ಧಾರವಾಡ:ಸೇವಾ ನ್ಯೂನ್ಯತೆ ಎಸಗಿದ ಬಿಲ್ಡರ್ಸ್‌ಗೆ ಬಡ್ಡಿ ಸಮೇತ ದಂಡ
ಧಾರವಾಡ, ಜುಲೈ 19: ಧಾರವಾಡದ ಮೃತ್ಯುಂಜಯ ಬಡಾವಣೆ ವಿದ್ಯಾನಗರ ನಿವಾಸಿ ಬಸವರಾಜ ಬಸಾಪುರ ಅವರು ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ ಅಮರಗೋಳದಲ್ಲಿ ಅಭಿವೃದ್ಧಿಪಡಿಸುತ್ತಿರುವ ಲೇಔಟನಲ್ಲಿ ಪ್ಲಾಟ ನಂ.27ನ್ನು 9,95,935 ರೂಪಾಯಿಗೆ ಖರೀದಿಸಿದ್ದರು.
ಆ ಪೈಕಿ ಅವರು 5 ಲಕ್ಷ ಮುಂಗಡ ಕೊಟ್ಟು 29/05/2015 ರಂದು ಖರೀದಿ ಕರಾರು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಸಾಕಷ್ಟು ಕಾಲಾವಕಾಶ ನೀಡಿದರೂ ಪ್ಲಾಟು ಅಭಿವೃದ್ಧಿ ಮಾಡಿರಲಿಲ್ಲ ಹಾಗೂ ದೂರುದಾರರ ಮುಂಗಡ ಹಣವನ್ನು ಸಹ ವಾಪಸ್ಸು ಕೊಟ್ಟಿರಲಿಲ್ಲ. ಆದ್ದರಿಂದ ತಮಗೆ ಎದುರುದಾರ, ಬಿಲ್ಡರ್ ಅವರಿಂದ ಸೇವಾ ನ್ಯೂನ್ಯತೆ ಆಗಿ ತೊಂದರೆಯಾಗಿದೆ ಅಂತಾ ಹೇಳಿ ದೂರುದಾರ ಎದುರುದಾರರ ವಿರುದ್ಧ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ 2015ರಲ್ಲಿ ದೂರುದಾರನಿಂದ 5 ಲಕ್ಷ ಹಣ ಪಡೆದುಕೊಂಡು ಎದುರುದಾರರು ಪ್ಲಾಟ್ ನಿರ್ಮಾಣ ಮಾಡದೇ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ದೂರುದಾರರಿಗೆ ಮೋಸ ಎಸಗಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.
ದೂರುದಾರರು ಸಂದಾಯ ಮಾಡಿದ 5 ಲಕ್ಷ ಮತ್ತು ಅದರ ಮೇಲೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಒಪ್ಪಂದವಾದ 29/05/2015 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 50,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ 10,000 ನೀಡುವಂತೆ ತೀರ್ಪಿನಲ್ಲಿ ಆಯೋಗ ಹೇಳಿದೆ.












Click it and Unblock the Notifications