ಡಿಕೆಶಿ ಮಾರಿಹಬ್ಬಕ್ಕೆ ಬಲಿಕೊಡುವ ಕೋಣ: ರೇಣುಕಾಚಾರ್ಯ
ಕುಂದಗೋಳ, ಮೇ 11: ಸಚಿವ ಡಿಕೆ ಶಿವಕುಮಾರ್ ಅವರನ್ನು ಮಾರಿಹಬ್ಬಕ್ಕೆ ಬಲಿಕೊಡಲು ತಂದಿರುವ ಕೋಣದಂತೆ ಎಂದು ಹೋಲಿಕೆ ಮಾಡಿರುವ ಬಿಜೆಪಿ ಮುಖಂಡ ಎಂ.ಪಿ. ರೇಣುಕಾಚಾರ್ಯ, ಆ ಕೋಣವನ್ನು ಕಡಿದು ವಾಪಸ್ ಕಳಿಸಬೇಕು ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕುಂದಗೋಳ ಉಪ ಚುನಾವಣೆಗಾಗಿ ಕಳಸ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಮಾರಿ ಹಬ್ಬದಲ್ಲಿ ಬಲಿ ಕೊಡುವ ಮುನ್ನ ಕೋಣಕ್ಕೆ ಎಣ್ಣೆ ಹಚ್ಚಿ ತಿಕ್ಕುತ್ತಾರೆ. ಹಾಗೆಯೇ ಇಲ್ಲಿ ಮಾರಿ ಕೋಣ ಬಲಿ ಕೊಡಬೇಕು ಎಂದು ಕಾಂಗ್ರೆಸ್‌ನವರು ಅವರನ್ನು ಕರೆತಂದಿದ್ದಾರೆ. ಮೊದಲು ಇಲ್ಲಿಗೆ ಬಂದಿರುವ ಕೋಣವನ್ನು ಕಡಿದು ವಾಪಸ್ ಕಳಿಸಬೇಕು ಎಂದು ರೇಣುಕಾಚಾರ್ಯ ಹೇಳಿದರು.

ಡಿಕೆ ಶಿವಕುಮಾರ್ ಅವರು ಹರಕೆಯ ಕೋಣ. ಅವರು ಇಲ್ಲಿಗೆ ಬಂದು ಸಿ.ಎಸ್. ಶಿವಳ್ಳಿ ಅವರ ಹೆಸರು ಹೇಳಿ ಕಣ್ಣೀರಿಟ್ಟು ನಾಟಕ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಡಿ.ಕೆ. ಶಿವಕುಮಾರ್ ಅವರು ಕನಕಪುರದ ಬಂಡೆ ಮಾತ್ರವಲ್ಲ, ಅವರು ಭ್ರಷ್ಟ ಬಂಡೆ ಎಂದು ಟೀಕಿಸಿದರು.
ರೇಣುಕಾಚಾರ್ಯ ಹೇಳಿಕೆಗೆ ತೀಕ್ಷ್ಣ ಉತ್ತರ ನೀಡಿರುವ ಡಿ.ಕೆ. ಶಿವಕುಮಾರ್, ಕೋಣವನ್ನು ಬಲಿಕೊಡೋದು ಊರಿಗೆ ಒಳ್ಳೆಯದಾಗಲಿ ಎಂದು. ಕುಂದಗೋಳ ಕ್ಷೇತ್ರಕ್ಕೆ ಒಳಿತಾಗುವುದಾದರೆ ಬಲಿಕೊಡಲಿ. ಬಿಜೆಪಿಯವರು ಮತ್ತು ಕಾಂಗ್ರೆಸ್ಸಿಗರು ಯಾರಾದರೂ ಬಲಿಕೊಡಲಿ ಎಂದರು.
ಇದೇ ಸಂದರ್ಭದಲ್ಲಿ ಅವರು 'ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ' ಎಂಬ ಡಿವಿಜಿ ಅವರ ಕಗ್ಗವನ್ನು ನೆನಪಿಸಿಕೊಂಡರು. 'ಪಾಪ ರೇಣುಕಾಚಾರ್ಯ. ನನ್ನ ಜತೆ ಅವರು ಯುದ್ಧ ಮಾಡಬೇಕಾಗಿದೆ. ಇಂತಹವರ ಜತೆ ನಾನು ಯುದ್ಧ ಮಾಡುವುದಿಲ್ಲ' ಎಂದು ತಿರುಗೇಟು ನೀಡಿದರು.
ಡಿಕೆ ಶಿವಕುಮಾರ್ ಅವರು ಹಣದ ಚೀಲ ಹಿಡಿದುಕೊಂಡು ಕುಂದಗೋಳಕ್ಕೆ ಬಂದಿದ್ದಾರೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಟಾಂಗ್ ನೀಡಿದ ಅವರು, 'ನಾನು ಹಣ ಇದ್ದರೆ ಅಕ್ಕನ ಚೀಲಕ್ಕೆ ಹಾಕುತ್ತೇನೆ' ಎಂದು ಚಟಾಕಿ ಹಾರಿಸಿದರು.












Click it and Unblock the Notifications