ಬರದ ಜೊತೆಗೆ ಕಳ್ಳರ ಹಾವಳಿಯಿಂದ ಬೇಸತ್ತ ರೈತರು: ಇಷ್ಟು ದಿನ ಪಂಪ್‌ಸೆಟ್..ಈಗ ವಿದ್ಯುತ್ ತಂತಿಗಳೇ ಕಣ್ಮರೆ
ಧಾರವಾಡ, ಅಕ್ಟೋಬರ್ 20: ಧಾರವಾಡ ಜಿಲ್ಲೆಯಲ್ಲಿ ಕಳ್ಳರ ಹಾವಳಿಗೆ ರೈತರು ರೋಸಿ ಹೋಗಿದ್ದು, ಕಳ್ಳರನ್ನು ಹಿಡಿಯಬೇಕಾದ ಪೊಲೀಸರು ಜಾಣಮೌನ ವಹಿಸಿದ್ದಾರೆ. ಇದರ ಪರಿಣಾಮವಾಗಿ ಇಷ್ಟು ದಿನ ರೈತರ ಪಂಪ್ ಸೆಟ್ ಮತ್ತು ಇತರೆ ಪರಿಕರ ಕದಿಯುತ್ತಿದ್ದ ಕಳ್ಳರು ಈಗ ಹೊಲದಲ್ಲಿರುವ ಕರೆಂಟ್ ಕಂಬಗಳ ಮೇಲೇರಿ ವಿದ್ಯುತ್ ತಂತಿಯನ್ನೇ ಕದ್ದುಕೊಂಡು ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬೆಳವಣಿಗೆ ರೈತರಿಗೆ ದೊಡ್ಡ ಆತಂಕ ಮೂಡಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಬರದ ಹೊಡೆತಕ್ಕೆ ನಲುಗಿ ಹೋಗಿರುವ ರೈತರಿಗೆ ಕಳ್ಳರ ಅಟ್ಟಹಾಸ ಮತ್ತಷ್ಟು ಹೊಡೆತ ನೀಡಿದೆ. ಇತ್ತೀಚೆಗೆ ರೈತರ ಜಮೀನಿನಲ್ಲಿರೊ ಕೃಷಿ ಪಂಪ್ ಸೆಟ್‌ಗಳ ಕೇಬಲ್, ಸ್ಟಾರ್ಟರ್ ಸೇರಿದಂತೆ ಪಂಪ್ ಸೆಟ್‌ಗೆ ಸಹಿತ ವಿವಿಧ ಕೃಷಿ ಸಲಕರಣೆಗಳನ್ನು ಹೊತ್ತೊಯ್ಯುತ್ತಿದ್ದ ಕಳ್ಳರು ಈಗ, ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ವಿದ್ಯುತ್ ಕಂಬಗಳನ್ನೇ ಏರಿ, ಅದಕ್ಕೆ ಅಳವಡಿಸಿರೋ ಲೈವ್ ಕರೆಂಟ್ ಸಂಪರ್ಕದ ತಂತಿಗಳನ್ನೇ ಕದ್ದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಸಾಕಷ್ಟು ರೈತರ ಜಮೀನಿನಲ್ಲಿ ಕಳ್ಳತನವಾಗಿದ್ದರೂ ಪೊಲೀಸ್ ಇಲಾಖೆ ಮಾತ್ರ ಒಬ್ಬೆ ಒಬ್ಬರ ಕಳ್ಳನನ್ನು ಹಿಡಿಯುವ ಕೆಲಸ ಮಾಡಿಲ್ಲ. ಈಗ ಅದುವೇ ಕಳ್ಳರಿಗೂ ಧೈರ್ಯ ಬಂದಂತೆ ಮಾಡಿದ್ದು , ಇಷ್ಟು ದಿನ ರೈತರ ಪಂಪ್ ಸೆಟ್ ಸಾಮಗ್ರಿ ಕದಿಯುತ್ತಿದ್ದವರು, ಈಗ ಆ ಪಂಪ್ ಸೆಟ್‌ಗಳಿಗೆ ವಿದ್ಯುತ್ ಒದಗಿಸುವ ತಂತಿಗಳನ್ನೇ ಹೊತ್ತೊಯ್ಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಲೆ ಮೊರಬ ಗ್ರಾಮದ ರೈತರ ಜಮೀನಿನಲ್ಲಿ ಕಂಬಗಳಿಂದಲೇ ಕಳ್ಳರು ವಿದ್ಯುತ್ ತಂತಿಗಳನ್ನು ಕಳ್ಳತನ ಮಾಡಿದ್ದಾರೆ. ತಲೆ ಮೊರಬ ಗ್ರಾಮದಲ್ಲಿ ವಿರೂಪಾಕ್ಷಪ್ಪ ಎಂಬ ರೈತ, ತಮ್ಮ ಕೃಷಿ ಹೊಂಡಕ್ಕೆ ಪಂಪಸೆಟ್ ಅಳವಡಿಸಬೇಕಿತ್ತು. ಅದಕ್ಕಾಗಿ ಮುಖ್ಯ ಟ್ರಾನ್ಸ ಫಾರ್ಮರ್‌ನಿಂದ ತಮ್ಮ ಜಮೀನನವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಅರ್ಜಿ ಹಾಕಿ ಮಂಜೂರಿ ಪಡೆದಿದ್ದರು.
ಈ ಸಂಪರ್ಕಕ್ಕಾಗಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಸಹ ಹೆಸ್ಕಾಂ ಗುತ್ತಿಗೆದಾರರು ಅಳವಡಿಸಿದ್ದರು. ಎರಡು ದಿನ ಕೆಲಸ ಮಾಡಿ, 14 ಕಂಬಗಳಿಗೆ 4 ಲೈನ್ ವಿದ್ಯುತ್ ತಂತಿ ಅಳವಡಿಸಿದ್ದರು. ಕೆಲಸ ಮುಗಿದ ಮಾರನೇಯ ದಿನ ಬಂದು, ಟ್ರಾನ್ಸ್ ಫಾರ್ಮರ್‌ನಿಂದ ವಿದ್ಯುತ್ ಸಂಪರ್ಕ ಕಲ್ಲಿಸುವುದೊಂದೇ ಬಾಕಿ ಇತ್ತು. ಆದರೆ ಕೆಲಸ ಮುಗಿದ ದಿನ ರಾತ್ರಿಯೇ ಕಳ್ಳರು ಬಂದು, ಎಲ್ಲ ಕಂಬಗಳನ್ನು ಏರಿ ವಿದ್ಯುತ್ ತಂತಿ ತೆಗೆದುಕೊಂಡು ಹೋಗಿದ್ದಾರೆ. ಕಂಬಗಳಿಗೆ ಅಳವಡಿಸಿದ್ದ ಸಪೋರ್ಟ್ ಕಪ್‌ಗಳನ್ನು ಮಾತ್ರ ಸ್ಥಳದಲ್ಲಿಯೇ ಎಸೆದು ಹೋಗಿದ್ದಾರೆ.

ಇನ್ನು ಈ ಕುರಿತು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್ ಕೋನರಡ್ಡಿ ಮಾತನಾಡಿದ್ದು, 'ವಇದು ನನ್ನ ಗಮನಕ್ಕೆ ಬಂದಿಲ್ಲ. ಇದರ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಇಷ್ಟು ದಿನ ಕೃಷಿ ಪರಿಕರಗಳನ್ನು ಮಾತ್ರವೇ ಕದ್ದುಕೊಂಡು ಹೋಗುತ್ತಿದ್ದ ಕಳ್ಳರು ಈಗ, ಕಂಬಗಳನ್ನು ಏರಿ ಹೆಸ್ಕಾಂ ವಿದ್ಯುತ್ ತಂತಿಗಳನ್ನೂ ಕದಿಯಲು ಶುರು ಮಾಡಿದ ಬಳಿಕ ರೈತರಲ್ಲಿ ಆತಂಕ ಹೆಚ್ಚಾಗಿದೆ. ಜಮೀನು ಬಿಟ್ಟು ಕದಲದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬರಗಾಲಕ್ಕೆ ತತ್ತರಿಸಿ ಹೋಗಿರುವ ರೈತರಿಗೆ ಈ ಕಳ್ಳರ ಹಾವಳಿ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆಯಾದರೂ, ಪೊಲೀಸ್ ಇಲಾಖೆ ಮಾತ್ರ ಇದರ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.












Click it and Unblock the Notifications