Karnataka election 2023: ಧಾರವಾಡದಲ್ಲಿನ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿಬಂದೋಬಸ್ತ್ ಹೀಗಿದೆ
ಧಾರವಾಡ, ಮೇ, 12: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮೇ 10ರಂದು ಮುಗಿದಿದ್ದು, ಮೇ 13ಕ್ಕೆ ಅಂದರೆ ಶನಿವಾರ ಮತ ಏಣಿಕೆ ಕಾರ್ಯ ಆರಂಭವಾಗಲಿದೆ. ಆದ್ದರಿಂದ ಇದೀಗ ಎಲ್ಲರ ಚಿತ್ತ ಮತ ಎಣೆಕೆಯ ಕಡೆ ನೆಟ್ಟಿದೆ. ಹಾಗಾದರೆ ಧಾರವಾಡದ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಪೊಲೀಸ್ ಬಿಗಿಬಂದೋಬಸ್ತ್ ಹೇಗಿದೆ ಎಂದು ತಿಳಿಯೋಣ ಬನ್ನಿ.
ಮತ ಎಣಿಕೆ ದಿನದಂದು ಬಂದೋಬಸ್ತ್‌ಗಾಗಿ 548 ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಅರೆಸೇನಾ ಪಡೆ ನಿಯೋಜನೆ ಮಾಡಲಾಗಿದೆ. ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ತರುವುದನ್ನು ನಿರ್ಬಂಧಿಸಲಾಗಿದೆ. ಪ್ರವೇಶಕ್ಕೆ ನಿಗದಿಪಡಿಸಿ ಮಾರ್ಗ ಬಳಸಲು ಮತ್ತು ಚುನಾವಣಾಧಿಕಾರಿಗಳು ನೀಡಿರುವ ಪಾಸ್‍ಗಳನ್ನು ಕಡ್ಡಾಯವಾಗಿ ಧರಿಸಲು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

ಮತ ಎಣಿಕಾ ಕಾರ್ಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ಮೇ 13ರಂದು ಬೆಳಗ್ಗೆಯಿಂದ ಆರಂಭ ಆಗಲಿದೆ. ಆದ್ದರಿಂದ ಮತ ಎಣಿಕೆ ಕೇಂದ್ರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮವಹಿಸಲಾಗಿದೆ. ಸುಮಾರು 548 ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನು ಸೂಕ್ತ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ರಮಣ ಗುಪ್ತ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಮತ ಎಣಿಕೆ ದಿನದಂದು ಸೂಕ್ತ ಭದ್ರತೆಗಾಗಿ ಡಿಸಿಪಿಗಳ ನೇತೃತ್ವದಲ್ಲಿ 4 ಜನ ಎಸಿಪಿ, 18 ಜನ ಪೊಲೀಸ್ ಇನ್ಸ್‌ಪೆಕ್ಟರ್, 31 ಜನ ಪಿಎಸ್‍ಐ, 60 ಜನ ಎಎಸ್‍ಐ, 138 ಹೆಡ್‍ಕಾನ್‍ಸ್ಟೇಬಲ್, 240 ಪೊಲೀಸ್ ಕಾನ್ಸ್‌ಟೇಬಲ್ ಮತ್ತು 57 ಜನ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 3 ತುಕಡಿ, ಕೇಂದ್ರ ಅರೆಸೇನಾಪಡೆಯ 2 ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಎಂದು ಮಾಹಿತಿ ನೀಡಿದರು.
ಮತ ಎಣಿಕೆ ಕೇಂದ್ರಕ್ಕೆ ತಲುಪುವ ಮಾರ್ಗಗಳು
ಮತ ಎಣಿಕೆ ಸಿಬ್ಬಂದಿ, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲು ಎತ್ತಿನಗುಡ್ಡ ರಸ್ತೆಯ ಮುಖಾಂತರ, ಕೃಷಿ ವಿಶ್ವವಿದ್ಯಾಲಯದ ಹೊಸ ಆಡಳಿತ ಕಚೇರಿ ಆವರಣದಲ್ಲಿ ಪ್ರವೇಶ ದ್ವಾರ ಹಾಗೂ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳ ಮತ ಎಣಿಕೆ ಏಜೆಂಟರು ಮತ ಎಣಿಕಾ ಕೇಂದ್ರಕ್ಕೆ ಆಗಮಿಸಲು ಬೆಳಗಾವಿ ರಸ್ತೆಯ ಕೆಇಬಿ ಗ್ರೀಡ್ ಹತ್ತಿರದ ಪ್ರವೇಶ ದ್ವಾರದ ಮೂಲಕ ಪ್ರವೇಶ ಮಾಡಿ, ಕಾರಂಜಿ ಸರ್ಕಲ್ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೆ ಕೃಷಿ ಮೇಳದ ಮುಖ್ಯ ಪ್ರವೇಶ ದ್ವಾರದ ಮೂಲಕ ಒಳ ಪ್ರವೇಶಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಎತ್ತಿನಗುಡ್ಡದ ರಸ್ತೆಯಲ್ಲಿ ಬರುವ ವಿದ್ಯಾರ್ಥಿನಿಯರ ವಸತಿ ನಿಲಯದ ಹತ್ತಿರ ಇರುವ ಪ್ರವೇಶ ದ್ವಾರದ ಮೂಲಕ ಚುನಾವಣಾ ವೀಕ್ಷಕರು, ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಂಸಿಸಿ ಮುಖ್ಯಸ್ಥರು ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಪ್ರವೇಶಿಸಲು ಅವಕಾಶ ಮಾಡಲಾಗಿದೆ.
ಮತದಾನ ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಅವರ ಕರ್ತವ್ಯಕ್ಕೆ ಅನುಗುಣವಾಗಿ ಪ್ರವೇಶ ಪತ್ರ ಅಥವಾ ಗುರುತಿನ ಚೀಟಿಗಳನ್ನು ಚುನಾವಣಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ನೀಡಿರುತ್ತಾರೆ. ನಿಯೋಜಿತಗೊಂಡ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ತಮಗೆ ನೀಡಿರುವ ಪಾಸ್‍ಗಳನ್ನು ಕಡ್ಡಾಯವಾಗಿ ತರಬೇಕಾಗುತ್ತದೆ. ಆ ದಾಖಲೆಗಳನ್ನು ಭದ್ರತಾ ಸಿಬ್ಬಂದಿ ಕೇಳಿದಾಗ ತಕ್ಷಣ ತೋರಿಸಬೇಕು.
ಅನಾವಶ್ಯಕ ಗೊಂದಲ, ವಾದಗಳಿಗೆ ಅವಕಾಶ ಇರುವುದಿಲ್ಲ. ಹಾಗೂ ಮತ ಎಣಿಕೆ ಕೇಂದ್ರಕ್ಕೆ ಬರುವವರು ನೀರಿನ ಬಾಟಲ್, ಮೊಬೈಲ್, ಕಡ್ಡಿಪೆಟ್ಟಿಗೆ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗಡೆ ತರದಂತೆ ನಿಷೇಧಿಸಲಾಗಿದೆ. ಪ್ರತಿಯೊಬ್ಬರೂ ಚುನಾವಣಾ ಆಯೋಗದ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆಗೆ ಮತ್ತು ಈ ಸಮಯದಲ್ಲಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುತ್ತದೆ. ಆದ್ದರಿಂದ ಸಾರ್ವಜನಿಕರು ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications