ಮುಂದಿನ ಮುಖ್ಯಮಂತ್ರಿ ಯಾರು? ಬಸವರಾಜ ದೇವರು ರಾಜಕೀಯ ಭವಿಷ್ಯ
ಧಾರವಾಡ ಡಿಎಸಂಬರ್ 26: ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪ್ರಬಲ ಪಕ್ಷಗಳು ಚುನಾವಣೆಗಾಗಿ ಸಕಲ ಸಿದ್ಧತೆಗಳನ್ನು ನಡೆಸಿವೆ. ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಬಿಜೆಪಿ ಶ್ರಮಿಸುತ್ತಿದ್ದರೆ ಇತ್ತ ಕಾಂಗ್ರೆಸ್ ಈ ಬಾರಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿದೆ. ಈ ನಡುವೆ ಪ್ರಬಲ ನಾಯಕರ ರಾಜಕೀಯ ಭವಿಷ್ಯ ಮುನ್ನೆಲೆಗೆ ಬಂದಿದೆ. ಮನಸೂರಿನ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಬಸವರಾಜ ದೇವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ. ಸೂರ್ಯ, ಚಂದ್ರ ಅಡ್ಡ ಬಂದರೂ ಅವರು ಸಿಎಂ ಆಗುವುದನ್ನು ತಪ್ಪಿಸಲಾಗಲ್ಲ ಎಂದು ಸ್ವಾಮೀಜಿ ಬಸವರಾಜ ದೇವರು ಹೇಳಿದ್ದಾರೆ.
ಸ್ವಾಮೀಜಿ ಬಸವರಾಜ ದೇವರು ಅವರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿಯಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಮತನಾಡಿದ್ದಾರೆ. '2023ಕ್ಕೆ ಕಂಬಳಿ ಬೀಸುತ್ತೆ, ಬಂಡಾರ ಹಾರುತ್ತೆ, ಡೊಳ್ಳು ಬಾರಿಸುತ್ತೆ. ಇದು ದೈವವಾಣಿ. ಟಗರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ' ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಕುರಿ ಕಾಯ್ದಿದ್ದಾರೆ, ದನ ಮೇಯಿಸಿದ್ದಾರೆ. ಅವರು ಒಂದು ದಂತಕಥೆ. ಸಿದ್ದರಾಮಯ್ಯ ಅವರ ಭಾಷಣ ಕರ್ನಾಟಕಕ್ಕೆ ದಿಕ್ಸೂಚಿ ಎಂದು ಬಸವರಾಜ್ ದೇವರು ಹೇಳಿದರು. ಇನ್ನೂ ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಕೊಟ್ಟ ಮಾತಿನಂತೆ ನಡೆದುಕೊಂಡ ಏಕೈಕ ವ್ಯಕ್ತಿ ಸಿದ್ದರಾಮಯ್ಯ. ನಾನು ದೇವರಾಜ ಅರಸು ಕಾಲದಿಂದಲೂ ರಾಜಕೀಯದಲ್ಲಿದ್ದೇನೆ. ಜನ ಕೆಲವರನ್ನ ಸಿಎಂ ಆಗಿದ್ದಾಗ ಮಾತ್ರ ಹೊಗಳುತ್ತಾರೆ, ನಂತರ ಮರೀತಾರೆ.

ಆದರೆ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಜನ ಇಂದಿಗೂ ಮರೆತಿಲ್ಲ. 'ಅನ್ನಭಾಗ್ಯ' ಜಾರಿಯಲ್ಲಿರದಿದ್ದರೆ ಕೊರೊನಾ ಸಂದರ್ಭದಲ್ಲಿ ಸಂಕಷ್ಟ ಎದುರಾಗುತ್ತಿತ್ತು. ಕೊರೊನಾ ವೇಳೆ ಇನ್ನೂ ಹೆಚ್ಚಿನ ಸಾವು ನೋವು ಸಂಭವಿಸುತ್ತಿತ್ತು. ಕಾಗಿನೆಲೆ ಸಂಸ್ಥಾನ ಬೆಳೆದಿರುವುದಕ್ಕೆ ಸಿದ್ದರಾಮಯ್ಯನವರೇ ಕಾರಣ. ಸಿದ್ದರಾಮಯ್ಯ ಕೇವಲ ಕುರುಬ ಸಮುದಾಯದ ನಾಯಕರಲ್ಲ, ಇಡೀ ರಾಜ್ಯದ ನಾಯಕ ಎಂದು ಸಿದ್ಧರಾಮಯ್ಯರನ್ನು ಹೆಚ್.ಎಂ.ರೇವಣ್ಣ ಹಾಡಿಹೊಗಳಿದ್ದಾರೆ.
