ಟೇಬಲ್ ಕೆಳಗೂ, ಟೇಬಲ್ ಮೇಲಿನ ವ್ಯವಹಾರ ಬಿಟ್ಟುಬಿಡಿ: ಅಧಿಕಾರಿಗಳಿಗೆ ಸಂತೋಷ್ ಲಾಡ್ ಖಡಕ್ ಎಚ್ಚರಿಕೆ
ಧಾರವಾಡ, ಜೂನ್ 07: ಸಾರ್ವಜನಿಕರ ಕೆಲಸಕ್ಕಾಗಿ ಅಧಿಕಾರಿಗಳು ಟೇಬಲ್ ಕೆಳಗೆ ಹಾಗೂ ಟೇಬಲ್ ಮೇಲೆ ಲಂಚ ಪಡೆಯುವ ಪ್ರಕ್ರಿಯೆ ಬಂದ್ ಆಗಬೇಕು. ನನ್ನ ಕಚೇರಿಯಿಂದಲೂ ಯಾರಾದ್ರೂ ಟೇಬಲ್ ಕೆಳಗಿನ ಮಾತುಗಳನ್ನಾಡಿದರೆ ನೇರವಾಗಿ ನನಗೆ ಕರೆ ಮಾಡಿ ತಿಳಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡುವ ಮೂಲಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಅಧಿಕಾರಿಗಳಿಗೆ ತಮ್ಮ ಮೊಬೈಲ್ ನಂಬರ್ ನೀಡಿದ್ದಾರೆ.
ಧಾರವಾಡ ತಾಲೂಕು ಪಂಚಾಯತ್‌ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾತ್ರಿ 10 ಗಂಟೆ ನಂತರವೂ ಅಧಿಕಾರಿಗಳು ನನಗೆ ಕರೆ ಮಾಡಬಹುದು. ನನಗೆ ಕುಡಿಯುವ ಅಭ್ಯಾಸ ಇಲ್ಲ. ನಾನು ಯಾರನ್ನೂ ಬೈಯುವುದಿಲ್ಲ. ಇಡೀ ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆ ತರಬೇಕು ಎಂದುಕೊಂಡಿದ್ದೇವೆ ಎಂದರು.

ಐದು ವರ್ಷ ಇದ್ದು ಹೋಗುತ್ತಾನೆ ಎಂದು ಭಾವಿಸಿದರೂ ಪರವಾಗಿಲ್ಲ. ನನ್ನ ಫಿಲಾಸಫಿ ಅಧಿಕಾರಿಗಳಿಗೆ ಇಷ್ಟ ಆಗಲಿಕ್ಕಿಲ್ಲ. ನಮ್ಮಲ್ಲಿ ಸ್ಪಿರಿಟ್ ಹಾಗೂ ಫ್ಯಾಶನ್ ಇಲ್ಲಾ ಅಂದ್ರೆ ಕೆಲಸ ಮಾಡೋದು ಕಷ್ಟ ಎಂದಿದ್ದಾರೆ.
ಅಧಿಕಾರಿಗಳಿಂದ ನಾನು ಬಹಳಷ್ಟು ನಿರೀಕ್ಷೆ ಇಟ್ಟಿದ್ದೇನೆ. ಯಾರು ವರ್ಗಾವಣೆಯಾಗುತ್ತಾರೆ ಯಾರು ಇರುತ್ತಾರೆ ಇದು ನನಗೆ ಸಂಬಂಧವಿಲ್ಲ. ನನ್ನ ಬಳಿ ಯಾರೂ ರೆಕಮೆಂಡೇಶನ್ ತರಬೇಡಿ. ನನಗೆ ನಿಮ್ಮ ಬೆಂಬಲ ಬೇಕು. ಎಲ್ಲರೂ ಸೇರಿ ಕೆಲಸ ಮಾಡೋಣ. ದೇವರು ಒಳ್ಳೆಯ ಅವಕಾಶ ಕೊಟ್ಟಿದ್ದಾನೆ ಎಂದು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

ಇನ್ನು ಸಭೆಗೆ ಅಪೂರ್ಣ ಮಾಹಿತಿಯೊಂದಿಗೆ ಬಂದ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಲಾಡ್, ಕೃಷಿ ಇಲಾಖೆ ಹಾಗೂ ಹೆಸ್ಕಾಂನಿಂದ ಇರುವ ಬೋರವೆಲ್ ಕನೆಕ್ಷನ್ ಡಾಟಾ ಒಂದಕ್ಕೊಂದು ಲೆಕ್ಕ ಹೊಂದುತ್ತಿಲ್ಲ. ಅಧಿಕಾರಿಗಳು ಸಭೆಗೆ ಬರುವಾಗ ಸಂಪೂರ್ಣ ಮಾಹಿತಿ ತರಬೇಕು. ಅಧಿಕಾರಿಗಳೇ ನಮಗೆ ಮಾರ್ಗದರ್ಶನ ನೀಡಬೇಕು. ಅದನ್ನು ಬಿಟ್ಟು ನಾವು ಕೇಳಿದಾಗ ಹೇಳುವುದಲ್ಲ. ಕಾಟಾಚಾರಕ್ಕೆ ಯಾವುದೋ ಒಂದು ಪ್ರಿಂಟೌಟ್ ತರುವುದಲ್ಲ. ಇದು ಸೀರಿಯಸ್ ಪ್ರಾಬ್ಲಂ ಆಗಿದೆ ಎಂದರು.
ಇದೇ ವೇಳೆ ಜೆಜೆಎಂ ಕೆಲಸ ಎಲ್ಲೆಲ್ಲಿ ಅರ್ಧಕ್ಕೆ ನಿಂತಿದೆಯೋ ಅದನ್ನು ಪೂರ್ಣಗೊಳಿಸಬೇಕು. ರಸ್ತೆ ಹಾಳಾಗಿರುವುದರಿಂದ ಸಾರ್ವಜನಿಕರಿಗೆ ಮಳೆಗಾಲದಲ್ಲಿ ಅಡ್ಡಾಡಲು ತೊಂದರೆಯಾಗುತ್ತದೆ. ಕೆಲಸ ಮುಗಿಯುವವರೆಗೂ ಬಾಕಿ ಬಿಲ್ ಬಿಡುಗಡೆ ಮಾಡಬೇಡಿ ಎಂದು ಜಿಲ್ಲಾ ಹಂತದ ಅಧಿಕಾರಿಗೆ ಸಚಿವ ಸಂತೋಷ್ ಲಾಡ್ ಅವರು ಫೋನ್‌ನಲ್ಲೇ ಸೂಚನೆ ನೀಡಿದರು.












Click it and Unblock the Notifications