ಹೊಸ ತಿರುವು ಪಡೆದ ಹುಬ್ಬಳ್ಳಿ ಕಿಮ್ಸ್ ಮಗು ಅಪಹರಣ ಪ್ರಕರಣ
ಹುಬ್ಬಳ್ಳಿ, ಜನವರಿ, 28: ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಅಪಹರಣ ಮಾಡಿದ ಮಹಿಳೆ ಆತ್ಮಹತ್ಯೆ ಮಾಡಿಕೊಂಡು ಒಂದು ದಿನವೂ ಕಳೆದಿಲ್ಲ. ಆದಾಗಲೇ ಈ ಸುದ್ದಿ ಹೊಸ ತಿರುವು ಪಡೆದುಕೊಂಡಿದ್ದು, ಮಹಿಳೆ ಸಾವಿಗೆ ಹುಬ್ಬಳ್ಳಿ ವಿದ್ಯಾನಗರ ಪೊಲೀಸರೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಗುರುವಾರ ಬೆಳಗ್ಗೆ ಧಾರವಾಡ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಗು ಅಪಹರಣದ ಆರೋಪಿ ಸುರೇಖಾ ಕಾವಡೆ ಮೇಲೆ ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಹಲ್ಲೆ ಮಾಡಿದ್ದಾರೆ. ಇದರಿಂದ ನೊಂದ ಈಕೆ ನೇಣಿಗೆ ಶರಣಾಗಿದ್ದಾಳೆ ಎಂದು ಆಕೆಯ ಅತ್ತೆ ಮತ್ತು ಗಂಡ ಹೇಳಿಕೆ ನೀಡಿದ್ದಾರೆ.[ಹುಬ್ಬಳ್ಳಿ ಕಿಮ್ಸ್ ನಲ್ಲಿ ಮಗು ಕದ್ದವಳ ಸಾವಿನ ಕತೆ]

ಸುರೇಖಾ ಕಾವಡೆ ಅತ್ತೆ ಮತ್ತು ಗಂಡ ಹೇಳುವುದೇನು?
ಸುರೇಖಾ ಕಾವಡೆ ತನ್ನ ಗಂಡ ಪ್ರತಾಪ್ ಮತ್ತು ಅತ್ತೆ ಜಯಮ್ಮಳ ಜೊತೆ ದಾವಣಗೆರೆಯ ಹರಪ್ಪನಹಳ್ಳಿಯಲ್ಲಿ ವಾಸವಾಗಿದ್ದರು. ಪ್ರತಾಪ್ ಧಾರವಾಡದಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದರೆ, ಸುರೇಖಾ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು.
ಈಕೆಗೆ ಮಕ್ಕಳು ಬೇಕು ಎಂಬ ಹಂಬಲ. ಆದರೆ ದುರದೃಷ್ಟಾವಶಾತ್ ಎರಡು ಬಾರಿ ಗರ್ಭಪಾತವಾಗಿತ್ತು. ಮಗುವಿಗಾಗಿ ಹಾತೊರೆಯುವ ಇವಳನ್ನು ನೋಡಿದ ಕಿಮ್ಸ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳು ಸುರೇಖಾಳಿಂದ 500 ರೂ. ತೆಗೆದುಕೊಂಡು ಹಾವೇರಿಯ ಅನಿತಾಳ 11 ದಿನದ ಮಗುವನ್ನು ಆಕೆಗೆ ಕೊಟ್ಟಿದ್ದಾರೆ.[ವೈದ್ಯೆಯಂತೆ ಬಂದು ಮಗು ಕದ್ದೊಯ್ದ ಮಹಿಳೆ ಪೊಲೀಸರ ವಶ]
ಆಗ ಗಂಡ ಮತ್ತು ಅತ್ತೆ ಮನೆಗೆ ತಂದ ಮಗುವನ್ನು ಮರಳಿಸೋಣ ಎಂದು ಬುದ್ಧಿ ಮಾತು ಹೇಳಿ ಮಗು ವಾಪಸ್ ಕೊಡಲು ಹೋಗಬೇಕೆನ್ನುವಾಗ ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಸುರೇಖಾಳನ್ನು ಬಂಧಿಸಿ ಕರೆದುಕೊಂಡು ಹೋಗಿದ್ದರು.
ವಿಚಾರಣಾಧೀನ ಖೈದಿಯಾಗಿ ಜೈಲುಪಾಲಾದ ಸುರೇಖಾ ಗೆ ವಿದ್ಯಾನಗರ ಪೊಲೀಸರು ಠಾಣೆಯಲ್ಲಿ ಸಿಕ್ಕಾಪಟ್ಟೆ ಹಲ್ಲೆ ಮಾಡಿದ್ದಾರೆ. ಅವರ ಮೈಮೇಲಿದ್ದ ಒಂದೂವರೆ ತೊಲೆ ಬಂಗಾರ ಕಸಿದುಕೊಂಡಿದ್ದಾರೆ. ಬಂಧನದಿಂದ ತೀವ್ರ ಮನನೊಂದು ಸುರೇಖಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಇದಕ್ಕೆಲ್ಲ ಹುಬ್ಬಳ್ಳಿ ವಿದ್ಯಾನಗರ ಪೊಲೀಸರೇ ಕಾರಣ ಎಂದು ಸುರೇಖಾ ಗಂಡ ಪ್ರತಾಪ್ ಮತ್ತು ಅತ್ತೆ ಜಯಮ್ಮ
ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications