ಮತದಾನ ಜಾಗೃತಿಗಾಗಿ ಕಾರು ಬಿಟ್ಟು ಸೈಕಲ್ ಹತ್ತಿದ ಚುನಾವಣಾ ವೀಕ್ಷಕರು!
ಧಾರವಾಡ, ಏಪ್ರಿಲ್ 30; ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ವೀಕ್ಷಕರಾಗಿ ವಿವಿಧ ಜಿಲ್ಲೆಗಳಿಗೆ ಚುನಾವಣಾ ವೀಕ್ಷಕರು ಆಗಮಿಸಿದ್ದಾರೆ. ಮೇ 10ರಂದು ನಡೆಯುವ ಚುನಾವಣೆಗೆ ಬೇರೆ-ಬೇರೆ ರಾಜ್ಯಗಳ ಐಎಎಸ್, ಐಆರ್‌ಎಸ್ ಅಧಿಕಾರಿಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇವರು ಸಹ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಧಾರವಾಡ ಜಿಲ್ಲೆಯ ವಿವಿಧ ವಿಧಾನಸಭಾ ಮತಕ್ಷೇತ್ರಗಳಿಗೆ ಚುನಾವಣಾ ಮತ್ತು ವೆಚ್ಚ ವೀಕ್ಷಕರಾಗಿ ಆಗಿಮಿಸಿರುವ ಬೇರೆ-ಬೇರೆ ರಾಜ್ಯಗಳ ಹಿರಿಯ ಐಎಎಸ್, ಐಆರ್‌ಎಸ್ ಅಧಿಕಾರಿಗಳು ಭಾನುವಾರ ಸೈಕಲ್ ಜಾಥಾ ನಡೆಸಿದರು. ಈ ಮೂಲಕ ಜನರಿಗೆ ಮತದಾನದ ಮಹತ್ವ ಸಾರಿದರು. ಮತದಾನದ ಮಹತ್ವ, ಮತದಾರನ ಕರ್ತವ್ಯದ ಬಗ್ಗೆ ಮಾಹಿತಿ ನೀಡಿದರು.

ಭಾನುವಾರ ಅಧಿಕಾರಿಗಳು ಧಾರವಾಡದಿಂದ ಹುಬ್ಬಳ್ಳಿವರೆಗೆ ಸೈಕಲ್ ಜಾಥಾ ನಡೆಸಿದರು. ಬೆಳಗ್ಗೆ 6 ಗಂಟೆಗೆ ಧಾರವಾಡ ಕೋರ್ಟ್ ಸರ್ಕಲ್‌ನಲ್ಲಿ ಎಲ್ಲ ವೀಕ್ಷಕರು ಜನರ ಕೈ ಕುಲುಕಿ, ತಪ್ಪದೇ ಮೇ 10ರಂದು ಮತದಾನ ಮಾಡುವಂತೆ ಕರೆ ನೀಡಿದರು. ಧಾರವಾಡ-ಹುಬ್ಬಳ್ಳಿ ದಾರಿಯುದ್ದಕ್ಕೂ ಅಲ್ಲಲ್ಲಿ ನಿಂತು, ಗುಂಪು ಸೇರಿದ್ದ ಜನರಿಗೆ ಮತ್ತು ಬಿ. ಆರ್. ಟಿ. ಎಸ್. ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಮತದಾನದ ತಿಳುವಳಿಕೆ ಕೊಟ್ಟರು.
ಜಿಲ್ಲಾಧಿಕಾರಿಗಳ ಮಾರ್ಗದರ್ಶನ; ಜಿಲ್ಲಾ ಚುನಾವಣಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾರ್ಗದರ್ಶನದಲ್ಲಿ ಧಾರವಾಡ ಜಿಲ್ಲಾಡಳಿತದಿಂದ ಸೈಕಲ್ ಜಾಥಾದ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅಧಿಕಾರಿಗಳು ಕಾರು ಬಿಟ್ಟು ಸೈಕಲ್ ಏರಿ ಜನರಿಗೆ ಮತದಾನದ ಮಹತ್ವ ತಿಳಿಸಿದರು. ಜನರು ಸಹ ಅಧಿಕಾರಿಗಳ ಕಾರ್ಯಕ್ಕೆ ಮುಚ್ಚುಗೆ ಸೂಚಿಸಿದರು. ಧಾರವಾಡ ಸೈಕ್ಲಿಂಗ್ ತಂಡದ ಸದಸ್ಯರು ಸಹ ಅಧಿಕಾರಿಗಳ ಜೊತೆ ಕೈ ಜೋಡಿಸಿದರು.

ಈ ಸೈಕಲ್ ಜಾಥಾದಲ್ಲಿ ಸೈಕಲ್ ಜಾಥಾದಲ್ಲಿ ನವಲಗುಂದ ಕ್ಷೇತ್ರ ಮತ್ತು ಕುಂದಗೋಳ ಕ್ಷೇತ್ರದ ವೀಕ್ಷಕರಾದ ಆದಿತ್ಯ ಕುಮಾರ್ ಆನಂದ್, ಧಾರವಾಡ ವಿಧಾನಸಭಾ ಕ್ಷೇತ್ರ ಹಾಗೂ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ವೀಕ್ಷಕರಾದ ಪವನ್ ಕುಮಾರ್ ಸೇನ್, ಹುಬ್ಬಳ್ಳಿ-ಧಾರವಾಡ ಕೇಂದ್ರ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಮುತ್ತು ಕೃಷ್ಣನ್ ಶಂಕರನಾರಾಯಣನ್, ಕಲಘಟಗಿ ಕ್ಷೇತ್ರದ ವೀಕ್ಷಕರಾದ ಮನೋಜ್ ಪುಷ್ಪ ಪಾಲ್ಗೊಂಡಿದ್ದರು.
ಮೇ 10ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಎಲ್ಲಾ ಅರ್ಹ ಮತದಾರರು ತಪ್ಪದೇ ಮತದಾನ ಮಾಡಬೇಕು ಎಂದು ಚುನಾವಣಾ ಆಯೋಗ ಕರೆ ನೀಡಿದೆ. ಈಗಾಗಲೇ 12ಡಿ ಅರ್ಜಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಏ. 29, 30 ಮತ್ತು ಮೇ 1ರಂದು ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಕಾರ್ಯದಲ್ಲಿರುವ ಸಿಬ್ಬಂದಿಗಳು ಮೇ 2 ರಿಂದ 4ರ ತನಕ ಅಂಚೆ ಮತದಾನ ಮಾಡಲಿದ್ದಾರೆ.
ಚುನಾವಣಾ ಆಯೋಗದಿಂದ ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಮತದಾರರ ಪಟ್ಟಿಯನ್ನು ಪ್ರತಿಯೊಬ್ಬ ಮತದಾರರು ಪರಿಶೀಲಿಸಿ, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನಮೂದು ಇರುವ ಕುರಿತು ಖಾತ್ರಿ ಪಡಿಸಿಕೊಳ್ಳಲು ಇದರಲ್ಲಿ ಅವಕಾಶ ನೀಡಲಾಗಿದೆ. VOTER HELPLINE APP ಮತ್ತು www.nvsp.in ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಕುರಿತು ಜನರು ಮಾಹಿತಿ ಪಡೆಯಬಹುದಾಗಿದೆ.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ 8ರ ಸಾಯಂಕಾಲ 6 ಗಂಟೆಯಿಂದ ಮೇ 10ರ ಸಾಯಂಕಾಲ 6 ಗಂಟೆಯವರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ನಡೆಸುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.











Click it and Unblock the Notifications