IT Raids: ದೀಪಕ್ ಚಿಂಚೋರೆ ಬೆಂಬಲಿಗ ರಾಬರ್ಟ್ ದದ್ದಾಪುರಿಗೆ ಐಟಿ ಶಾಕ್
ಧಾರವಾಡ, ಮೇ, 08: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ರಾಜ್ಯದ ಹಲವೆಡೆ ಐಟಿ ಅಧಿಕಾರಿಗಳ ದಾಳಿಯು ಮುಂದುವರೆದಿದೆ. ಅದೇ ರೀರಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಅವರ ಬೆಂಬಲಿಗ ರಾಬರ್ಟ್ ದದ್ದಾಪುರಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಧಾರವಾಡದ ವಿವೇಕಾನಂದ ನಗರದಲ್ಲಿರುವ ರಾಬರ್ಟ್ ದದ್ದಾಪುರಿ ಅವರ ಮನೆಗೆ ಬಂದ 6 ಜನ ಐಟಿ ಅಧಿಕಾರಿಗಳ ತಂಡ ವಿವಿಧ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದೆಡೆ ರಾಬರ್ಟ್ ದದ್ದಾಪುರಿ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಅವರೊಂದಿಗೆ ಗುರುತಿಸಿಕೊಂಡು ಅವರ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ವಿನಯ್ ಕುಲಕರ್ಣಿ ಆಪ್ತನಿಗೆ ಐಟಿ ಶಾಕ್
ಮತ್ತೊಂದೆಡೆ ಇತ್ತೀಚೆಗಷ್ಟೇ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಆಪ್ತ ಪ್ರಶಾಂತ್ ಕೇಕರೆ ಅವರ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಧಾರವಾಡದ ಸಪ್ತಾಪುರ ಕೃಷಿ ಪಾರ್ಕ್‌ನಲ್ಲಿ ಪ್ರಶಾಂತ್ ಅವರ ಮನೆ ಇದ್ದು, ಆ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಅರ್ಧ ಗಂಟೆಯಿಂದಲೂ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೀಗೆ ಚುನಾವಣೆ ಹೊಸ್ತಿಲಲ್ಲೇ ವಿನಯ್ ಕುಲಕರ್ಣಿಗೆ ಐಟಿ ಶಾಕ್ ನೀಡಿದೆ. ಪ್ರಶಾಂತ್ ಕೇಕರೆ ಚುನಾವಣೆ ವೇಳೆ ಇದು ಸಹಜ ಎನ್ನುತ್ತಲೇ ಐಟಿ ಅಧಿಕಾರಿಗಳಿಗೆ ಮನೆಯ ಕೀ ನೀಡಿ ಅವರನ್ನು ಒಳಗಡೆ ಕರೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಅಶೋಕ್ ರೈ ಸಹೋದರನ ಮನೆ ಮೇಲೆ ಐಟಿ ದಾಳಿ
ಕರ್ನಾಟಕ ವಿಧಾನಸಭಾ ಚುನಾವಣಾ ಸಮೀಪಿಸುತ್ತಿರುವ ಹೊತ್ತಿನಲ್ಲೇ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಗೆ ಆದಾಯ ತೆರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸಹೋದರನ ಮನೆ ಮೇಲೆ ಐಟಿ ಅಧಿಕಾರಿಗಳು ಇತ್ತೀಚೆಗಷ್ಟೇ ದಾಳಿ ನಡೆಸಿದ್ದರು. ಮೈಸೂರಿನಲ್ಲಿ ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಐಟಿ ಅಧಿಕಾರಿಗಳು ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ದಾಳಿ ನಡೆಸಿ, ಅವರ ಮನೆಯಂಗಳದಲ್ಲಿದ್ದ ಗಿಡದಲ್ಲಿ ನೇತು ಹಾಕಿದ್ದ ಒಂದು ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications