ಜೂನ್ 4ಕ್ಕೆ ಧಾರವಾಡದಲ್ಲಿ ಮತ ಎಣಿಕೆ: ಇಲ್ಲಿ ಗುಂಪಾಗಿ ಓಡಾಡುವಂತಿಲ್ಲ
ಬೆಂಗಳೂರು, ಮೇ 30: ಕರ್ನಾಟಕದಲ್ಲಿ ಅಂದುಕೊಂಡಂತೆ ಸುಸೂತ್ರವಾಗಿ ಲೋಕಸಭಾ ಚುನಾವಣೆ 2024 ನಡೆದಿದೆ. ದೇಶಾದ್ಯಂತ ಜೂನ್ 04ರಂದು ನಡೆಯುವಂತೆ ಧಾರವಾಡದಲ್ಲೂ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಸಲುವಾಗಿ ಅಂದು ಪ್ರತಿಬಂಧಕಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.
ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಲೋಕಸಭಾ ಸಾರ್ವತ್ರಿಕ ಚುಣಾವಣೆ ಮೇ 7 ರಂದು ಜರುಗಿತ್ತು. ಜೂನ್ 04 ರಂದು ಮತ ಎಣಿಕೆಯು ಸುಗಮವಾಗಿ ಮತ್ತು ಮುಕ್ತವಾಗಿ ಜರಗಿಸುವ ಹಿತದೃಷ್ಠಿಯಿಂದ ಜೂನ್ 2, ರಿಂದ ಜೂನ್ 5 ರವರೆಗೆ ಮರ ಎಣಿಕೆ ಕೇಂದ್ರವಾದ ಕೃಷಿ ವಿಶ್ವ ವಿದ್ಯಾಯಲ ಸುತ್ತ ಪ್ರತಿಬಂಧಕಾಜ್ಞೆ (144 ಸೆಕ್ಷನ್) ಜಾರಿಗೊಳಿಸಲಾಗಿದೆ ಎಂದು ಗುರುವಾರ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಹಿತಿ ನೀಡಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ಮತ ಎಣಿಕೆ ಕೇಂದ್ರವಾಗಿ ಮಾಡಲಾಗಿದೆ. ಈ ಕೃಷಿವಿವಿ ವ್ಯಾಪ್ತಿಯ 200 ಮೀಟರ್ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ 24 ಗಂಟೆ ಪ್ರತಿಬಂಧಕಾಜ್ಞೆ ಜಾರಿಯಲ್ಲಿರಲಿದೆ. ಜೂನ್ 5ರ ಸಂಜೆ 6 ಗಂಟೆ ವರೆಗೆ ಸಿ.ಆರ್.ಪಿ.ಸಿ 1973 ರ ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರಡಿ ಪ್ರತಿಬಂಧಕಾಜ್ಞೆ ತೆರವಾಗಲಿದೆ ಎಂದು ಅವರು ವಿವರಿಸಿದರು.
ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ಕ್ರಮ
ಮತ ಎಣಿಕೆಯ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಮತ್ತು ಮತದಾನದ ಪ್ರಾವಿತ್ರ್ಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಸಿ.ಆರ್.ಪಿ.ಸಿ 1973 ರ ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರ ಮೇರೆಗೆ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ.

ಇದರ ಪ್ರಕಾರ ಮತ ಎಣಿಕೆ ಸುತ್ತಮುತ್ತ ಐದು ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಗುಂಪಾಗಿ ಓಡಾಡುವಂತಿಲ್ಲ. ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದರೆ, ಅಂತವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು. ಆ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ.
ಕುತೂಹಲ ಕೆರಳಿಸಿರುವ ಫಲಿತಾಂಶ
ಧಾರವಾಡದಲ್ಲಿ ಬಿಜೆಪಿಯಿಂದ ಪ್ರಹ್ಲಾದ್ ಜೋಶಿಯವರು ಐದನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ನ ವಿನೋದ್ ಅಸೂಟಿಯವರು ಸ್ಪರ್ಧಿಸಿದ್ದಾರೆ. ಇವರು ಯುವ ನಾಯಕರಾಗಿದ್ದು, ಕುರುಬ ಸಮುದಾಯದವರಾಗಿದ್ದಾರೆ. ಇನ್ನೂ ಬ್ರಾಹ್ಮಣ ಸಮುದಾಯ ನಾಯಕ, ಕ್ಷೇತ್ರದಲ್ಲಿ ಹ್ಯಾಟ್ರಿಕ್ ಭಾರಿಸಿರುವ ಬಿಜೆಪಿಯ ಪ್ರಹ್ಲಾದ್ ಜೋಶಿಯವರು ಕಳೆದ ಬಾರಿ (2019) ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆದಿದ್ದರು. ಈ ಬಾರಿಯೂ ಧಾರವಾಡ ಕ್ಷೇತ್ರದ ಫಲಿತಾಂಶ ಕುತೂಹಲ ಕೆರಳಿಸಿದೆ.












Click it and Unblock the Notifications