ಧಾರವಾಡ: ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್, ಅಧಿಕಾರಿಗಳಿಗೆ ಚಳಿ ಬಿಡಿಸಿದ ಮೇಯರ್
ಧಾರವಾಡ, ಜೂನ್, 14: ಸ್ವಾತಂತ್ರ ಪೂರ್ವ ಕಾಲದಿಂದಲೂ ಪ್ರಸಿದ್ಧವಾದ ಧಾರವಾಡದ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ದಿಢೀರ್ ಭೇಟಿ ನೀಡಿದ್ದು, ಈ ವೇಳೆ ಉದ್ಯಾನವನದಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮೇಯರ್ ಈರೇಶ ಅಂಚಟಗೇರಿ ವಾಯು ವಿಹಾರಕ್ಕೆ ಬಂದ ಸಾರ್ವಜನಿಕರ ಅಹವಾಲು ಆಲಿಸಿದ್ದು, ಉದ್ಯಾನವನದಲ್ಲಿನ ಪಾದಚಾರಿ ಮಾರ್ಗ, ಮರ ಮತ್ತು ಬಳ್ಳಿಗಳ ಪೋಷಣೆ ಕೊರತೆ, ಹಾಳಾದ ವಿದ್ಯುತ್ ದೀಪಗಳ ಕಂಬ, ಅಲ್ಲಲ್ಲಿ ಕಸದ ಸಂಗ್ರಹ, ನೀರು ಕಾಣದ ಶೌಚಾಲಯ, ಬೀದಿ ನಾಯಿಗಳ ತಿರುಗಾಟ ಸೇರಿದಂತೆ ಇನ್ನಿತರ ಅವ್ಯವಸ್ಥೆಗಳನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಧಾರವಾಡ ಹೃದಯ ಭಾಗದಲ್ಲಿರುವ ರಾಣಿ ಚೆನ್ನಮ್ಮ ಉದ್ಯಾನವನದ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದ ಅವರು, ಅಲ್ಲಿನ ಲೋಪಗಳತ್ತ ಗಮನಹರಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆ, ವಿದ್ಯುತ್ ದೀಪ, ನೀರು ಸಂಗ್ರಹ ತೊಟ್ಟಿ ಹಾಗೂ ಹೂವಿನ ಬಳ್ಳಿಗಳ ನಿರ್ವಹಣೆಗಾಗಿ ಪ್ರತಿ ತಿಂಗಳು ಪಾಲಿಕೆ ಹಣ ಪಾವತಿಸುತ್ತಿದೆ. ಮತ್ತೊಂದೆಡೆ ಸಾರ್ವಜನಿಕರು ಉದ್ಯಾನವದ ಪ್ರವೇಶಕ್ಕೆ ಶುಲ್ಕ ಭರಿಸುತ್ತಿದ್ದಾರೆ. ಆದರೆ, ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಯಾವುದೇ ಸೌಲಭ್ಯಗಳು ಇಲ್ಲದಂತಾಗಿದೆ.
ಪಾಲಿಕೆ ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರಿಂದ ಸಮರ್ಪಕ ಸೇವೆ ಪಡೆಯುವಲ್ಲಿ ಆಸಕ್ತಿ ತೋರಿಸದಿರುವುದು ಸರಿಯಲ್ಲ. ಆದ್ದರಿಂದ ಅಧಿಕಾರಿಗಳು ಉದ್ಯಾನವನದ ಅಭಿವೃದ್ಧಿಗೆ ತುರ್ತಾಗಿ 25 ಲಕ್ಷ ರೂಪಾಯಿಗಳ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. 2-3 ದಿನಗಳಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಉದ್ಯಾನವನದಲ್ಲಿ ಮೇಲ್ವಿಚಾರಣೆ ಅಧಿಕಾರಿಗಳ ಮೊಬೈಲ್ ನಂಬರನ್ನು ಸಾರ್ವಜನಿಕರ ಸಂಪರ್ಕಕ್ಕೆ ಪ್ರಕಟಿಸುವಂತೆ ಸೂಚಿಸಿದ ಮೇಯರ್, ಉದ್ಯಾವನದ ನಿರ್ವಹಣೆಯಲ್ಲಿ ಲೋಪ ಎಸಗಿರುವ ಗುತ್ತಿಗೆದಾರರಿಗೆ ಇಂದೇ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು.
ಸರ್ಕಾರದ 200 ಕೋಟಿ ರೂಪಾಯಿಗಳ ವಿಶೇಷ ಅನುದಾನದಡಿ ಉದ್ಯಾನವನದ ಸಮಗ್ರ ಸೌಂದರ್ಯೀಕರಣಕ್ಕೆ ಅಂದಾಜು 2 ಕೋಟಿ ರೂಪಾಯಿಗಳ ಅನುದಾನ ಪಡೆಯಲು ಪಾಲಿಕೆಯಿಂದ ಪ್ರಯತ್ನ ಮಾಡಲಾಗುತ್ತಿದೆ. ಅನುದಾನ ಸಿಗುವ ವಿಶ್ವಾಸವಿದೆ. ಅಲ್ಲದೇ ಹಲವು ರೀತಿಯ ಆಕರ್ಷಕ ಮಾದರಿಗಳನ್ನು ಉದ್ಯಾನವನದಲ್ಲಿ ಅಳವಡಿಸುವ ಸಂಬಂಧ ಚಿಂತನೆ ನಡೆದಿದೆ. ಎಲ್ಲಾ ರೀತಿಯಲ್ಲೂ ಅಚ್ಚುಕಟ್ಟಾದ ಉದ್ಯಾನವನ ರೂಪಿಸಿ ಸಾರ್ವಜನಿಕರ ಅನುಕೂಲಕ್ಕೆ ನೀಡಲಾಗುವುದು ಎಂದರು.
ಉದ್ಯಾನವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪಿಸಲು ಪಾಲಿಕೆಯಲ್ಲಿ ಈಗಾಗಲೇ ಠರಾವು ಪಾಸು ಮಾಡಲಾಗಿದೆ. ಈ ಕುರಿತಂತೆ ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿ ಕೂಡ ರಚನೆಯಾಗಿದ್ದು, ಇದಕ್ಕಾಗಿ ಇಂದು ಸಮಿತಿ ಸದಸ್ಯರೊಂದಿಗೆ ಸ್ಥಳ ಪರೀಶೀಲನೆ ಕೂಡ ಮಾಡಿದ್ದೇವೆ. ಸೂಕ್ತ ಸ್ಥಳ ನಿರ್ಧರಿಸಿ ಅಂತಿಮಗೊಳಿಸಲಾಗುವುದು. ಮೂರ್ತಿ ಸ್ಥಾಪನೆಗೆ ಅಗತ್ಯವಿರುವ ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.












Click it and Unblock the Notifications