ಹುಬ್ಬಳ್ಳಿ: ಬೆಟ್ಟಿಂಗ್ ದಂಧೆಗೆ ಇಬ್ಬರು ವಿದ್ಯಾರ್ಥಿಗಳು ಬಲಿ
ಹುಬ್ಬಳ್ಳಿ, ಮೇ.20: ಐಪಿಎಲ್ ಬೆಟ್ಟಿಂಗ್ ದಂಧೆಗೆ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳು ಬಲಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸುಲಭವಾಗಿ ಹಣ ಗಳಿಸುವ ಆಸೆಗೆ ಬಿದ್ದ ಹುಡುಗರನ್ನು ಸೆಳೆದ ಬೆಟ್ಟಿಂಗ್ ದಂಧೆ ಹೈಸ್ಕೂಲ್ ವಿದ್ಯಾರ್ಥಿಗಳಿಬ್ಬರ ಬದುಕನ್ನೇ ಬಲಿ ತೆಗೆದುಕೊಂಡಿದೆ.
ಹುಬ್ಬಳ್ಳಿಯ ಭವಾನಿ ನಗರ ಎಸ್‌ಬಿಐ ಕಾಲೋನಿಯ ನಿವಾಸಿ 9ನೇ ತರಗತಿಯ ವಿದ್ಯಾರ್ಥಿ ನೇಹಾಲ ಅಶ್ವಿನ್ ಮಿಠಾರೆ (14) ಹಾಗೂ 8ನೇ ತರಗತಿಯ ವಿದ್ಯಾರ್ಥಿ ಸ್ವರೂಪ ಪ್ರಕಾಶ್ ರೋಖಡೆ (15) ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿ ಮೇಲೆ ಬೆಟ್ಟಿಂಗ್ ಕಟ್ಟಿದ್ದರು. ಆದರೆ, ಬೆಟ್ಟಿಂಗ್ ನಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಹಣ ಹಿಂತಿರುಗಿಸಬೇಕಾಗಿತ್ತು. ಹಣ ಹಿಂತಿರುಗಿಸಲು ಸಾಧ್ಯವಾಗದೆ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ರಾತ್ರಿ ಊಟ ಮುಗಿಸಿಕೊಂಡು ಹೊರನಡೆದ ಈ ಇಬ್ಬರು ಬೆಳಗ್ಗೆ ಹುಬ್ಬಳ್ಳಿ ಅಶೋಕ ನಗರ ರೇಲ್ವೆ ಟ್ರ್ಯಾಕ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ.ರಾತ್ರಿ ಊಟ ಮುಗಿಸಿ ಸುತ್ತಾಡಿಕೊಂಡು ಬರುವುದಾಗಿ ಮನೆಯಿಂದ ಬೈಕ್ ತೆಗೆದುಕೊಂಡು ತೆರಳಿದ್ದಾರೆ.

ಮಕ್ಕಳು ತಡರಾತ್ರಿವರೆಗೂ ಮನೆಗೆ ಮರಳದಿದ್ದಾಗ ಭಯಭೀತರಾದ ಪೋಷಕರು ಹುಡುಕಾಟ ನಡೆಸಿದ್ದಾರೆ. ಎಲ್ಲೂ ಕೂಡಾ ಮಕ್ಕಳ ಸುಳಿವು ಸಿಗದಿದ್ದಾಗ ಅಶೋಕ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮಕ್ಕಳಿಬ್ಬರೂ ತೆಗೆದುಕೊಂಡು ಹೋಗಿದ್ದ ಬೈಕ್ ಅಶೋಕ ನಗರ ರೇಲ್ವೆ ಹಳಿಯ ಪಕ್ಕ ಪತ್ತೆಯಾಗಿದೆ. ಸ್ಥಳ ಪರಿಶೀಲಿಸಿದಾಗ ಇಬ್ಬರೂ ಮಕ್ಕಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ.
ಬೆಟ್ಟಿಂಗ್ ಏಜೆಂಟ್ ಗಳು ಹಣಕ್ಕಾಗಿ ಮಕ್ಕಳನ್ನು ಪೀಡಿಸಿದ್ದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಊಹಿಸಲಾಗಿದೆ. ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನೇಹಾಲ ಅಶ್ವಿನ್ ಮಿಠಾರೆ ಹಾಗೂ ಸ್ವರೂಪ ಪ್ರಕಾಶ್ ರೋಖಡೆ ಅವರಿಗೆ ಬೆಟ್ಟಿಂಗ್ ಹುಚ್ಚು ಯಾರು ಹತ್ತಿಸಿದರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಇಬ್ಬರ ಶಾಲೆಯ ಸ್ನೇಹಿತರು, ಶಿಕ್ಷಕರನ್ನು ಈ ಬಗ್ಗೆ ವಿಚಾರಿಸಲಾಗುತ್ತಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications