ನವಲಗುಂದ: ಅಮಿತ್ ಶಾ ಚುನಾವಣಾ ಪ್ರಚಾರದಲ್ಲಿ ಅಜ್ಜಿಯ ಸಖತ್ ಡಾನ್ಸ್
ಧಾರವಾಡ, ಏಪ್ರಿಲ್ 29: ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶಂಕರ್ ಪಾಟೀಲ ಮುನೇನಕೊಪ ಪರ ಕೇಂದ್ರ ಸಚಿವ ಅಮಿತ್ ಶಾ ಮತಯಾಚನೆ ಮಾಡಿದ್ದಾರೆ. ಅಮಿತ್ ಶಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಯಸ್ಸಾದ ಬಿಜೆಪಿ ಕಾರ್ಯಕರ್ತೆಯೊಬ್ಬರು ಚಿತ್ರಗೀತೆಗೆ ಸಖತ್ ಸ್ಟೆಪ್ಸ್ ಹಾಕಿರುವ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿರುವ ಇವರು ಕಾರ್ಯಕ್ರಮದ ಮಧ್ಯಮಧ್ಯಕ್ಕೂ ನವಲಗುಂದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಜಯವಾಗಲಿ ಎಂಬ ಜಯ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ವಯಸ್ಸಾದ ಬಿಜೆಪಿ ಕಾರ್ಯಕರ್ತೆಯ ಉತ್ಸಾಹ ಕಂಡ ನೂರಾರು ಕಾರ್ಯಕರ್ತರು ಸಿಳ್ಳೆ ಹೊಡೆದು ಅವರನ್ನು ಹುರಿದುಂಬಿಸಿದರು.
ಕಾಂಗ್ರೆಸ್ ರಾಹುಲ್ ಬಾಬಾ ನೇತೃತ್ವದಲ್ಲಿದೆ- ಅಮಿತ್ ಶಾ ವ್ಯಂಗ್ಯ
ಅಣ್ಣಿಗೇರಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಂಕರ್ ಪಾಟೀಲ ಮುನೇನಕೊಪ ಪರ ಕೇಂದ್ರ ಸಚಿವ ಅಮಿತ್ ಶಾ ಮತಯಾಚನೆ ಮಾಡಿದ್ದು, ಬಳಿಕ ನಡೆಸಿದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ನಿಮಗೆ ಡಬಲ್ ಎಂಜಿನ್ ಸರ್ಕಾರ (ಬಿಜೆಪಿ ಬೇಕಾ ಅಥವಾ ರಿವರ್ಸ್ ಗೇರ ಸರ್ಕಾರ (ಕಾಂಗ್ರೆಸ್) ಬೇಕಾ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಪ್ರಶ್ನಿಸಿದ್ದಾರೆ.

ಕರ್ನಾಟಕದ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ. ರೈತರ ಮೇಲೆ ಗೋಲಿಬಾರ್ ಮಾಡಿದ್ದು ಇದೇ ಕಾಂಗ್ರೆಸ್. ರೈತರ ಮೇಲೆ ಲಾಠಿ, ಗುಂಡೇಟು ಹೊಡೆದ ಕಾಂಗ್ರೆಸ್‌ಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಬಂದಿದೆ. ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಅನಿಲ್ ಮೆಣಸಿನಕಾಯಿ ಅವರನ್ನು ಗೆಲ್ಲಿಸಿ. ಶಾಸಕರಷ್ಟೇ ಅಲ್ಲದೆ ಸಚಿವರನ್ನಾಗಿ ಮಾಡಿ ಎಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತ್ಯೇಕ ಕೃಷಿ ಬಜೆಟ್ ಮಾಡಿದ್ದರು. ಕೃಷಿಕರ ಕಲ್ಯಾಣಕ್ಕೆ ಶ್ರಮಿಸಿದರು. ಕೇಂದ್ರ, ಕರ್ನಾಟಕ ಮತ್ತು ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಹೀಗಾಗಿ ಮಹಾದಾಯಿ ವಿವಾದ ಬಗೆಹರಿಸಲಿಲ್ಲ. ಉತ್ತರ ಕರ್ನಾಟಕದ ರೈತರ ಜೀವನಲ್ಲಿ ಖುಷಿ ತಂದರು. ಕಳಸಾ - ಬಂಡೋರಿ ಯೋಜನೆ ಚಾಲನೆಗೆ ಮೋದಿ ಕಾರಣಕರ್ತರಾದರು. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಇದ್ದ ಕಬ್ಬಿನ ದರವನ್ನು ಬಿಜೆಪಿ ಹೆಚ್ಚಿಸಿತು ಎಂದು ಅಮಿತ್ ಶಾ ಹೇಳಿದರು.












Click it and Unblock the Notifications