ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಬದಲಾವಣೆ: ಶಶಿಕುಮಾರ್ ನೇಮಕ
ಹುಬ್ಬಳ್ಳಿ, ಜುಲೈ 03: ಅಪರಾಧ ಚಟುವಟಿಕೆಗಳು, ನಿರಂತರ ಪ್ರತಿಭಟನೆಗಳು ನಡೆದಿದ್ದ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಕಾನೂನು ಸುವ್ಯವ್ಥೆಸ ಸರಿಯಲ್ಲ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೆ ಇದೀಗ ಇಲ್ಲಿನ ಪೊಲೀಸ್ ಆಯುಕ್ತರು ಬದಲಾವಣೆಗೊಂಡಿದ್ದಾರೆ.
ಹೌದು, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಾಗಿದ್ದ ರೇಣುಕಾ ಸುಕುಮಾರ ಅವರ ಸ್ಥಾನಕ್ಕೆ ಇದೀಗ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಇಲ್ಲಿನ ಆಯುಕ್ತರ ದಿಢೀರ್ ವರ್ಗಾವಣೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಏಕೆಂದರೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಸೇರಿದಂತೆ ಕಳೆದ ಕೆಲವು ವಾರಗಳಲ್ಲಿ ಸಾಲು ಸಾಲು ಕೊಲೆ ಪ್ರಕರಣಗಳು ಬೆಳಕಿಗೆ ಬಂದವು. ಇದರ ಬೆನ್ನಲ್ಲೆ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂತು. ಇಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಂಘ, ಸಂಸ್ಥೆಗಳು, ಬಿಜೆಪಿ ಮುಖಂಡರು ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಸಾಲು ಸಾಲು ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ಪ್ರಶ್ನೆ ಏನು?
ಈ ವೇಳೆ ಎಲ್ಲವು ಸರಿ ಇದೆ ಎಂದು ಸಮಜಾಯಿಷಿ ನೀಡಿದ್ದ ರಾಜ್ಯ ಸರ್ಕಾರ, ಇದೀಗ ಪರೋಕ್ಷವಾಗಿ ಪೊಲೀಸ್ ಆಯುಕ್ತರನ್ನು ವರ್ಗಾಯಿಸುವ ಮೂಲಕ ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿತೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕೇವಲ ಕೊಲೆ ಇನ್ನಿತರ ಅಪರಾಧ ಚಟುವಟಿಕೆ ಜೊತೆಗೆ ಈ ಬೆಂಗಳೂರು ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದ ಪ್ರಕರಣಕ್ಕೆ ಹುಬ್ಬಳ್ಳಿಗೆ ಲಿಂಕ್ ಇರುವುದು ಗೊತ್ತಾಗಿತ್ತು. ಮೇ 21ರಂದು ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ 11 ಕಡೆಗೆ ಏಕಕಾಲಕ್ಕೆ ದಾಳಿ ನಡೆಸಿ ಇಬ್ಬರು ಬಂಧಿಸಿದ್ದರು. ಹೀಗೆ ಹಲವು ಅಪರಾಧ ಪ್ರಕರಣಗಳ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಅವಳಿನಗರಗಳು ಮುನ್ನೆಲೆಗೆ ಬಂದಿದ್ದವು.
ಪೊಲೀಸ್ ಆಯುಕ್ತರು ಸೇರಿ ಇಬ್ಬರ ವರ್ಗಾವಣೆ
ಅವಳಿನಗರ ಈ ಎಲ್ಲ ಅಪರಾಧ ಚಟುವಟಿಕೆಗಳು, ನಿರಂತರ ಪ್ರತಿಭಟನೆ ವಿಚಾರವಾಗಿ ಕಳೆದ ಮೂರು ತಿಂಗಳಲ್ಲಿ ಸುದ್ದಿ ಆಗಿದ್ದವು. ಇದರ ಬೆನ್ನಲ್ಲೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ ಮಾಡಲಾಗಿದೆ. ಇಲ್ಲಿದ್ದ ಆಯುಕ್ತೆ ರೇಣುಕಾ ಸುಕುಮಾರ್ ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಡಿಸಿಪಿ ಚೌಕ್ಸಿ ಸಹ ವರ್ಗಾವಣೆ ಮಾಡಲಾಗಿದೆ. ತೆರವಾದ ಚೌಕ್ಸಿ ಸ್ಥಾನಕ್ಕೆ ಮಹಾನಿಂಗ್ ನಂದಗಾವಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.












Click it and Unblock the Notifications