ಗಾನ ಕೋಗಿಲೆ ಗಂಗೂಬಾಯಿ ಜೀವಿಸಿದ್ದ ಮನೆಯಲ್ಲೀಗ ಶೋಕರಾಗ
ಧಾರವಾಡ,
ಜುಲೈ 10: 'ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು' ಎನ್ನುವಂತೆ ರಾಜ್ಯ ಸರ್ಕಾರ ಹಾಗೂ ಹಾನಗಲ್ ಸಂಗೀತ ಪ್ರತಿಷ್ಠಾನದ ನಿರ್ಲಕ್ಷ್ಯದಿಂದ ಕಿರಾಣಾ ಘರಾಣೆಯ ಶ್ರೇಷ್ಠ ಹಿಂದುಸ್ತಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ನಿವಾಸ ಈಗ ಅಕ್ಷರಶಃ ಹಾಳು ಕೊಂಪೆಯಾಗಿದೆ. ಒಂದು ಕಾಲದಲ್ಲಿ ನಿತ್ಯ ಕಿರಾಣಾ ಘರಾಣೆ ಸಂಗೀತ ಸ್ವರಗಳಿಂದ ಝೇಂಕರಿಸುತ್ತಿದ್ದ ಮನೆಯಲ್ಲೀಗ ಶೋಕರಾಗ ಹೊರಡುತ್ತಿದೆ. id="toptextpromo"> id='are-slot-1' class='oiad oi-axt oiadv'>ಗಾನ
ಗಂಗೆ ಡಾ.ಗಂಗೂಬಾಯಿ ಹಾನಗಲ್ ಜನಿಸಿದ, ಧಾರವಾಡದ ಶುಕ್ರವಾರ ಪೇಟೆಯಲ್ಲಿನ ಅವರ ನಿವಾಸವನ್ನು 2007ರಲ್ಲಿ 25ಲಕ್ಷ ರೂಪಾಯಿಗೆ ಖರೀದಿಸಿದ ಜಿಲ್ಲಾಡಳಿತ 10 ಲಕ್ಷ ರೂಪಾಯಿ ಹಣವನ್ನು ಮನೆ ಖರೀದಿಗೆ ವ್ಯಯಿಸಿದ್ದು, 15 ಲಕ್ಷ ರೂಪಾಯಿ ಹಣದಲ್ಲಿ ಮನೆಯನ್ನು ನವೀಕರಿಸಿ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿತ್ತು. id='are-slot-2' class='oiad oi-axt oiadv'>
ಯಡಿಯೂರಪ್ಪ ಉದ್ಘಾಟನೆ
ಮನೆ ನವೀಕರಣದ ನಂತರ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2008ರ ಸೆಪ್ಟೆಂಬರ್ 23ರಂದು ವಸ್ತು ಸಂಗ್ರಹಾಲಯ ಉದ್ಘಾಟಿಸಿದ್ದರು. ಸಣ್ಣ ಪ್ರಮಾಣದ ದುರಸ್ತಿಯನ್ನು ಪ್ರತಿಷ್ಠಾನದವರು ಹಾಗೂ ದೊಡ್ಡ ಪ್ರಮಾಣದ ದುರಸ್ತಿ ಕೆಲಸವನ್ನು ಸರ್ಕಾರ ಮಾಡಲಿದೆ. ಪ್ರತಿಷ್ಠಾನ ಖಾಸಗಿ ಸಂಸ್ಥೆ, ಬ್ಯಾಂಕ್ ಹಾಗೂ ಸರ್ಕಾರದಿಂದ ಸಹಾಯ ಧನ ಪಡೆದುಕೊಳ್ಳಬಹುದು. ಆದರೆ ಆರ್ಥಿಕ ವ್ಯವಹಾರವನ್ನು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರತಿಷ್ಠಾನದ ಜಂಟಿ ಖಾತೆ ಮೂಲಕವೇ ವ್ಯವಹರಿಸಬೇಕು. ಇದಲ್ಲದೇ ಆಸ್ತಿ ಕರ, ನೀರಿನ ಕರ, ವಿದ್ಯುತ್ ಬಿಲ್ ಹಾಗೂ ಪಾಲಿಕೆ ಕರಗಳನ್ನು ಜಂಟಿ ಖಾತೆಯಿಂದಲೇ ನೀಡುವುದು ಸೇರಿದಂತೆ ಇತರ ಷರತ್ತುಗಳನ್ನು ವಿಧಿಸಿಲಾಗಿತ್ತು.

