಷೇತ್ರದಲ್ಲಿ ನಮ್ಮ ಸಮಾಜದವರು ಬಹಳಷ್ಟು ಜನರಿದ್ದಾರೆ. ಧಾರವಾಡ ಅವರಿಗೆ ಟಿಕೆಟ್ ಕೊಟ್ಟರೆ ಬಹಳಷ್ಟು ಅನುಕೂಲವಾಗಲಿದೆ. ಜಗದೀಶ ಶೆಟ್ಟರ್ ಅವರು ಮತ್ತು ನಾವು ಅಖಂಡ ಧಾರವಾಡ ಜಿಲ್ಲೆಯಲ್ಲಿ ಬೆಳೆದವರು. ಇಲ್ಲಿ ನಮ್ಮ ಸಮಾಜದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.
ಎರಡು ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ
ಅಖಂಡ ಧಾರವಾಡದಲ್ಲಿ ಬೆಳೆದಿರುವುದರಿಂದ ಜಗದೀಶ ಶೆಟ್ಟರ್ ಅವರಿಗೆ ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರ ಟಿಕೆಟ್ ಇಲ್ಲವೇ ಹಾವೇರಿ ಕ್ಷೇತ್ರದ ಬಿಜೆಪಿ ಕೊಟ್ಟರೆ ಒಳ್ಳೆಯದು ಎಂದು ಅವರು ಪ್ರತಿಪಾದಿಸಿದರು.
ಬೆಳಗಾವಿ ಕ್ಷೇತ್ರ ನಮ್ಮ ಪಕ್ಕದ ಜಿಲ್ಲೆ, ಆದರೆ ಅದು ನಮ್ಮ ಜಿಲ್ಲೆ ಅಲ್ಲದ್ದರಿಂದ ಅಲ್ಲಿ ನಮ್ಮ ಸಂಪರ್ಕ ಕಡಿಮೆ. ಆಯಾ ಜಿಲ್ಲೆಯ ನಾಯಕರಿಗೆ ಅಲ್ಲಿಯ ಟಿಕೆಟ್ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ. ಜಗದೀಶ ಶೆಟ್ಟರ್ ರಾಜ್ಯದ ನಾಯಕರು, ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಕಾರ್ಯಕರ್ತರು, ಮುಖಂಡರು ಧಾರವಾಡಕ್ಕೆ ಕೊಡಬೇಕು ಎನ್ನುತ್ತಿದ್ದಾರೆ. ಇದರಿಂದ ಕೊಪ್ಪಳ, ಗದಗ, ಹಾವೇರಿ, ಬಾಗಲಕೋಟೆ ಕ್ಷೇತ್ರಗಳಿಗೂ ಅನುಕೂಲವಾಗಲಿದೆ ಎಂದು ಅವರ ವಿವರಿಸಿದರು.

ಪ್ರದೀಪ್ ಶೆಟ್ಟರ್ ಅಸಮಾಧಾನ
ಮಾಜಿ ಸಿಎಂ ಜಗದೀಶ ಶೆಟ್ಟರ್ ಪಕ್ಷಕ್ಕೆ ಮರಳಿದ ಮೇಲೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ವಿಚಾರ, ಅಭ್ಯರ್ಥಿ ಯಾರೇ ಆಗಲಿ, ಒಟ್ಟಾಗಿ ಕೆಲಸ ಮಾಡಬೇಕು ಅದು ಪಕ್ಷದಲ್ಲಿ ಆಗುತ್ತಿಲ್ಲ. ಸ್ವಲ್ಪ ದಿನ ಈ ರೀತಿ ನಡೆಯುತ್ತದೆ. ಅಭ್ಯರ್ಥಿ ಯಾರೇ ಆಗಲಿ ಪಕ್ಷ ಕಟ್ಟಬೇಕು ಎಂದರೆ ಎಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗಬೇಕು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ದಿನ ನನ್ನ ಅನುದಾನದಡಿಯಲ್ಲಿ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮಕ್ಕೆ ಜಗದೀಶ ಶೆಟ್ಟರ್ ಅವರು ಬಂದಿದ್ದರು. ಆ ವೇಳೆ ಮನೆಗೆ ಕರೆದಿದ್ದೆ ಹೀಗಾಗಿ ಮನೆಗೆ ಬಂದಿದ್ದರೂ ಯಾವುದೇ ಚರ್ಚೆ ಇಲ್ಲ. ಸಭೆ ನಡೆದಿಲ್ಲ ಎಲ್ಲ ಸಮಾಜದವರು ಬಂದಿದ್ದರು.
ರಾಜ್ಯಾಧ್ಯಕ್ಷರ ಗಮನಕ್ಕೆ ತರುತ್ತೇವೆ
ಕೆಲವು ಕಡೆ ಆಮಂತ್ರಣ ನೀಡುತ್ತಿದ್ದಾರೆ, ಕೆಲವು ಕಡೆ ನೀಡುತ್ತಿಲ್ಲ. ಇದರ ಬಗ್ಗೆ ಜಿಲ್ಲಾ ಘಟಕದ ಅಧ್ಯಕ್ಷರು, ಜವಾಬ್ದಾರಿ ತೆಗೆದುಕೊಂಡವರನ್ನು ಕೇಳಬೇಕು. ಅಲ್ಲದೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಮಾಹಿತಿ ನೀಡುತ್ತೇನೆ ಎಂದು ಅವರು ತಿಳಿಸಿದರು.
ಜಗದೀಶ್ ಶೆಟ್ಟರ್ ಅವರು ಪಕ್ಷಕ್ಕೆ ಮರಳಿದ ಬಳಿಕ ನಾನು ಟಿಕೆಟ್ ಕೇಳಿಲ್ಲ ಎಂದಿದ್ದರು. ಹಾವೇರಿ, ಬೆಳಗಾವಿ, ಇಲ್ಲವೇ ಧಾರವಾಡ ಈ ಕ್ಷೇತ್ರಗಳಲ್ಲಿ ವರಿಷ್ಠರು ಸೂಚನೆ ಮೇರೆಗೆ ಎಲ್ಲಿಂದಲಾದರೂ ಸ್ಪರ್ಧೆಗೆ ಸಿದ್ದ ಎಂದಿದ್ದರು. ಸದ್ಯ ಧಾರವಾಡದ ಟಿಕೆಟ್‌ಗೆ ಹಾಲಿ ಸಂಸದ ಪ್ರಹ್ಲಾದ್ ಜೋಶಿಯವರು ಆಕಾಂಕ್ಷಿಯಾಗಿದ್ದಾರೆ. ಆದರೆ ಯಾರಿಗೆ ಎಲ್ಲಿಂದ ಟಿಕೆಟ್ ಎಂಬುದು ಬಿಜೆಪಿ ಪಟ್ಟಿ ಪ್ರಕಟಗೊಂಡ ಬಳಿಕವೇ ತಿಳಿಯಲಿದೆ.












Click it and Unblock the Notifications