ಮಾರ್ಚ್ 12ರಂದು ಧಾರವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಕಾರ್ಯಕ್ರಮಗಳಿವು, ಇಲ್ಲಿದೆ ವಿವರ
ಧಾರವಾಡ, ಮಾರ್ಚ್, 12: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಧಾರವಾಡಕ್ಕೆ ಆಗಮಿಸಲಿದ್ದು, ಇಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಜ್ಯದ ಮೊದಲ ಐಐಟಿ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಭಾನುವಾರ ಮಧ್ಯಾಹ್ನ (ಮಾರ್ಚ್ 12)2:55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿಯವರು ಆಗಮಿಸಲಿದ್ದಾರೆ. ನಂತರ 3 ಗಂಟೆಗೆ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಐಐಟಿಯತ್ತ ಪ್ರಯಾಣ ಮಾಡಲಿದ್ದಾರೆ. 3:20ಕ್ಕೆ ಐಐಟಿಯ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಆಗಮಿಸುವ ಅವರು, 3:25ಕ್ಕೆ ರಸ್ತೆ ಮೂಲಕ ಐಐಟಿಗೆ ಆಗಮಿಸಲಿದ್ದಾರೆ.

ಹಲವು ಕಾರ್ಯಕ್ರಮಗಳ ಉದ್ಘಾಟನೆ
ಇನ್ನು 3:30ಕ್ಕೆ ಐಐಟಿ ಸೌಧಕ್ಕೆ ಪ್ರವೇಶ ಮಾಡಿ, 3:30 ರಿಂದ 3:45ರವರೆಗೆ ಐಐಟಿ ಕ್ಯಾಂಪಸ್ ವೀಕ್ಷಣೆ ಮಾಡಲಿದ್ದಾರೆ. ಇನ್ನು 3:50ಕ್ಕೆ ಐಐಟಿ ಸೌಧಕ್ಕೆ ಭೇಟಿ ನೀಡಲಿದ್ದು, ಸಂಜೆ 4 ರಿಂದ 5 ಗಂಟೆಯವರೆಗೆ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 5 ಗಂಟೆ 5 ನಿಮಿಷಕ್ಕೆ ನಿರ್ಗಮಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಐಐಟಿ ಉದ್ಘಾಟನೆಗಾಗಿ ಧಾರವಾಡಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆಯು ಇನ್ನು ಉತ್ತರ ಕರ್ನಾಟಕದ ಜನತೆಗೆ ಹುಬ್ಬಳ್ಳಿಯಲ್ಲಿ ಲಭ್ಯವಾಗಲಿದೆ. ರಾಜ್ಯ ಸರ್ಕಾರದಿಂದ 11 ಹೆಕ್ಟೇರ್ ಪ್ರದೇಶದಲ್ಲಿ ಈ ಸಂಸ್ಥೆ ಸ್ಥಾಪನೆಗೆ 250 ಕೋಟಿ ರೂಪಾಯಿ ಬಿಡುಗಡೆ ಮಾಡಲಿದ್ದಾರೆ.
ಮೋದಿ ಉದ್ಘಾಟಿಸಲಿರುವ ಕಾರ್ಯಕ್ರಮಗಳ ವಿವರ
ಜಲಜೀವನ ಮಿಷನ್ ಯೋಜನೆಯಡಿ ಸವದತ್ತಿಯ ರೇಣುಕಸಾಗರ ಜಲಾಶಯದಿಂದ 1042.34 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಎಲ್ಲ 144 ಗ್ರಾಮ ಪಂಚಾಯ್ತಿಗಳ 388 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ ಮಿಷನ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಜ್ಯ ಸರ್ಕಾರದ ವಿವೇಕ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿ 295 ಶಾಲಾ ಕೊಠಡಿಗಳನ್ನು ನಿರ್ಮಿಸಲು 42.15 ಕೋಟಿ ಬಿಡುಗಡೆ ಮಾಡಲಾಗಿದ್ದು, ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಇನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ 353.48 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 15 ಕಾಮಗಾರಿಗಳ ಲೋಕಾರ್ಪಣೆ ಹಾಗೂ 166 ಕೋಟಿ ರೂ. ವೆಚ್ಚದ ನೂತನ ಕ್ರೀಡಾ ಸಮುಚ್ಚಯದ ಭೂಮಿಪೂಜೆ ನೆರವೇರಿಸಲಿದ್ದಾರೆ. 150 ಕೋಟಿ ರೂಪಾಯಿ ವೆಚ್ಚದ ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ.
ಹಾಗೆಯೇ ಕಿಮ್ಸ್ ಆವರಣದಲ್ಲಿ 69.09 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವೈದ್ಯಕೀಯ ಸೌಲಭ್ಯಗಳ ಹಾಗೂ ವಿದ್ಯಾರ್ಥಿ ನಿಲಯಗಳನ್ನು ಲೋಕರ್ಪಣೆ ಮಾಡಲಿದ್ದಾರೆ. ಹುಬ್ಬಳ್ಳಿಯಲ್ಲಿ 20.1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಜಗತ್ತಿನ ಉದ್ದವಾದ ರೈಲ್ವೆ ಫ್ಲಾಟ್‌ಫಾರ್ಮ್ ಅನ್ನು ಕೂಡ ಪ್ರಧಾನಿಯರು ಲೋಕಾರ್ಪಣೆ ಮಾಡಲಿದ್ದಾರೆ.












Click it and Unblock the Notifications