ಗಣೇಶ ಚುತುರ್ಥಿ; ಬರವಿದೆ, ವಿಗ್ರಹ ವಿಸರ್ಜನೆಯಿಂದ ಜಲ ಮೂಲ ಮಲೀನ ಬೇಡ
ಧಾರವಾಡ, ಆಗಸ್ಟ್ 27; "ಗಣೇಶಮೂರ್ತಿಗಳ ವಿಸರ್ಜನೆ ಸಮಯದಲ್ಲಿ ಜನ, ಪ್ರಾಣಿ, ಪಕ್ಷಿಗಳು ಕುಡಿಯುವ ನೀರು ಮತ್ತು ನೀರಿನ ಮೂಲಗಳು ಮಲೀನವಾಗದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಬರದ ಛಾಯೆ ಕಾಣುತ್ತಿರುವುದರಿಂದ ಮತ್ತು ನೀರು ಅತ್ಯಮೂಲ್ಯವಾಗಿರುವುದರಿಂದ ಪ್ರತಿಯೊಬ್ಬರು ಈ ಕುರಿತು ಕಾಳಜಿ ವಹಿಸುವುದು ಮುಖ್ಯವಾಗಿದೆ" ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣೇಶ ಚತುರ್ಥಿ 2023ರ ಅಂಗವಾಗಿ ಅವಳಿ ನಗರ ಹಾಗೂ ಜಿಲ್ಲೆಯಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸುವ ತಯಾರಕರ, ಮಾರಾಟಗಾರರ, ಪರಿಸರವಾದಿಗಳ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಅವರು ನಡೆಸಿದರು.

"ಜಿಲ್ಲೆಯ ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಿಓಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ನಿಷೇಧಿಸಿದೆ. ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಸ್ಥಾಪಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಸ್ಥಾಪಿಸಲು ಸರಕಾರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗದರ್ಶಿಸೂತ್ರಗಳನ್ನು ನೀಡಿದೆ. ಪಿಓಪಿ ಗಣಪತಿ ಮೂರ್ತಿಗಳ ಸ್ಥಾಪನೆಗೆ ಸರ್ಕಾರ 2016ರಲ್ಲಿ ನಿರ್ಬಂಧಿಸಿ ಆದೇಶಿಸಿದೆ. ಆದೇಶ ಉಲ್ಲಂಘಿಸಿ ಪಿಓಪಿ ಗಣಪತಿ ಸ್ಥಾಪಿಸಿದರೆ ಮತ್ತು ಜಲಮೂಲಗಳಲ್ಲಿ ವಿಸರ್ಜಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ರೂ.10 ಸಾವಿರ ದಂಡ ಮತ್ತು ಜೈಲುವಾಸ ವಿಧಿಸಬಹುದಾಗಿದೆ" ಎಂದು ಎಚ್ಚರಿಸಿದರು.
"ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಸ್ಥಾಪನೆ ಮಾಡುವ ಸಮಿತಿಯವರು ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಮತ್ತು ಸರ್ಕಾರದ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಸಮಿತಿ ಮೇಲಿದೆ. ರಾಸಾಯನಿಕ ಬಣ್ಣ ಬಳಕೆ ಮಾಡಿದ ವಿಗ್ರಹಗಳನ್ನು ಬಳಸಬಾರದು ಮತ್ತು ನಿಗದಿತ ಸ್ಥಳ ಹೊರತುಪಡಿಸಿ ಇತರ ಜಲಮೂಲಗಳಲ್ಲಿ ವಿಗ್ರಹಗಳನ್ನು ವಿಸರ್ಜಿಸಬಾರದು" ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
"ಕುಡಿಯುವ ನೀರು ಮತ್ತು ನೀರಿನ ಮೂಲಗಳು ಮಲೀನವಾಗದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ನಾಡಿನಾದ್ಯಾಂತ ಬರದ ಛಾಯೆ ಕಾಣುತ್ತಿರುವದರಿಂದ ಮತ್ತು ನೀರು ಅತ್ಯಮೂಲ್ಯವಾಗಿರುವುದರಿಂದ ಪ್ರತಿಯೊಬ್ಬರು ಈ ಕುರಿತು ಕಾಳಜಿ ವಹಿಸುವುದು ಮುಖ್ಯವಾಗಿದೆ" ಎಂದರು.
ಪಿಓಪಿ ವಿಗ್ರಹಗಳ ಬಳಕೆ; ಜಿಲ್ಲಾಧಿಕಾರಿಗಳು ಮಾತನಾಡಿ, "ಅವಳಿ ನಗರ ಹಾಗೂ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಪಿಓಪಿ ಗಣೇಶ ವಿಗ್ರಹಗಳ ದಾಸ್ತಾನು, ಮಾರಾಟ ಕಂಡುಬಂದರೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಹಾಯವಾಣಿ ಹಾಗೂ ಮಹಾನಗರ ಪಾಲಿಕೆ ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಬಹುದು. ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸುತ್ತದೆ ಮತ್ತು ದಾಸ್ತಾನು ಹೊಂದಿರುವ ಪಿಓಪಿ ವಿಗ್ರಹಗಳನ್ನು ಜಪ್ತಿ ಮಾಡಿ, ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು" ಎಂದು ಹೇಳಿದರು.
"ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಗಣೇಶ ವಿಗ್ರಹಗಳ ಸಾಗಾಟ ಹಾಗೂ ಮಾರಾಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಪಿಓಪಿ ಗಣೇಶ ವಿಗ್ರಹಗಳು ಜಿಲ್ಲೆಗೆ ಬರದಂತೆ ತಡೆಯಲು ಪೊಲೀಸ್ ಚೇಕ್‍ಪೋಸ್ಟ್‌ಗಳಲ್ಲಿ ನಿರಂತರ ನಿಗಾವಹಿಸಬೇಕೆಂದು" ಜಿಲ್ಲಾಧಿಕಾರಿಗಳು ಸೂಚಿಸಿದರು.
"ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಸ್ಥಾಪನೆಗೆ ಶೀಘ್ರವಾಗಿ ಅನುಮತಿ ಪಡೆಯಲು ಮಹಾನಗರ ಪಾಲಿಕೆ ಹಾಗೂ ನಗರ ಪ್ರದೇಶಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗುವುದು. ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತಿಗಳು ಗಣೇಶ ವಿಸರ್ಜನೆಯ ಸ್ಥಳಗಳನ್ನು ಗುರುತಿಸಿ, ಮುಂಚಿತವಾಗಿಯೇ ತಿಳಿಸಬೇಕು. ಗಣೇಶ ವಿಸರ್ಜನೆಯ ದಿನಗಳಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಹಾನಗರ ಪಾಲಿಕೆಯು ಸಾರ್ವಜನಿಕರಿಗೆ ಮೊಬೈಲ್ ಟ್ಯಾಂಕರ್‌ಗಳ ಸೌಲಭ್ಯ ಕಲ್ಪಿಸಬೇಕು. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ಮೊಬೈಲ್ ಟ್ಯಾಂಕರ್ ಸಂಚರಿಸುವ ಮಾರ್ಗ, ಸ್ಥಳ ಮತ್ತು ಸಮಯವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಜನರಿಗೆ ತಿಳಿಸಬೇಕು" ಎಂದರು.
ಗಣೇಶೋತ್ಸವದ ಸಂದರ್ಭದಲ್ಲಿ ಪ್ಲಾಸ್ಟಿಕ್‍ನಿಂದ ತಯಾರಿಸಿದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಬಟ್ಟೆ ಬ್ಯಾನರ್‌ಗಳನ್ನು ಮಾತ್ರ ಬಳಸಬೇಕು. ಸರ್ಕಾರವು ಜುಲೈ 1,2022ರಿಂದಲೇ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಿ ಆದೇಶಿಸಿದೆ. ಆದ್ದರಿಂದ ಸಮಿತಿ ಹಾಗೂ ಸಾರ್ವಜನಿಕರು ಬಟ್ಟೆ ಬ್ಯಾನರ್‌ಗಳನ್ನು ಮಾತ್ರ ಬಳಸಬೇಕು ಎಂದು ಸೂಚನೆ ನೀಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದಲ್ಲಿ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೊಂದಿಗೆ ಸಭೆ ನಡೆಸಿ, ಸರ್ಕಾರದ ಮಾರ್ಗಸೂಚಿಗಳನ್ನು ಮನವರಿಕೆ ಮಾಡಿಕೊಡಬೇಕು. ಶಾಂತಿ, ಸುವ್ಯವಸ್ಥೆಯಿಂದ ಗಣೇಶೋತ್ಸವ ಆಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಮಾತನಾಡಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, "ಗಣೇಶೋತ್ಸವ ಆಚರಣೆಗೆ ಈಗಾಗಲೇ ಜಾರಿಯಲ್ಲಿರುವ ನಿಯಮ ಮತ್ತು ಆದೇಶಗಳು ಅನ್ವಯಿಸುತ್ತವೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ನಿಗದಿ ಪಡಿಸಿದ ಡಿಸಿಬಲ್ ಹೊಂದಿರುವ ಧ್ವನಿವರ್ಧಕಗಳನ್ನು ಬಳಸಲು ಅವಕಾಶವಿದೆ. ಡಿಜೆ ಬಳಕೆಗೆ ಅವಕಾಶವಿಲ್ಲ. ಈ ಕುರಿತು ಸಾರ್ವಜನಿಕರು, ಸಮಿತಿಯವರು ಸಹಕಾರ ನೀಡಬೇಕು" ಎಂದರು.












Click it and Unblock the Notifications