ಅಧಿವೇಶನದ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ; ಮಹೇಶ್ ಟೆಂಗಿನಕಾಯಿ
ಚಳಿಗಾಲದ ವಿಧಾನಸಭಾ ಅಧಿವೇಶನದ ಬಳಿಕ ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೊಸ ಬಾಂಬ್ ಸಿಡಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿದ್ದು, ಕಾಂಗ್ರೆಸ್ ಶಾಸಕರೇ ಸಿಟ್ಟಾಗಿದ್ದಾರೆ ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಈ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಹಣವೇ ಬರುತ್ತಿಲ್ಲ ಎಂಬ ಮಾತನ್ನು ಕಾಂಗ್ರೆಸ್‌ನ ಹಿರಿಯ ಶಾಸಕ ರಾಜು ಕಾಗೆ ಸೇರಿದಂತೆ ಅನೇಕರು ಹೇಳುತ್ತಿದ್ದಾರೆ. ಹೀಗೇ ಸರ್ಕಾರ ಮುಂದುವರೆದರೆ ಬರುವ ದಿನಗಳಲ್ಲಿ ನಾವು ಕಾಂಗ್ರೆಸ್ ತೊರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ, ಅನೇಕ ಶಾಸಕರದ್ದು ಇದೇ ಅಭಿಪ್ರಾಯವಾಗಿದ್ದು, ಚಳಿಗಾಲದ ಅಧಿವೇಶನ ಮುಗಿದ ಮೇಲೆ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಸರ್ಕಾರದ ನಡೆಗೆ ಬಡವರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸಿದ ಬಳಿಕ, ಪಡಿತರ ಚೀಟಿ ರದ್ದು ಮಾಡಿಲ್ಲ, ರದ್ದತಿ ವಾಪಸ್ ಪಡೆಯುತ್ತೇವೆ ಎಂದು ಸಚಿವರು ಹೇಳಿದ್ದಾರೆ. ಒಂದೂವರೆ ವರ್ಷದಿಂದ ಕಾಂಗ್ರೆಸ್ ಇದೇ ನಾಟಕ ಆಡಿಕೊಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದಾನಿ ಬಗ್ಗೆ ನಾನ್ಯಾಕೆ ಮಾತನಾಡಲಿ
ಅದಾನಿ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಟೆಂಗಿನಕಾಯಿ, ಅದಾನಿ ಬಗ್ಗೆ ನಾವ್ಯಾಕೆ ಮಾತನಾಡಲಿ, ಅವರು ನಮಗೆ ಹತ್ತಿರದವರಲ್ಲ, ಪ್ರಕರಣ ದಾಖಲಾಗಿರುವುದು ಅಮೆರಿಕಾದಲ್ಲಿ. ಅಲ್ಲಿನ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಭಾರತದಲ್ಲಿ ಆಗಿದ್ದರೆ ನಾವು ಮಾತನಾಡುತ್ತಿದ್ದೆವು. ಅದಾನಿ ಬಗ್ಗೆ ನಮಗೇನು ಪ್ರೀತಿ, ಪ್ರೇಮ ಇಲ್ಲ. ಅವರೇನು ನಮಗೆ ಹತ್ತಿದವರಲ್ಲ ಎಂದರು.
ಕರ್ನಾಟಕದಲ್ಲಿ ವಕ್ಫ್, ಮುಡಾ ಹಾಗೂ ವಾಲ್ಮೀಕಿ ಹಗರಣದ ಬಗ್ಗೆ ಕಾಂಗ್ರೆಸ್‌ನ ಎಷ್ಟು ಶಾಸಕರು, ಸಚಿವರು ಮಾತನಾಡಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು. ಇಡೀ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ನಡೆಯುತ್ತಿದೆ, ರೈತರ, ಬಡವರ ಭೂಮಿ ಕಸಿಯಲು ಮುಂದಾಗಿದ್ದಾರೆ, ವಾಲ್ಮೀಕಿ ಹಗರಣದ ಬಗ್ಗೆ ಅದೇ ಸಮುದಾಯದ ಶಾಸಕರು ಎಷ್ಟು ಜನ ಮಾತನಾಡಿದ್ದಾರೆ? ಮೊದಲು ಇಲ್ಲಿನ ಸಮಸ್ಯೆ ಬಗ್ಗೆ ಮಾತನಾಡಿ, ಆಮೇಲೆ ಅದಾನಿ ವಿಚಾರ ಮಾತನಾಡಿ ಎಂದು ಹೇಳಿದ್ದಾರೆ.
ಕರ್ನಾಟಕ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಕಾಂಗ್ರೆಸ್‌ಗೆ ಮತ್ತಷ್ಟು ಬಲ ತಂದಿದೆ. ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿಲ್ಲ ಎಂದು ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಈ ಬೆನ್ನಲ್ಲೇ ಶಾಸಕ ಮಹೇಶ್ ಟೆಂಗಿನಕಾಯಿ ರಾಜಕೀಯ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟಿರುವುದು ಭಾರಿ ಕುತೂಹಲ ಕೆರಳಿಸಿದೆ.












Click it and Unblock the Notifications