ಇದೇ ವೇದಿಕೆಯ ಮೇಲೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸುಮಾರು 500 ವರ್ಷಗಳ ಹಿಂದೆ ಕನಕದಾಸರು ಬದುಕಿದ್ದವರು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದ್ದರು. ಬೀರಪ್ಪ ನಾಯಕ, ಬಚ್ಚಮ್ಮ ದಂಪತಿಯ ತಿಮ್ಮಪ್ಪ ನಾಯಕ. ಕನಕದಾಸರ ಮೊದಲ ಹೆಸರು ತಿಮ್ಮಪ್ಪ ನಾಯಕ. ತಿಮ್ಮಪ್ಪನ ಪ್ರಾರ್ಥನೆಯಿಂದ ಜನಿಸಿದ್ದರಿಂದ ತಿಮ್ಮಪ್ಪ ಎಂದು ನಾಮಕರಣ ಮಾಡಿದರು. ನಂತರ ಕನಕ ನಾಯಕ, ಆನಂತರ ಕನಕದಾಸ ಎಂದು ಹೆಸರುವಾಸಿಯಾದರು. ಪಾಳೆಗಾರರರಾಗಿದ್ದರೂ ಎಲ್ಲವನ್ನೂ ತ್ಯಜಿಸಿ ಕನಕದಾಸರಾಗುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಗೆ ವೋಟ್ ಹಾಕಿ- ಸಿದ್ದರಾಮಯ್ಯ
ಕನಕ ಗುರು ಪೀಠ ಮಾಡೋಕೆ ನಾವೆಲ್ಲ ಶಿವಮೊಗ್ಗಕ್ಕೆ ಹೋಗಿದ್ವಿ, ಈಶ್ವರಪ್ಪ ಅವರನ್ನು ಕರೆದಿದ್ದೆ. ಮೂರು ಲಕ್ಷ ಕೊಡೋಕೆ ಮೀಟಿಂಗ್ ನಲ್ಲಿ ಹೇಳಿದ್ದರು. ಈಶ್ವರಪ್ಪ ಒಪ್ಕೋಂಡು ಹೋಗಿ, ಮತ್ತೆ ಗಿರಾಕಿ ವಾಪಸ್ ಬರಲೇ ಇಲ್ಲ ಎಂದರು. ಹೀಗಾಗಿ ಈಶ್ವರಪ್ಪ ಅವರಿಂದ ಕನಕಗುರು ಪೀಠಕ್ಕೆ ಏನೂ ಕಾಣಿಕೆ ಇಲ್ಲ. ಇನ್ನು ಮೂರು ತಿಂಗಳು ಚುನಾವಣೆ ಇದೆ ನೀವು ಕಾಂಗ್ರೆಸ್ ಗೆ ವೋಟ್ ಹಾಕಿ. ಕಾಂಗ್ರೆಸ್ಗೆ ವೋಟ್ ಹಾಕಿದ್ರೆ ನಿಮ್ಮ ಕೈಗೆ ಅಧಿಕಾರ ಬರತ್ತೆ ಎನ್ನುವ ಮೂಲಕ ಪರೋಕ್ಷವಾಗಿ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಎಸ್ ಗೆ ಓಟ್ ಹಾಕಿದ್ರೆ ನಿಮ್ಮ ಅವರ ಪಕ್ಷದವರು ಅಧಿಕಾರ ನಡೆಸುತ್ತಾರೆ. ಆದರೆ ಕಾಂಗ್ರೆಸ್ಗೆ ವೋಟ್ ಹಾಕಿದ್ರೆ ನಿಮ್ಮ ಕೈಗೆ ಅಧಿಕಾರ ಬರತ್ತೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.












Click it and Unblock the Notifications