ಮಳೆಹಾನಿ ಪ್ರದೇಶಗಳಿಗೆ ಸಚಿವರ ಭೇಟಿಯಿಂದ ಟ್ರಾಫಿಕ್ ಜಾಮ್: ಸಾಲು ವಾಹನಗಳ ಮಧ್ಯ ಸಿಲುಕಿದ ಆಂಬ್ಯುಲೆನ್ಸ್
ಧಾರವಾಡ, ಜುಲೈ 28: ಸಚಿವರ ಹಿಂಬಾಲಕರ ವಾಹನಗಳಿಂದ ಆಂಬ್ಯುಲೆನ್ಸ್ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಡೆದಿದೆ.
ಒಂದು ವಾರದಿಂದ ನಿರಂತರ ಸುರಿದ ಮಳೆಗೆ ಕುಂದಗೋಳ ಭಾಗದಲ್ಲಿ ಉಂಟಾದ ಮನೆಗಳ ಹಾಗೂ ಕೃಷಿಭೂಮಿಗಳ ಹಾನಿಯಾದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು.

ಸಚಿವ ಸಂತೋಷ ಲಾಡ್ ಮಳೆಹಾನಿ ಪರಿಶೀಲನೆ ನಡುವೆ ಗ್ರಾಮಸ್ಥರ ಅಹವಾಲು ಆಲಿಸುವ ವೇಳೆ ಕುಂದಗೋಳ ಲಕ್ಷ್ಮೇಶ್ವರ ಮುಖ್ಯ ರಸ್ತೆಯಲ್ಲಿ ಸುಮಾರು ಅರ್ಧಗಂಟೆ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಸಚಿವರ ಹಿಂಬಾಲಕರ ವಾಹನಗಳು ಸೇರಿದಂತೆ ರಸ್ತೆಯ ಎರಡೂ ಬದಿ ಒಂದು ಕಿ.ಮೀ.ವರೆಗೆ ವಾಹನಗಳು ನಿಂತಿದ್ದವು.
ಈ ವೇಳೆ ಕುಂದಗೋಳದಿಂದ ಸಂಕ್ಲಿಪುರಕ್ಕೆ ಗರ್ಭಿಣಿಯೊಬ್ಬರನ್ನು ಕರೆತರಲು ತೆರಳುತ್ತಿದ್ದ, ಆಂಬ್ಯುಲೆನ್ಸ್ ಸಹ ವಾಹನಗಳ ಮಧ್ಯೆ ಸಿಲುಕಿಕೊಂಡಿತ್ತು. ಈ ವೇಳೆ ಪೊಲೀಸರು ಅಸಹಾಯಕರಾಗಿ ನಿಂತಿದ್ದು, ಕೊನೆಯಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಿ ಆಂಬ್ಯುಲೆನ್ಸ್ ತೆರಳುವಂತೆ ಮಾಡಲಾಯಿತು.
ಇನ್ನು ಕುಂದಗೋಳದ ಶೆರೆವಾಡ ಗ್ರಾಮಕ್ಕೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು, 'ಅದರಗುಂಚಿಗೆ ತೆರಳಲು ಸಮರ್ಪಕವಾಗಿ ಬಸ್ ವ್ಯವಸ್ಥೆಯಿಲ್ಲ. ಶಾಲಾ-ಕಾಲೇಜಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ' ಎಂದು ಸಮಸ್ಯೆ ತೋಡಿಕೊಂಡರು. ಈ ವೇಳೆ ಸಂತೋಷ್ ಲಾಡ್ ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡಿ, ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

