ಶ್ರೀ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ FIR ದಾಖಲು: ಯಾಕೆ?
ಬೆಂಗಳೂರು, ಮೇ 05: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸಿದ್ದ ಶ್ರೀ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರಿ ಸ್ವಾಮೀಜಿ ವಿರುದ್ಧ ಶನಿವಾರ ದೂರು ದಾಖಲಾಗಿದೆ. ಜಿಲ್ಲೆಯ ನವಲಗುಂದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಎರಡನೇ ಹಂತದಲ್ಲಿ ಕರ್ನಾಟಕ ಲೋಕಸಭಾ ಚುನಾವಣೆ 2024 ಸಂಬಂಧ ಭಾಷಣ ಮಾಡುವ ವೇಳೆ ಮಾಡಿಕೊಂಡ ಯಡವಟ್ಟಿನಿಂದಾಗಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೇ 2ರಂದು ನವಲಗುಂದ ತಾಲೂಕು ಮಾರುಕಟ್ಟೆಯಲ್ಲಿ ಸ್ವಾಭಿಮಾನಿ ಮತದಾರರ ಸಮಾವೇಶ ನಡೆದಿತ್ತು. ಈ ವೇಳೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ಧ ಸಮಾವೇಶದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಪ್ರಮುಖ ಭಾಷಣ ಮಾಡಿದ್ದರು. ಮಾತಿನುದ್ದಕ್ಕೂ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ವಿಭಿನ್ನ ವರ್ಗಗಳ ಮಧ್ಯೆ ವೈರತ್ವ ಮತ್ತು ದ್ವೇಷ ಭಾವನೆಯನ್ನುಂಟು ಮಾಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣಕ್ಕಾಗೇ ಸ್ವಾಮೀಜಿ ವಿರುದ್ಧ ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಕುರುಬ ಸಮುದಾಯದ 42 ವರ್ಷ ಆರ್.ಕುಮಾರಸ್ವಾಮಿ ಎಂಬುವವರು ಎಫ್‌ಐಆರ್ ದಾಖಲಿಸಿದ್ದಾರೆ.
ಭಾಷಣದಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳು, 'ಭಸ್ಮ ಹೋಗಿ ಕುಂಕುಮ ಬಂತು, ಹಾಗೂ ಭಂಡಾರ ಹೋಗಿ ಕುಂಕುಮ ಬಂತು ಶರಣು ಶರಣಾರ್ಥಿ ಹೋಗಿ ಹರಿ ಒಂ ಬಂತು' ಎಂದು ಅವರು ಭಾಷಣ ಮಾಡಿದ್ದರು. ಇದು ವಿಭಿನ್ನ ವರ್ಗಗಳ ಮಧ್ಯೆ ವೈರತ್ವ ಮತ್ತು ದ್ವೇಷ ಭಾವನೆ ಉಂಟು ಮಾಡುತ್ತದೆ ಎಂದು ಆರೋಪಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಕ್ಷೇತರವಾಗಿ ಕಣಕ್ಕಿಳಿದು ಶ್ರೀಗಳು ನಾಮಪತ್ರ ವಾಪಾಸ್
ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳು, ಧಾರವಾಡದ ಲಿಂಗಾಯತರಿಗೆ ಅಪಮಾನ, ಅನ್ಯಾಯವಾಗಿದೆ. ನೀಡಿದ ಭರವಸೆ ನಡೆದುಕೊಂಡಿಲ್ಲ ಎಂದೆಲ್ಲ ಆರೋಪಿಸಿ ಹಾಲಿ ಸಂಸದರ ವಿರುದ್ಧ ಪಕ್ಷೇತರವಾಗಿ ಇದೇ ಲೋಕಸಭಾ ಚುನಾವಣೆಗೆ ಕಣಕ್ಕಿಳಿದಿದ್ದರು.
ನಂತರ ಕೊನೆ ಹಂತದಲ್ಲಿ ನಾಮಪತ್ರ ವಾಪಾಸ್ ಪಡೆದರು. ಶ್ರೀಗಳಿಗೆ ಅವರ ಅಪಾರ ಭಕ್ತ ಸಮೂಹವೇ ಎಚ್ಚರಿಕೆ ಕೊಟ್ಟಿತ್ತು. ರಾಜಕೀಯ ಮಾಡುವುದಾದರೆ ನೀವು ಮಠದಲ್ಲಿರುವುದು ಬೇಡ ಎಂದೆಲ್ಲ ಭಕ್ತರು ಅಸಮಾಧಾನ ಹೊರಹಾಕಿದ್ದರು. ಬಳಿಕ ಶ್ರೀಗಳು ನಾಮಪತ್ರ ವಾಪಾಸ್ ಪಡೆದರು. ಆದಾಗಿಯೂ ಭಾಷಣ ವೇಳೆ ವೈಶಮ್ಯ ಭಾವನೆಯ ಭಾಷಣ ಮಾಡಿದ್ದಾರೆ ಎಂಬ ಆರೋಪ ಎದುರಿಸಿದ್ದಾರೆ.












Click it and Unblock the Notifications