ಪಿಎಂ ಸ್ಮರಣಿಕೆಗಳ ಹರಾಜಿನಲ್ಲಿ ಕಲಘಟಗಿ ತೊಟ್ಟಿಲು, ಇದರ ವಿಶೇಷತೆ ನೀವು ತಿಳಿಯಲೇಬೇಕು?
ಹುಬ್ಬಳ್ಳಿ, ನವೆಂಬರ್, 10: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಸ್ಮರಣಿಕೆಗಳ 5ನೇ ವಾರ್ಷಿಕ ಹರಾಜಿನಲ್ಲಿ ಹುಬ್ಬಳ್ಳಿ ಉಡುಗೊರೆಯಾಗಿ ನೀಡಿದ್ದ ಕಲಘಟಗಿ ತೊಟ್ಟಿಲು ಸ್ಥಾನ ಪಡೆದಿದೆ.
ಈ ಬಾರಿಯ ಹರಾಜು ಪ್ರಕ್ರಿಯೆ ಅಕ್ಟೋಬರ್ 2ರಂದು ಪ್ರಾರಂಭವಾಗಿದ್ದು, ನವೆಂಬರ್ 15 ರವರೆಗೆ ಇರಲಿದೆ. ಜಿಲ್ಲೆಯಲ್ಲಿ ಕಳೆದ ಮಾರ್ಚ್ 12ರಂದು ನಡೆದ ಐಐಟಿ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದರು. ಅವರಿಗೆ ಕಲಘಟಗಿಯ ತೊಟ್ಟಿಲು ಕಲಾವಿದ ಶ್ರೀಧರ ಸಾವಕಾರ ಅವರು ತಯಾರಿಸಿದ ಕಲಘಟಗಿಯ ಪಾರಂಪರಿಕ ಹೆಮ್ಮೆಯ ಪ್ರತೀಕವಾದ ಕೆಮಿಕಲ್ ರಹಿತ ಬಣ್ಣದ ತೊಟ್ಟಿಲನ್ನು ಉಡುಗೊರೆಯಾಗಿ ನೀಡುವ ಮೂಲಕ ಜಿಲ್ಲೆಯ ಸಂಸ್ಕೃತಿ ಬಿಂಬಿಸಲಾಗಿತ್ತು.

ತೊಟ್ಟಿಲಿನ ವಿಶೇಷತೆ
ಕೃಷ್ಣಾವತಾರ, ದಶಾವತಾರ, ರಾಮಾಯಣ-ಮಹಾಭಾರತದ ಕಥೆಗಳ ಚಿತ್ರಗಳನ್ನು ತೊಟ್ಟಿಲಿನ ಮೇಲೆ ಬಿಡಿಸಲಾಗಿದೆ. ಮಗು ದೇವರ ಸನ್ನಿಧಾನದಲ್ಲಿ ಆಡಲಿ ಎಂಬ ಉದ್ದೇಶದಿಂದ ಈ ಚಿತ್ರಗಳನ್ನು ಬರೆಯಲಾಗಿದೆ. ಹಿಂದೂ- ಮುಸ್ಲಿಂ-ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮದವರು ಕಲಘಟಗಿ ತೊಟ್ಟಿಲು ತೆಗೆದುಕೊಂಡು ಹೋಗುತ್ತಾರೆ.
ಅರಗು ಮತ್ತು ನೈಸರ್ಗಿಕ ಬಣ್ಣ ಮಿಶ್ರಣ ಮಾಡಿ ಚಿತ್ರ ಬಿಡಿಸುತ್ತಾರೆ. ಕಲಘಟಗಿಯ ಚಿತ್ರಗಾರ ಗಲ್ಲಿಯಲ್ಲಿ ನೆಲೆಸಿರುವ ಸಾವುಕಾರ ಕುಟುಂಬ ನಾಲ್ಕು ತಲೆಮಾರುಗಳಿಂದಲೂ ಈ ಕೆಲಸದಲ್ಲಿ ತೊಡಗಿದೆ. ಇವರು ತಯಾರಿಸುವ ತೊಟ್ಟಿಲು ಬೆಂಗಳೂರು, ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಮೆರಿಕ, ದುಬೈ, ಫ್ರಾನ್ಸ್ ದೇಶಗಳಲ್ಲೂ ತನ್ನ ವೈಶಿಷ್ಟ್ಯ ಸಾರಿದೆ.
https://pmmementos.gov.inದಲ್ಲಿ ಪ್ರೊಡಕ್ಟ್ ಕೋಡ್ 23A0617 ಅಂತಾ ಹುಡುಕಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕೊನೆಯ ದಿನಾಂಕ ನವೆಂಬರ್ 15 ಆಗಿದೆ. ಈ ಬಾರಿಯ 912 ಸ್ಮರಣಿಕೆಗಳ(ಉಡುಗೊರೆ) "ಇ-ಹರಾಜಿ'ನಿಂದ ಬರುವ ಆದಾಯವು ಪವಿತ್ರ ಗಂಗಾ ನದಿ ಪುನರುಜ್ಜೀವನಗೊಳಿಸುವ "ನಮಾಮಿ ಗಂಗೆ' ಯೋಜನೆಗೆ ಹೋಗಲಿದೆ.
ನಮ್ಮ ತಂದೆ ಲಕ್ಷ್ಮಣ ಸಾವಕಾರ ಹಾಗೂ ದೊಡ್ಡಪ್ಪ ಗಂಗಾಧರ ಸಾವಕಾರ ಅವರ ಕಾಲದಿಂದ ಇಲ್ಲಿಯವರೆಗೂ ವಿವಿಧ ರಾಜಕಾರಣಿಗಳ ಮನೆಗಳಿಗೆ, ಅಧಿಕಾರಿಗಳ ಕುಟುಂಬಗಳಿಗೆ, ಡಾ.ರಾಜಕುಮಾರ್ ಅವರಂತಹ ಸಿನಿಮಾ ನಟರಿಗೆ ನಮ್ಮ ಕಲಘಟಗಿ ತೊಟ್ಟಿಲು ತಯಾರಿ ಮಾಡಿಕೊಡುತ್ತಾ ಬಂದಿದ್ದೇವೆ. ಆದರೆ ಈ ಬಾರಿ ಪ್ರಧಾನಿ ಮೋದಿಯವರಿಗೆ ನಮ್ಮ ಕಲಘಟಗಿಯ ತೊಟ್ಟಿ ಲು ನೀಡಿದ್ದೇ ಒಂದು ಸೌಭಾಗ್ಯವಾಗಿದೆ ಎಂದು ಬಣ್ಣಿಸಲಾಗಿದೆ.












Click it and Unblock the Notifications