ಶೆರೆವಾಡ ಗ್ರಾಮದ ಡಾಕ್ಟರ್ ಓಣಿಯ ಹನುಮಂತಪ್ಪ ಮತ್ತಿಗಟ್ಟಿ ಅವರ ಮಣ್ಣಿನ ಮನೆಯ ಗೋಡೆ ಕುಸಿದು ಬಿದ್ದಿರುವುದನ್ನು ಅಧಿಕಾರಿಗಳ ಜೊತೆ ಸಚಿವರು ವೀಕ್ಷಿಸಿದರು. ಗ್ರಾಮದ ಮಹಿಳೆಯರು ಕುಸಿಯುವ ಹಂತದಲ್ಲಿರುವ ಮನೆಗಳ ಮಾಹಿತಿ ನೀಡಿ, ಮನೆ ನಿರ್ಮಿಸಿಕೊಡಲು ಮುಂದಾಗಬೇಕು ಎಂದು ವಿನಂತಿಸಿಕೊಂಡರು.
ಪಿಡಿಒಗೆ ಸಚಿವರಿಂದ ತರಾಟೆ
ಹುಬ್ಬಳ್ಳಿಯಿಂದ ಕುಂದಗೋಳಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿನ ಬೆಟದೂರು ಗ್ರಾಮ ಮಂಚಾಯಿತಿಗೆ ದಿಢೀರ್ ಭೇಟಿ ನೀಡಿದ ಸಂತೋಷ್ ಲಾಡ್, ಪಿಡಿಒ ಹನುಮರಡ್ಡಿ ನಾಗಾವಿ ಅವರಿಂದ ನರೇಗಾ ಕಾರ್ಮಿಕರ ಮಾಹಿತಿ ಪಡೆದರು. 1,100 ಕಾರ್ಮಿಕರಿದ್ದು, ಅರ್ಧದಷ್ಟು ಮಂದಿಗೂ ಕೆಲಸ ನೀಡದಿರುವುದನ್ನು ಗಮನಿಸಿ, ತರಾಟೆ ತೆಗೆದುಕೊಂಡರು. ಸಿದ್ಧಪಡಿಸಿರುವ ಕಾರ್ಯಯೋಜನೆ ತೋರಿಸಿ ಎಂದ ಸಚಿವರು, 'ಶೇ 60ರಷ್ಟು ಕಾಮಗಾರಿ ನಡೆಸಿ, ನೆಪ ಹೇಳುವುದನ್ನು ಬಿಡಿ. ಕೃಷಿಹೊಂಡ, ಕಾಲುವೆ ಹೂಳು ತೆಗೆಯುವ ಹಾಗೂ ರಸ್ತೆ ಕಾಮಗಾರಿ ಕೈಗೊಂಡು ಕಾರ್ಮಿಕರಿಗೆ ಉದ್ಯೋಗ ನೀಡಬೇಕು' ಎಂದು ಸೂಚಿಸಿದರು.
ಕಾರ್ಮಿಕರ ಕೊರತೆಯಿದೆ ಎನ್ನುವ ಪಿಡಿಒ ಹೇಳಿಕೆಗೆ, ' ನಿಮ್ಮ ಊರಿನ ಮಂದಿಗೆ ಕೆಲಸ ಕೊಡಿಸಲು ಆಗುತ್ತಿಲ್ಲ ಎಂದರೆ ಏನರ್ಥ' ಎಂದು ಪ್ರಶ್ನಿಸಿದರು.
ಇದೇ ವೇಳೆ ಗ್ರಾಮದಲ್ಲಿ ಮದ್ಯ ಅಕ್ರಮವಾಗಿ ಮಾರಾಟವಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ಸಚಿವ ಗಮನಕ್ಕೆ ತಂದರು. 'ಯಾರು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಹಾಗೆಯೇ, ಗಮನಕ್ಕೆ ತಂದವರಿಗೆ ₹5ಸಾವಿರ ಬಹುಮಾನ ನೀಡಲಾಗುವುದು' ಎಂದು ಘೋಷಿಸಿದರು.
ಸಚಿವರಿಂದ ಸೇತುವೆ ವೀಕ್ಷಣೆ
ಸಂಶಿ ಮತ್ತು ಚಾಕಲಬ್ಬಿ ಮಧ್ಯದಲ್ಲಿ ದುರಸ್ತಿಯಲ್ಲಿದ್ದ ಸೇತುವೆ ವೀಕ್ಷಿಸಿದ ಸಂತೋಷ್ ಲಾಡ್, 'ಸೇತುವೆ ಕೆಳಮಟ್ಟದಲ್ಲಿದ್ದು ಇನ್ನಷ್ಟು ಎತ್ತರಕ್ಕೆ ಏರಿಸಬೇಕಿದೆ. ಈ ಕುರಿತು ತುರ್ತು ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು. ಈ ವೇಳೆ ಶಾಸಕ ಎಂ.ಆರ್. ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ್ ಶೈಲೇಶ ಪರಮಾನಂದ, ಎಂ.ಎಸ್. ಅಕ್ಕಿ, ಕುಸುಮಾವತಿ ಶಿವಳ್ಳಿ ಇದ್ದರು.












Click it and Unblock the Notifications