ನೀತಿ ಸಂಹಿತೆ ಉಲ್ಲಂಘಿಸಿದ ಸಚಿವರು, ಇತರ ಹುಬ್ಬಳ್ಳಿ ಸುದ್ದಿಗಳು
ಹುಬ್ಬಳ್ಳಿ, ಡಿಸೆಂಬರ್ 03 : ಪಶುಸಂಗೋಪನಾ ಸಚಿವ ಎ.ಮಂಜು ಅವರು ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆಯನ್ನ ಉಲ್ಲಂಘಿಸಿದ್ದಾರೆ. ಮಂಗಳವಾರ ಧಾರವಾಡ ಕೆಎಂಎಫ್ ತರಬೇತಿ ಘಟಕಕ್ಕೆ ಭೇಟಿ ನೀಡಿದ ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಸಭೆಗೆ ಆಗಮಿಸುವ ಕುರಿತು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡದ ಸಚಿವರು, ಸುಮಾರು 3 ಗಂಟೆಗಳ ತನಕ ಸಭೆ ನಡೆಸಿದ್ದಾರೆ. ಅಧಿಕಾರಿಗಳ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ನೀತಿ ಸಂಹಿತೆಯನ್ವಯ ಜನಪ್ರತಿನಿಧಿಗಳು ಮತದಾರರಿಗೆ ಪ್ರಭಾವ ಬೀರುವಂತಹ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. [ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]

ರಾಜಾಗೆ ನ್ಯಾಯಾಂಗ ಬಂಧನ : ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಡಿಸೆಂಬರ್ 22ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಳಗಾವಿ ಕೋಕಾ ನ್ಯಾಯಾಲಯ ಆದೇಶ ನೀಡಿದೆ. ಅಂಕೋಲಾದ ಗಣಿ ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿದಂತೆ ರಾಜಾನನ್ನು ಬಂಧಿಸಲಾಗಿದೆ.[ಬನ್ನಂಜೆ ರಾಜಾ ಸಂದರ್ಶನ : 4 ಟಿವಿ ವಾಹಿನಿಗೆ ನೋಟೀಸ್]
ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜಾನನ್ನು ಬುಧವಾರ ಬಿಗಿಭದ್ರತೆಯ ನಡುವೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕರ್ನಾಟಕ ಸಂಘಟಿತ ಅಪರಾಧ ತಡೆ (ಕೋಕಾ) ನ್ಯಾಯಾಲಯ ರಾಜಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ : ಕಸಬಾ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೌಲಪೇಟೆಯಲ್ಲಿ ಮಹಿಳೆಯೊಬ್ಬರು ತನ್ನ ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಶಮಾ ಫಕ್ರುದ್ದೀನ್ (35) ಎಂದು ಗುರುತಿಸಲಾಗಿದೆ. ಶಮಾ ಮಗಳಾದ ಶಕೀನಾ (5) ಮೃತಪಟ್ಟಿದ್ದು, ಮಗ ಸಾಹಿರ್ (7) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.












Click it and Unblock the Notifications