ಲೋಕ ಅದಾಲತ್: ದಶಕಗಳ ವ್ಯಾಜ್ಯ ಸೇರಿ ನೂರಾರು ಕೇಸ್ ಇತ್ಯರ್ಥ್ಯ, ₹9.55 ಕೋಟಿ ಪರಿಹಾರ ನೀಡಲು ಆದೇಶ
ಧಾರವಾಡ, ಜುಲೈ 14: ನ್ಯಾಯಾಲಯಗಳಲ್ಲಿ ಇದ್ದ ವ್ಯಾಜ್ಯಗಳ ಪೈಕಿ ನೂರಾರು ಪ್ರಕರಣಗಳು ಧಾರವಾಡ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿವೆ. ಈ ಅದಾಲತ್ ರಾಜ್ಯ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾ.ಎಸ್. ಜಿ. ಪಂಡಿತ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು.
ಜಿಲ್ಲೆಯಲ್ಲಿ ಜುಲೈ 13ರಂದು ಅದಾಲತ್‌ಗಾಗಿ ನ್ಯಾಯಮೂರ್ತಿಗಳಾದ ಸಿ.ಎಮ್. ಪೂಣಚ್ಚ, ಜಿ. ಬಸವರಾಜ, ಟಿ. ಜಿ. ಶಿವಶಂಕರೆಗೌಡ ಮತ್ತು ನ್ಯಾಯಿಕ ಸಂಧಾನಕಾರರಾಗಿ ವೆಂಕಟೇಶ ನಾಯ್ಕ, ಟಿ ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ಹರ್ಷ ದೇಸಾಯಿ, ಆರ್. ಎಚ್. ಅಂಗಡಿ, ವಿ. ಜಿ. ದಳವಾಯಿ, ಗಿರಿಜಾ ಹಿರೇಮಠ, ಎಮ್ .ಟಿ. ಬಾಂಗಿ ವಕೀಲರುಗಳನ್ನು ಒಳಗೊಂಡ 5 ನ್ಯಾಯಪೀಠಗಳು ಆಯೋಜನೆಗೊಂಡಿದ್ದವು.

ಈ ಅದಾಲತನಲ್ಲಿ ಒಟ್ಟು 1101 ಪ್ರಕರಣಗಳನ್ನು ರಾಜಿ ಸಂಧಾನ ಮಾಡಲು ವಿಚಾರಣೆ ಕೈಗೆತ್ತಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 434 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ. ಈ ಮೂಲಕ ಒಟ್ಟು ರೂ.9,55,12,964/-ಮೊತ್ತ ಪರಿಹಾರವಾಗಿ ಪಾವತಿಸಲು ಆದೇಶಿಸಲಾಯಿತು. ಇದಕ್ಕೆ ಪ್ರಕರಣಗಳ ಎರಡು ಕಡೆಯವರು ಒಪ್ಪಿಗೆ ನೀಡಿದ್ದಾರೆ.
ಎರಡು ದಶಕಗಳ ಬಗೆಹರಿಯದ ವ್ಯಾಜ್ಯಕ್ಕೆ ಮುಕ್ತಿ
ಧಾರವಾಡ ಲೋಕ ಅದಾಲತ್ ದಲ್ಲಿ ಧಾರವಾಡ ಶಹರದ ಪ್ರತಿಷ್ಠಿತ ಪ್ರದೇಶದಲ್ಲಿನ ದಾಸನಕೊಪ್ಪ ಮತ್ತು ಕಿಲ್ಲೇದಾರ ಕುಟುಂಬಗಳ ನಡುವೆ ಸುಮಾರು 23 ವರ್ಷಗಳಿಂದ ಬಗೆಹರೆಯದ ಪಾಲು ಹಿಸ್ಸೆಯ ವ್ಯಾಜ್ಯವನ್ನು ಹಿರಿಯ ನ್ಯಾಯಮೂರ್ತಿ ಎಸ್.ಜಿ. ಪಂಡಿತ ಮತ್ತು ನ್ಯಾಯಕೇತರ ಸಂಧಾನಕಾರ ಹರ್ಷ ದೇಸಾಯಿ ಮತ್ತು ವಕೀಲರ ಒಳಗೊಂಡ ಪೀಠವು ಸೂಕ್ತ ಸಲಹೆ ನೀಡುವುದರ ಮೂಲಕ ಮತ್ತು ಉಭಯ ಪಕ್ಷದ ವಕೀಲರಾದ ಸಿ.ಎಸ್. ಶೆಟ್ಟರ ಮತ್ತು ಸಂತೋಷ ಬಿ. ಮಲಿಗವಾಡ ಇವರ ಪ್ರಯತ್ನದೊಂದಿಗೆ ದಾವೆಯನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಗೊಳಿಸಿತು.
ಒಂದೂವರೆ ದಶಕದ ಚೆಕ್ ಅಮಾನ್ಯ ಕೇಸ್ ಇತ್ಯರ್ಥ
ಉಳಿದ ನಾಲ್ಕು ಪೀಠಗಳಲ್ಲಿ ಮುಖ್ಯವಾಗಿ ಅಪಘಾತ ಪರಿಹಾರ ಪ್ರಕರಣಗಳ ಮತ್ತು ಚೆಕ್ಕು ಅಮಾನ್ಯ ಪ್ರಕರಣಗಳ ಮೇಲ್ಮನವಿಗಳು ಮತ್ತು ರಿಟ್ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆತು. 10 ರಿಂದ 15 ವರ್ಷಗಳ ಹಳೆಯ ಚೆಕ್ ಅಮಾನ್ಯ ಪ್ರಕರಣಗಳು ಸೌಹಾರ್ದಯುತವಾಗಿ ಕೊನೆಗೊಂಡಿದ್ದು ಇಂದಿನ ಅದಾಲತ್‌ನ ವಿಶೇಷವಾಗಿತ್ತು.
ದಾವೆ ಪ್ರಕರಣಗಳಲ್ಲಿನ ಉಭಯ ಪಕ್ಷಗಾರರ ಪರಸ್ಪರ ಸಂಬಂಧಗಳು ಉತ್ತಮವಾಗಿರುವಂತೆ ಹಾಗೂ ಸಮಯ ಉಳಿತಾಯವಾಗಲು ಲೋಕ ಅದಾಲತ್ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠದ ಅಧೀಕ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಜೆರಾಲ್ ರುಡಾಲ್ಫ್ ಮೆಂಡೋನಾ ಅವರು ಕೋರಿದ್ದಾರೆ.












Click it and Unblock the Notifications