IAS transfer; ಧಾರವಾಡ, ಶಿವಮೊಗ್ಗಕ್ಕೆ ಹೊಸ ಡಿಸಿ
ಧಾರವಾಡ, ಜನವರಿ 28: ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಧಾರವಾಡ, ಶಿವಮೊಗ್ಗಕ್ಕೆ ಹೊಸ ಜಿಲ್ಲಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವರ್ಗಾವಣೆ ಮಾಡಿರುವ ಸರ್ಕಾರ ನೂತನ ಜಿಲ್ಲಾಧಿಕಾರಿಯಾಗಿ ದಿವ್ಯಪ್ರಭು ಜಿ. ಆರ್. ಜೆ. (ಕೆಎನ್: 2014) ನೇಮಕ ಮಾಡಿದೆ. ಗುರುದತ್ತ ಹೆಗಡೆ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಕಳೆದ ವಾರ ಕರ್ನಾಟಕ ಸರ್ಕಾರ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿದ್ದ ದಿವ್ಯಪ್ರಭು ಜಿ. ಆರ್. ಜೆ. ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು. ಅವರ ಸ್ಥಾನಕ್ಕೆ ವೆಂಕಟೇಶ್ ಟಿ. ನೇಮಕ ಮಾಡಿತ್ತು. ದಿವ್ಯಪ್ರಭು ಜಿ. ಆರ್. ಜೆ. ಅವರಿಗೆ ಸ್ಥಳ ನಿಗದಿ ಮಾಡಿರಲಿಲ್ಲ.
ಈಗ ಧಾರವಾಡ ಜಿಲ್ಲಾಧಿಕಾರಿಯಾಗಿ ದಿವ್ಯಪ್ರಭು ಜಿ. ಆರ್. ಜೆ. ಅವರನ್ನು ತಕ್ಷಣದಿಣದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ನೇಮಕ ಮಾಡಿದ್ದು, ಗುರುದತ್ತ ಹೆಗಡೆ ವರ್ಗಾವಣೆ ಮಾಡಲಾಗಿದೆ. ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.
2022ರಲ್ಲಿ ಕರ್ನಾಟಕ ಸರ್ಕಾರ ಧಾರವಾಡ ಡಿಸಿಯಾಗಿದ್ದ ನಿತೇಶ್ ಕೆ. ಪಾಟೀಲ ಅವರನ್ನು ವರ್ಗಾವಣೆ ಮಾಡಿತ್ತು. ಗುರುದತ್ತ ಹೆಗಡೆ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತ್ತು.
ಗುರುದತ್ತ ಹೆಗಡೆ 2014ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೊನ್ನಗದ್ದೆ ಗ್ರಾಮದ ಅವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಧಾರವಾಡದ ಕೆಇ ಬೋರ್ಡ ಶಾಲೆಯಲ್ಲಿ ಮಾಡಿದ್ದಾರೆ.
ಪಿಯು ಶಿಕ್ಷಣವನ್ನು ಸಹ ಧಾರವಾಡದಲ್ಲಿಯೇ ಪೂರೈಸಿದ್ದಾರೆ. ಧಾರವಾಡದಲ್ಲಿ ವ್ಯಾಸಂಗ ಮಾಡಿದ ಅವರು ಉತ್ತರ ಕನ್ನಡ ಜಿಲ್ಲೆಯ ಪಕ್ಕದ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಗುರುದತ್ತ ಹೆಗಡೆ ಬೆಂಗಳೂರಿನ ಆರ್. ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ 2014ರಲ್ಲಿ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದರು.
ಪ್ರೊಬೇಷನರಿ ಅವಧಿಯನ್ನು ಬೀದರ್ ಜಿಲ್ಲೆಯಲ್ಲಿ ಪೂರೈಸಿದರು. ಕೊಪ್ಪಳದ ಉಪವಿಭಾಗಾಧಿಕಾರಿಯಾಗಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಈಗ ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಶಿವಮೊಗ್ಗಕ್ಕೆ ಹೊಸ ಡಿಸಿ; ಕರ್ನಾಟಕ ಸರ್ಕಾರ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ವರ್ಗಾವಣೆ ಮಾಡಿದ್ದು, ಬೆಂಗಳೂರು ಇ-ಆಡಳಿತ ಕೇಂದ್ರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ಗುರುದತ್ತ ಹೆಗಡೆ ಅವರನ್ನು ಶಿವಮೊಗ್ಗದ ನೂತನ ಜಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.












Click it and Unblock the Notifications