ಚಟುವಟಿಕೆ ಇಲ್ಲ
ಸಂಗ್ರಹಾಲಯ ಉದ್ಘಾಟನೆಗೊಂಡ ಸುಮಾರು 2 ವರ್ಷಗಳ ಕಾಲ ಅತ್ಯಂತ ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗಿತ್ತು. ಅಲ್ಲಿ ಗಂಗಜ್ಜಿಯ ಶಿಷ್ಯ ಬಳಗದವರು ಸಂಗೀತ ತರಗತಿಗಳನ್ನು ನಡೆಸುತ್ತಿದ್ದರು. ಪರ ಊರುಗಳಿಂದ ಆಗಮಿಸುತ್ತಿದ್ದ ಸಂಗೀತಾಸಕ್ತರು ಸಂಗ್ರಹಾಲಯ ವೀಕ್ಷಣೆಗೆ ಸಹ ಆಗಮಿಸುತ್ತಿದ್ದರು.

ನಿರ್ವಹಣೆ ಇಲ್ಲ
ಆದರೆ, ಕೆಲ ವರ್ಷಗಳಿಂದ ಇಲ್ಲಿ ಯಾವುದೇ ಚಟುವಟಿಕೆಗಳು ನಡೆಯದ ಕಾರಣ ಸರಿಯಾದ ನಿರ್ವಹಣೆ ಇಲ್ಲವಾದಂತಾಗಿದೆ. ಮನೆ ಮೇಲ್ಛಾವಣಿ ಕುಸಿಯುತ್ತಿದ್ದು, ಮಳೆಯಿಂದ ಮೇಲ್ಛಾವಣಿ ಇನ್ನಷ್ಟು ಶಿಥಿಲಗೊಂಡಿದೆ; ಮನೆಯೊಳಗೆ ನೀರು ಸೇರುವಂತಾಗಿದೆ.

ಶಿಥಿಲಗೊಂಡ ಮನೆ
ಅತ್ಯಂತ ವ್ಯವಸ್ಥಿತವಾಗಿದ್ದ ಗಂಗಜ್ಜಿ ನಿವಾಸ ಇದೀಗ ಶಿಥಿಲಾವಸ್ಥೆಗೆ ತಲುಪಿದ್ದರೂ ಪ್ರತಿಷ್ಠಾನದ ಸದಸ್ಯರು ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಇದರಿಂದ ದಿನೇ ದಿನೇ ಮನೆ ಹಾಳಾಗುವ ಸ್ಥಿತಿಗೆ ತಲುಪುತ್ತಿದೆ. ಮನೆಗೆ ಯಾವುದೇ ರಕ್ಷಣೆಯೂ ಇಲ್ಲದ ಕಾರಣದಿಂದ ಕೆಲ ಪರಿಕರಗಳನ್ನು ದೋಚುವ ಸಾಧ್ಯತೆ ಇದ್ದ ಕಾರಣದಿಂದಲೇ ಇದೀಗ ಮನೆಯಲ್ಲಿದ್ದ ಎಲ್ಲ ಪರಿಕರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಭದ್ರವಾಗಿ ಇಡಲಾಗಿದೆ.

ಜಿಲ್ಲಾಡಳತ ಗಮನ ಹರಿಸಲಿ
ಒಂದು ವೇಳೆ ಮನೆ ನಿರ್ವಹಣೆ ಮಾಡುವುದು ಪ್ರತಿಷ್ಠಾನಕ್ಕೆ ಅಸಾಧ್ಯ ಎನಿಸಿದ್ದರೆ ಪ್ರಾರಂಭದಲ್ಲಿಯೇ ಮರಳಿ ಸರ್ಕಾರಕ್ಕೆ ಹಸ್ತಾಂತರಿಸಬಹುದಾಗಿತ್ತು. ಆಗ ಲಕ್ಷಾಂತರ ರೂಪಾಯಿ ಸುರಿದು ನಿರ್ಮಿಸಿದ್ದ ವಸ್ತು ಸಂಗ್ರಹಾಲಯ ಇಂದು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಪ್ರತಿಷ್ಠಾನ ಮಾಡಿರುವ ಯಡವಟ್ಟನ್ನು ಸರಿಪಡಿಸಲು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಂಡು ಮತ್ತೆ ಮನೆ ನವೀಕರಣ ಕಾರ್ಯ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕು.












Click it and Unblock the Notifications