Ganesh festival: ನಿಗಾ, ತಪಾಸಣೆಗಾಗಿ ವಾರ್ಡವಾರು ಸಮಿತಿ ರಚಿಸಿ ಜಿಲ್ಲಾಡಳಿತ ಆದೇಶ
ಧಾರವಾಡ, ಆಗಸ್ಟ್ 22: ರಾಜ್ಯದೆಲ್ಲಡೆ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಈ ಸಂಬಂಧ ರಸಾಯನಿಕದಿಂದ ಬಳಕೆ ಮಾಡಿದ ಗಣೇಶ ವಿಗ್ರಹ ನಿಷೇಧ ಸೇರಿದಂತೆ ಒಂದಷ್ಟು ಸೂಚನೆ, ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಸಿದ್ಧತೆಗಳು ನಡೆದಿವೆ. ಈ ಕುರಿತು ಅಧಿಕಾರಿಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಕ್ತ ನಿರ್ದೇಶನ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಮಾಲಿನ್ಯ (ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಪ್ರಕಾರ ಕಲಂ 33 (ಅ) ಅನ್ವಯ ಜಿಲ್ಲೆಯ ಕೆರೆ, ನದಿ, ಕಾಲುವೆ, ಬಾವಿ ಹಾಗೂ ಇತರೆ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಪ್ ಪ್ಯಾರಿಸ್‍ನಿಂದ ಮಾಡಿರುವ ಹಾಗೂ ರಾಸಾಯನಿಕ, ಕೃತಕ ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ.

ಈ ಕುರಿತು ನಿರಂತರ ತಪಾಸಣೆ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅವಳಿ ನಗರದ ವಾರ್ಡ್ ಮಟ್ಟದಲ್ಲಿ ಹಾಗೂ ಎಲ್ಲ ತಾಲೂಕು ಮಟ್ಟದಲ್ಲಿ ಕಾರ್ಯಪಡೆ ರಚಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ.
ಮಾರಾಟಗಾರರ ಮಾಹಿತಿ ಗೌಪ್ಯ
ಜಿಲ್ಲಾಡಳಿತ, ತಾಲೂಕು ಆಡಳಿತಗಳು ಮತ್ತು ಮಹಾನಗರ ಪಾಲಿಕೆಯಿಂದ ಆರಂಭಿಸಿರುವ ಸಹಾಯವಾಣಿಗಳಿಗೆ, ಸಾರ್ವಜನಿಕರು ಪಿ.ಓ.ಪಿ ವಿಗ್ರಹಗಳನ್ನು ತಯಾರಿಸುವವರ, ಮಾರಾಟಗಾರರ ವಿವರಗಳನ್ನು ತಿಳಿಸಬಹುದು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಮಾಹಿತಿದಾರರು, ಜಿಲ್ಲಾಧಿಕಾರಿಗಳ ಕಛೇರಿ: 0836-244754, ಹು.ಧಾ.ಮ.ನ.ಪಾಲಿಕೆ ಕಛೇರಿ: 9141051611, ಪೆÇಲೀಸ್ ಕಮೀಷನರ್ ಕಛೇರಿ: 0836-2222603 ಮತ್ತು 9480802002ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಮಹಾನಗರದಲ್ಲಿ ವಾರ್ಡ್ ಮಟ್ಟದ ಕಾರ್ಯಪಡೆ
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ವಲಯ ಸಹಾಯಕ ಆಯುಕ್ತರು, ತಹಶೀಲ್ದಾರರು ಅಥವಾ ಕಂದಾಯ ಇಲಾಖೆ ಅಧಿಕಾರಿ, ಸಹಾಯಕ ಪೊಲೀಸ್ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಪರಿಸರ ಅಭಿಯಂತರರು, ಆರೋಗ್ಯ ನೀರಿಕ್ಷಕರು ಇರುವ ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ.
ತಾಲೂಕು ಮಟ್ಟದ ಕಾರ್ಯಪಡೆ
ತಾಲೂಕು ಮಟ್ಟದ ಕಾರ್ಯಪಡೆಯಲ್ಲಿ ತಹಶಿಲ್ದಾರರು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ಮುಖ್ಯಾಧಿಕಾರಿಗಳು, ಸರ್ಕಲ್ ಇನಸ್ಪೆಕ್ಟರ್, ಹೆಸ್ಕಾಂ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿದ್ದು, ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ತಪಾಸಣೆ ನಡೆಸುತ್ತಾರೆ.

ಕಾರ್ಯಪಡೆಗಳು ಪ್ರತಿದಿನ ತಮ್ಮ ವ್ಯಾಪ್ತಿಯಲ್ಲಿ ತಪಾಸಣೆ ಮಾಡಿ, ವಿವರಗಳನ್ನು ಸಲ್ಲಿಸಬೇಕು. ನ್ಯೂನತೆಗಳು ಕಂಡುಬಂದಲ್ಲಿ ಪಿ.ಓ.ಪಿ ವಿಗ್ರಹಗಳನ್ನು ಸೀಜ್ (ಮುಟ್ಟುಗೋಲು) ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಅವರು ತಿಳಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಕ್ರಮ
ನಿಷೇಧಿತ ಪಿಓಪಿ ಗಣೇಶ ಮೂರ್ತಿಗಳಿರುವ ಬಗ್ಗೆ ಮಾಹಿತಿ, ದೂರು ಸ್ವೀಕೃತವಾದರೆ, ಪ್ರತಿದಿನ ಅಧಿಕಾರಿಗಳು ಗಸ್ತು ತಿರುಗಿ ಕ್ರಮಕೈಗೊಳ್ಳಬೇಕು. ತಮ್ಮ ವ್ಯಾಪ್ತಿಗೆ ಒಳಪಡುವ ಗಣೇಶನ ತಯಾರಕರು, ಮಾರಾಟಗಾರರ ಸ್ಥಳಗಳಿಗೆ ಅನೀರಿಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿ, ಅದರ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದರು.
ಪಿ.ಓ.ಪಿ ಮೂರ್ತಿಗಳು ಖಚಿತಪಟ್ಟಲ್ಲಿ ನಿಯಮಾನುಸಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಕ್ರಮ ಜರುಗಿಸಬೇಕು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಧಾರವಾಡದ ಪ್ರಯೋಗ ಶಾಲೆಯ ಸಹಾಯಕ ವೈಜ್ಞಾನಿಕ ಅಧಿಕಾರಿ ಲಲಿತಾ ದೊಡವಾಡ ಅವರನ್ನು ವಿಗ್ರಹಗಳ ವಿಶ್ಲೇಷಣೆಗಾಗಿ ನೇಮಕ ಮಾಡಲಾಗಿದೆ.
ಇನ್ನೂ ವಿಗ್ರಹ ತಯಾರಕರು ಮತ್ತು ಮಾರಾಟಗಾರರು ಕಡ್ಡಾಯವಾಗಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿಗಳಿಂದ ಪೂರಕ ದಾಖಲೆಗಳನ್ನು ಪ್ರಮಾಣಪತ್ರದೊಂದಿಗೆ ಸಲ್ಲಿಸಿ ಅನುಮತಿ ಪತ್ರವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.












Click it and Unblock the Notifications