'ಧಾರವಾಡದಲ್ಲಿ ಇನ್ಫೋಸಿಸ್ ಘಟಕ ಸ್ಥಾಪನೆ ಖಚಿತ'
ಬೆಂಗಳೂರು, ಜ.1: ಇನ್ಫೋಸಿಸ್ ಸಂಸ್ಥೆ ಧಾರವಾಡದಲ್ಲಿ ಬಂಡವಾಳ ಹೂಡಿಕೆ ಮಾಡಲಿದ್ದು, ಅಗತ್ಯ ಭೂಮಿಯನ್ನು ಈಗಾಗಲೇ ಖರೀದಿಸಲಾಗಿದೆ ಎಂದು ಐಟಿ ಸಚಿವ ಎಸ್ ಆರ್ ಪಾಟೀಲ್ ಹೇಳಿದ್ದಾರೆ. ಇದರಿಂದಾಗಿ ಇನ್ಫೋಸಿಸ್ ಸಂಸ್ಥೆ ಕರ್ನಾಟಕದಲ್ಲೇ ಬಂಡವಾಳ ಹೂಡಿಕೆ ಮಾಡುವುದು ಖಚಿತವಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ದೇಶದ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ತನ್ನ ಹೊಸ ಘಟಕವನ್ನು ಸ್ಥಾಪನೆ ಮಾಡಲಿದೆ. ಸುಮಾರು 1ರಿಂದ 3 ಸಾವಿರ ಕೋಟಿ ರು ಬಂಡವಾಳ ಹೂಡಿಕೆ ಮಾಡಲಿದೆ. ಸುಮಾರು 6 ಸಾವಿರ ಜನರಿಗೆ ಉದ್ಯೋಗ ಅವಕಾಶ ಸಿಗಲಿದೆ ಎಂದು ಸಚಿವ ಪಾಟೀಲ್ ಹೇಳಿದರು. [ಇನ್ಫೋಸಿಸ್ ಶಿಫ್ಟಿಂಗ್: ಸಿಎಂ ಸಿದ್ದು ಜಾಣ ಉತ್ತರ]
ಸರೋಜಿನಿ ಮಹಿಷಿ ವರದಿ ಜಾರಿ: ಖಾಸಗಿ ವಲಯ, ಐಟಿ ಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಈ ಕುರಿತಂತೆ ಸರೋಜಿನಿ ಮಹಿಷಿ ವರದಿ ಜಾರಿಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ಸೂತ್ರ ತಯಾರಿಸಲಾಗುವುದು ಎಂದು ಎಸ್ ಆರ್ ಪಾಟೀಲ್ ತಿಳಿಸಿದರು. [80 ಲಕ್ಷ ಉದ್ಯೋಗ ಅವಕಾಶ ಏರಿಕೆ ಗುರಿ]

ಎರಡನೇ ಸ್ತರದ ನಗರಗಳಿಗೆ ಐಟಿ ಬಿಟಿ ಉದ್ಯಮ ಕರೆದೊಯ್ಯಲಾಗುವುದು. ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿಯಲ್ಲಿ ಐಟಿ ಉದ್ಯಮ ಸ್ಥಾಪನೆಗೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.
ಭೂಮಿ ನೀಡುವ ಸಂಬಂಧ ಉಂಟಾಗಿರುವ ಅವ್ಯವಸ್ಥೆಯಿಂದ ಬೇಸತ್ತು ದೇವನಹಳ್ಳಿ ಯೋಜನೆಯನ್ನು ಇನ್ಫೋಸಿಸ್ ಸ್ಥಗಿತಗೊಳಿಸಿ ದೊಡ್ಡ ಸಂಚಲನ ಮೂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಟಿಸಿಎಸ್ ವಿರುದ್ಧ ಉದ್ಯೋಗಿಗಳ ದಂಗೆ ]
ವಾರ್ಷಿಕವಾಗಿ ಸುಮಾರು 8 ಬಿಲಿಯನ್ ಆದಾಯವನ್ನು ಹೊಂದಿರುವ ಸುಮಾರು 1.4 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಬೆಂಗಳೂರು ಮೂಲದ ದೇಶದ ಎರಡನೇ ಅತಿದೊಡ್ಡ ಸಂಸ್ಥೆ ಇನ್ಫೋಸಿಸ್ ಅಸಮಾಧಾನ ಸಹಜವಾಗಿದೆ ಎಂದು ಇತರೆ ಉದ್ಯಮಿಗಳು ದನಿಗೂಡಿಸಿದ್ದರು. ನಂತರ ಎಚ್ಚೆತ್ತುಕೊಂಡ ಸರ್ಕಾರ ಐಟಿ ಉದ್ಯಮಿಗಳನ್ನು ಹಿತ ಕಾಯಲು ಮುಂದಾಗಿದೆ.












Click it and Unblock the Notifications