ಒಂದಲ್ಲ..ಎರಡಲ್ಲ ಬರೋಬ್ಬರಿ 206 ಕೋಟಿ ಹಣ ಬಾಕಿ, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ
ಧಾರವಾಡ, ಆಗಸ್ಟ್ 31: ಧಾರವಾಡ ಜಿಲ್ಲೆಗೆ ವಿದ್ಯಾಕಾಶಿ ಎಂಬ ಹಿರಿಮೆಯನ್ನೇ ಎತ್ತಿ ಹಿಡಿದಿದ್ದು ಮತ್ತು ಬೆಳೆಸಿದ್ದು ಇಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯ. ಇಡೀ ರಾಜ್ಯದಲ್ಲಿ ಈ ವಿಶ್ವವಿದ್ಯಾಲಯಗೆ ಒಂದು ದೊಡ್ಡ ಸ್ಥಾನವೂ ಇದೆ. ಆದರೆ ಇದೆಲ್ಲವೂ ಕೇವಲ ಹೇಳಿಕೊಳ್ಳೋಕೆ ಮಾತ್ರವಾ? ಅನ್ನೋ ಪ್ರಶ್ನೆ ಉದ್ಭವಿಸಿದ್ದು, ಸರ್ಕಾರದ ಮುಂದೆ ಅನುದಾನಕ್ಕಾಗಿ ಪರಿಪರಿಯಾಗಿ ಬೇಡಿಕೊಂಡರೂ ಒಂದು ಪೈಸೆಯೂ ಬಿಡುಗಡೆಯಾಗುತ್ತಿಲ್ಲ ಎನ್ನಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸ್ಥಾಪನೆಯಾದ ರಾಜ್ಯದ ಎರಡನೇ ಹಾಗೂ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯ ಎಂಬ ಹೆಸರು ಪಡೆದಿರುವುದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ. ಆದರೆ ಈ ಪ್ರತಿಷ್ಠಿತ ವಿವಿಯ ಆರ್ಥಿಕ ದಿವಾಳಿ ಚೇತರಿಸಿಕೊಳ್ಳುವ ಬದಲಿಗೆ ದಯನೀಯ ಸ್ಥಿತಿಯತ್ತ ಸಾಗುತ್ತಿದೆ.

2018ರಿಂದ ಇಲ್ಲಿಯವರೆಗೆ ವಿವಿಧ ಅನುದಾನಗಳ ಬಾಕಿ ಸೇರಿ ವಿವಿಗೆ 206 ಕೋಟಿ ರೂಪಾಯಿಗೂ ಹೆಚ್ಚು ಹಣ ಬರಬೇಕಿದೆ. ಈ ಸಂಬಂಧ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳೂ ಬೀದಿಗಿಳಿದು ಹೋರಾಟ ಮಾಡಿದರೂ ಯಾವುದೇ ಪ್ರಯೊಜನವಾಗಿಲ್ಲ. ಸಿಬ್ಬಂದಿ ಅನುದಾನ 5.09 ಕೋಟಿ ರೂ, ಪಿಂಚಣಿ ಬಾಕಿ 70 ಕೋಟಿ ರೂ, ನಿರ್ವಹಣಾ ವೆಚ್ಚ, ಪರೀಕ್ಷೆ ವೆಚ್ಚ ಸೇರಿ 206 ಕೋಟಿ ರೂಪಾಯಿಗೆ ಹೆಚ್ಚಿನ ಬಾಕಿ ಇದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆಸಿರೋ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿಗಳಾದ ಗುಡಸಿ ಅವರು, ಸರ್ಕಾರ ತಮ್ಮ ಸಮಸ್ಯೆಗೆ ಸ್ಪಂದಿಸುತ್ತದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಮೊದಲೆಲ್ಲ ಸರ್ಕಾರದಿಂದ ಹಣ ಬರೋದು ಸ್ವಲ್ಪ ವಿಳಂಬವಾದರೆ ಆಂತರಿಕ ಸಂಪನ್ಮೂಲದಿಂದ ಕ್ರೋಢೀಕರಣವಾದ ಹಣವನ್ನೇ ಹೊಂದಾಣಿಕೆ ಮಾಡುತ್ತಿದ್ದರು. ಈಗ ಆ ಹಣವೂ ಖಾಲಿಯಾಗಿ ಹೋಗಿದೆ. ಜೊತೆಗೆ ಮೊದಲೆಲ್ಲ ಈ ವಿವಿ ವ್ಯಾಪ್ತಿ ರಾಜ್ಯಮಟ್ಟಕ್ಕೆ ಇತ್ತು. ಆದರೆ ಈಗ ವಿವಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಸಂಪನ್ಮೂಲ ಕ್ರೋಢೀಕರಣವೂ ಇಳಿಕೆಯಾಗಿದೆ. ಹಾಗಾಂತ ವಿಶ್ವವಿದ್ಯಾಲಯ ಅವರು ಮಾತ್ರವಲ್ಲ ಸ್ಥಳೀಯ ಜನಪ್ರತಿನಿಧಿಗಳು ಸಹ ಪಕ್ಷಬೇಧ ಬಿಟ್ಟು ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಮುಂದೆ ಕೇಳಿಕೊಂಡಿದ್ದಾರಂತೆ. ಹೀಗಾಗಿ ಅನುದಾನ ಬಂದೇ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳುತ್ತಿದ್ದಾರೆ.

ಅಲ್ಲದೇ ಈಗ ಪಿಂಚಣಿದಾರರಿಗೆ ಪಿಂಚಣಿ ಪ್ರತಿ ತಿಂಗಳು ಬರುತ್ತಿದೆ. ಆದರೆ ಪಿಂಚಣಿ ಸಂಬಂಧಿತ ಇತರರು ಸೌಲಭ್ಯಗಳು ಮಾತ್ರ ಮರಿಚೀಕೆಯಾಗಿವೆ. ಇನ್ನು ಕುಲಪತಿಯವರಂತೂ ಈ ಸಂಬಂಧ ಮುಖ್ಯಮಂತ್ರಿಗಳ ಮುಂದೆ ಪದೆ ಪದೇ ಕೇಳುತ್ತಲೇ ಇದಾರಂತೆ. ಅದನ್ನೂ ಸಹ ಸಚಿವರೇ ಹೇಳಿಕೊಂಡಿದ್ದಾರೆ.
ಒಟ್ಟಾರೆಯಾಗಿ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದು ಆರ್ಥಿಕ ಸಂಕಷ್ಟದಿಂದಾಗಿ ಈಗ ದಯನೀಯ ಸ್ಥಿತಿಗೆ ಬಂದಿದ್ದು, ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಈ ಕರ್ನಾಟಕ ವಿಶ್ವವಿದ್ಯಾಲಯ ಚೇತರಿಸಿಕೊಳ್ಳುವಂತೆ ಮಾಡುತ್ತದೆಯಾ ಎಂದು ಕಾದುನೋಡಬೇಕಿದೆ.












Click it and Unblock the Notifications