ಬಿಜೆಪಿ ನಾಯಕರು ಸುಳ್ಳು ಬುರುಕರು : ಸಿದ್ದರಾಮಯ್ಯ
ಹುಬ್ಬಳ್ಳಿ, ಡಿಸೆಂಬರ್ 21 : 'ಬರ ಪರಿಹಾರಕ್ಕೆಂದು ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಭಾರತೀಯ ಜನತಾ ಪಕ್ಷದ ನಾಯಕರೆಲ್ಲರೂ ಸುಳ್ಳು ಹೇಳುವುದರಲ್ಲಿ ಸಿದ್ಧಹಸ್ತರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಭಾನುವಾರ ಬೆಳಗಾವಿಯಿಂದ ಹಾವೇರಿಗೆ ಹೋಗುವ ಮಾರ್ಗದಲ್ಲಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ಹಣವನ್ನು ಬರ ಪರಿಹಾರಕ್ಕೆಂದು ಬಿಡುಗಡೆ ಮಾಡಿಲ್ಲ. ಬಿಜೆಪಿಯವರು ಸುಮ್ಮನೇ ನಮ್ಮ ಸರ್ಕಾರದ ವಿರುದ್ಧ ದೂರು ಹೇಳುತ್ತ ತಿರುಗುತ್ತಿದ್ದಾರೆ' ಎಂದು ದೂರಿದರು. [ರಾಜ್ಯದ ಬರಪೀಡಿತ ತಾಲೂಕುಗಳ ಪಟ್ಟಿ]

'ನಾನು ಈಗ ಕಾಂಗ್ರೆಸ್ಸಿನಲ್ಲಿ ಸಕ್ರೀಯವಾಗಿರುವುದರಿಂದ ಮೊದಲಿನ ಜನತಾ ಪರಿವಾರಕ್ಕೆ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಚ್.ಡಿ. ಕುಮಾರಸ್ವಾಮಿ ಕೇವಲ ಅಧಿಕಾರ ಪ್ರಾಪ್ತಿ ಮಾತ್ರದ ರಾಜಕಾರಣಿ ಎಂದ ಸಿದ್ದರಾಮಯ್ಯ ಅವರು, ಯಾವತ್ತೂ ಅವರಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆಯೇ ಇಲ್ಲ' ಎಂದು ಹೇಳಿದರು. [3800 ಕೋಟಿ ಬರ ಪರಿಹಾರಕ್ಕೆ ಭೈರೇಗೌಡ ಕೇಂದ್ರದ ಮೊರೆ]
ಕಾನೂನು ಬಾಹಿರ ಕೆಲಸ ಮಾಡಿಲ್ಲ : ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, 'ಅರ್ಕಾವತಿ ಭೂ ಅಕ್ರಮದಲ್ಲಿ ನಾನು ಭಾಗಿಯಾಗಿಲ್ಲ' ಎಂದು ಸ್ಪಷ್ಟಪಡಿಸಿದರು. ನಾನು ಯಾವತ್ತೂ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಅದರಲ್ಲಿ ಅಕ್ರಮವೂ ನಡೆದಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುತ್ತೇನೆ' ಎಂದರು. [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]
ಎಸ್.ಆರ್.ಹಿರೇಮಠ ಏನು ಹೇಳಿದ್ದರು? : ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಎಸ್.ಆರ್.ಹಿರೇಮಠ ಅವರು, 'ರಾಜ್ಯ ಸರ್ಕಾರದ ಐವರು ಸಚಿವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಕಾವತಿ ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ' ಎಂದು ಆರೋಪಿಸಿದ್ದರು.

'ಪ್ರೆಸ್ಟೀಜ್ ಭೂ ಮಾಫಿಯಾದಲ್ಲಿ ಭಾಗಿಯಾದ ರಾಜಕಾರಣಿ ಮತ್ತು ಅಧಿಕಾರಿಗಳ ವಿರುದ್ಧ ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸಚಿವ ಜಾರ್ಜ್ ಮಾಲೀಕತ್ವದ ಪ್ರೆಸ್ಟೀಜ್ ಕಂಪನಿ ಅಕ್ರಮಕ್ಕೆ ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಸಹಾಯ ಮಾಡಿದ್ದಾರೆ. ಹೀಗಾಗಿ ಆ ಕಂಪನಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು' ಎಂದು ಒತ್ತಾಯಿಸಿದ್ದರು.












Click it and Unblock the Notifications