ಧಾರವಾಡ; ಚುನಾವಣಾ ಕರ್ತವ್ಯ ಲೋಪ, ಹೆಸ್ಕಾಂ ಇಂಜಿನಿಯರ್ ಅಮಾನತು
ಧಾರವಾಡ, ಏಪ್ರಿಲ್ 09; ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿದೆ. ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಿಯೋಜಿತ ಕೆಲಸ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ, ಶೋಕಾಸ್ ನೋಟಿಸ್‌ಗೆ ನಿರ್ಲಕ್ಷ್ಯ ದ ಉತ್ತರ ನೀಡಿರುವುದು, ಚುನಾವಾಣಾ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಕೂಬಳ್ಳಿಯನ್ನು ನವಲಗುಂದ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ನಿಯೋಜಿಸಿ, ಕರ್ತವ್ಯ ನಿರ್ವಹಿಸಲು ಆದೇಶಿಸಲಾಗಿತ್ತು. ನಿಯೋಜಿತ ಕರ್ತವ್ಯ ನಿರ್ವಹಿಸದೇ ನಿರ್ಲಕ್ಷ್ಯ ತೋರಿದ ಮತ್ತು ಶೋಕಾಷ್ ನೋಟಿಸ್‌ಗೆ ನಿಯಮ ಬಾಹಿರವಾಗಿ ಬೇಜವಾಬ್ದರಿ ಉತ್ತರಿಸಿದ ಕಾರಣ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಚುನಾವಣಾ ಆಯೋಗ ಚುನಾವಣೆ ವೇಳಾಪಟ್ಟಿಯನ್ನು ಘೋಷಿಸಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮಾದರಿ ನೀತಿ ಸಂಹಿತೆಯನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುವುದು ಅವಶ್ಯವಿರುವುದರಿಂದ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ವಿವಿಧ ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಿಲಾಗಿದೆ. ಅದರಂತೆ ಹುಬ್ಬಳ್ಳಿ ಹೆಸ್ಕಾಂ ಕಾರ್ಪೋರೇಟ್ ಕಚೇರಿ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಕೂಬ್ಬಳ್ಳಿಯನ್ನು ನಿಯೋಜಿಸಲಾಗಿತ್ತು. ತಂಡದವರು ಅಪ್ಲಿಕೇಶನ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಪ್ರತಿನಿತ್ಯ ಸದರಿ ತಂತ್ರಾಂಶದ ಮೂಲಕ ಸ್ವೀಕೃತವಾಗುವ ದೂರುಗಳನ್ನು ನಿರ್ವಹಿಸುವಂತೆ ಸೂಚಿಸಲಾಗಿತ್ತು.
ನಾಗರಾಜ ಕೂಬಳ್ಳಿ ಅವರು ವಹಿಸಿದ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಛೇರಿಯಿಂದ ಕಾರಣ ಕೇಳಿ ನೀಡಿದ ನೋಟಿಸ್‌ಗೆ ಅಸಂಭದ್ದ ಹೇಳಿಕೆ ನೀಡಿದ್ದಲ್ಲದೇ ಅನಾವಶ್ಯಕ ಪತ್ರ ವ್ಯವಹಾರ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ. ನೋಟಿಸ್‌ಗೆ 24 ಗಂಟೆಯೊಳಗಾಗಿ ಖುದ್ದಾಗಿ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಿದ್ದರೂ ಕೂಡ ನಾಗರಾಜ ದಿನಾಂಕ 7/4/2023ರಂದು ಇ-ಮೇಲ್ ಮೂಲಕ ಲಿಖಿತ ಹೇಳಿಕೆ ಸಲ್ಲಿಸಿದ್ದರು.

ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಾಕಷ್ಟು ಬಾರಿ ದೂರವಾಣಿ ಮೂಲಕ ಹಾಗೂ ವಾಟ್ಸಪ್ ಮುಖಾಂತರ ತಿಳಿಸಿದರೂ ಸಹ ಸದರಿ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳದೇ ಇರುವುದರಿಂದ ಹಾಗೂ ವಹಿಸಿದ ಚುನಾವಣೆ ಕಾರ್ಯವನ್ನು ನಿಗದಿತ ಸಮಯದಲ್ಲಿ ನಿರ್ವಹಿಸದೇ ಇರುವುದರಿಂದ ಮುಖ್ಯ ಚುನಾವಣಾಧಿಕಾರಿಗಳಿಗೆ ಹಾಗೂ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ಸಲ್ಲಿಸಲು ತೊಂದರೆಯಾಗಿತ್ತು.
ಚುನಾವಣಾ ಕೆಲಸಗಳು ಯುದ್ಧೋಪಾದಿಯಲ್ಲಿ ಸಾಗುತ್ತಿದ್ದು, ಚುನಾವಣೆಯಂತಹ ಮಹತ್ತರ ಕಾರ್ಯದಲ್ಲಿ ಈ ಅಧಿಕಾರಿಯು ಬೇಜವಾಬ್ದಾರಿತನ, ಅವಿಧೇಯತೆ ಹಾಗೂ ಸರಕಾರಿ ನೌಕರನಿಗೆ ಸಲ್ಲದ ರೀತಿಯಲ್ಲಿ ನಡೆದು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021 3ನೇ ನಿಯಮದ (1) ನೇ ಉಪನಿಯಮದ ಖಂಡಗಳನ್ನು ಉಲ್ಲಂಘಿಸಿದ್ದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957 ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ, 1951 ರಡಿ ಕಲ್ಪಿಸಿದ ಅವಕಾಶಗಳ ಮೇರೆಗೆ ಶಿಸ್ತು ಕ್ರಮ ಜರುಗಿಸುವುದು ಸಮಂಜಸವಿರುವುದರಿಂದ, ತಕ್ಷಣ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಕೂಬಳ್ಳಿ ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಚುನಾವಣಾ ಕೆಲಸಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯವಹಿಸಿ ಕರ್ತವ್ಯಲೋಪ ಮಾಡುವುದಲ್ಲದೇ ಚುನಾವಣೆ ಕಾರ್ಯಕ್ಕೆ ತೊಂದರೆಯುಂಟು ಮಾಡಿದ್ದಾರೆ. ಇವರ ಮೇಲಿನ ಇಲಾಖಾ ವಿಚಾರಣೆ ಬಾಕಿ ಇರಿಸಿ, ಸರಕಾರಿ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಲಾಗಿದೆ. ಅಮಾನತು ಅವಧಿಯಲ್ಲಿ ತಮ್ಮ ಕಾರ್ಯಾಲಯದ ಮುಖ್ಯಸ್ಥರ ಪರವಾನಿಗೆ ಪಡೆಯದೇ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ಸೂಚನೆ ನೀಡಲಾಗಿದೆ.












Click it and Unblock the Notifications